ಬೆಂಗಳೂರು: ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಮತ್ತು ಹಿತಾಸಕ್ತಿಗಳಿಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ದೊರಕುವಂತೆ ಪ್ರತ್ಯೇಕ ಅನಿವಾಸಿ ಕನ್ನಡಿಗರ ಸಚಿವಾಲಯ ರಚಿಸಬೇಕು ಎಂದು ಒತ್ತಾಯಿಸಿ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಗಿದೆ.

ಟ್ವಿಟರ್ (ಎಕ್ಸ್) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನ ನಡೆಸಲಾಗುತ್ತಿದ್ದು, ವಿಶ್ವದಾದ್ಯಂತ ಇರುವ ಕನ್ನಡ ಸಂಘಟನೆಗಳು, ಅನಿವಾಸಿ ಕನ್ನಡಿಗರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ. ಭಿಯಾನದ ಮಾಹಿತಿ ಹಂಚಿಕೊಳ್ಳಲು ವಿಶೇಷ ಗ್ರೂಪ್‌ವೊಂದನ್ನು ರಚಿಸಲಾಗಿದ್ದು, ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಈ ಅಭಿಯಾನಕ್ಕೆ ಸೇರಿಸಿಕೊಳ್ಳುವಂತೆ ಸಂಘಟನೆಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಅನಿವಾಸಿ ಕನ್ನಡಿಗರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಕಲ್ಯಾಣಕ್ಕೆ ಆದ್ಯತೆ ನೀಡುವ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ಬಂದರೆ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿ ಪರಿಹಾರ ಸಾಧ್ಯವಾಗಲಿದೆ ಎಂದು ಅಭಿಯಾನದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಹಾಲೆಂಡ್‌ನ ಕನ್ನಡ ಬಳಗ ಹಾಲೆಂಡ್‌ನ ಉದ್ಯಮಿ ಅಶೋಕ ಹಟ್ಟಿ ಸೇರಿದಂತೆ ಹಲವು ಅನಿವಾಸಿ ಕನ್ನಡಿಗರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಕರ್ನಾಟಕ ಸರ್ಕಾರವು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.







