ಅಯೋಧ್ಯೆ: ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣದ ವಿಚಾರಣೆ ಚುರುಕುಗೊಂಡಿರುವ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ರಾಮಮಂದಿರ ಟ್ರಸ್ಟ್‌ನ ಪ್ರಮುಖ ಸದಸ್ಯರಾದ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ದೇಣಿಗೆ ಹಣದ ದುರುಪಯೋಗ ಆರೋಪದ ಸಂಬಂಧ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಈಗಾಗಲೇ ಅನಿಲ್ ಮಿಶ್ರಾ ಅವರನ್ನು ವಿಚಾರಣೆ ನಡೆಸಿದೆ. ಅಲ್ಲದೇ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಸಹಾಯಕ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದೆ.

ಈ ಬೆಳವಣಿಗೆ ಬೆನ್ನಲ್ಲೇ ರಾಮಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಎಸ್‌ಐಟಿ ತನಿಖೆ ಮುಂದುವರಿದಿದ್ದು, ಪ್ರಾಥಮಿಕ ವರದಿ ಸಲ್ಲಿಕೆಯಾದ ಬಳಿಕ ಈ ರಾಜೀನಾಮೆಗಳು ಹೊರಬಿದ್ದಿವೆ. ಈ ಬೆಳವಣಿಗೆ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.







