ಈ ತಿಂಗಳು 26ರಂದು ದೇವನಹಳ್ಳಿಯಲ್ಲಿ ಹಾಗೂ 29ರಂದು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ಗಾಂಧಿ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ತಿಂಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ.
ನವೆಂಬರ್ ನಲ್ಲಿ ಚಿಕ್ಕಬಳ್ಳಾಪುರ ವ್ಯಾಪ್ತಿಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ 10ರಿಂದ ಸಂಜೆ 6ರವರೆಗೂ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿಎಲ್ ಪಿ ನಾಯಕರಾದ ಸಿದ್ದರಾಮಯ್ಯ, ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಅವರು ಭಾಗವಹಿಸಲಿದ್ದಾರೆ.
ಇದರಲ್ಲಿ ವಾರ್ಡ್, ತಾಲೂಕು, ಜಿಲ್ಲಾ ಮಟ್ಟದ ನಾಯಕರು, ಅಭ್ಯರ್ಥಿಗಳು ಭಾಗವಹಿಸಲಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಲು ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ದೇವರಾಜ ಅರಸು ಅವರ ಕಾಲದಲ್ಲಿ ಹಾಗೂ ಇಂದಿರಾ ಅವರು ಸೋತ ನಂತರ ಈ ರೀತಿ ಕಾರ್ಯಕ್ರಮ ಮಾಡಿ ಪಕ್ಷ ಸಂಘಟನೆ ಮಾಡಿದ್ದೆವು. ಆಗ ಪಕ್ಷ ವಿಧಾಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿತ್ತು.
ಈಗ ಹಣ ಹಾಗೂ ಜಾತಿ ಚುನಾವಣೆಯಲ್ಲಿ ಪ್ರಾಧಾನ್ಯತೆ ಪಡೆದ ವಿಕೃತ ರಾಜಕಾರಣ ಬೆಳೆದಿವೆ. ಇದಕ್ಕೆ ಕಾರಣ ಬಿಜೆಪಿ. ಅವರು ಬ್ರಿಟೀಷರಂತೆ ಮತಗಳು, ಧರ್ಮಗಳ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಇದು ಯಾವಾಗಲೂ ಯಶಸ್ವಿಯಾಗುವುದಿಲ್ಲ. ಪ್ರಧಾನಿ ಖ್ಯಾತಿ ಕುಸಿತವೇ ಇದಕ್ಕೆ ಸಾಕ್ಷಿ ಎಂದು ಈ ವೇಳೆ ಅವರು ಹೇಳಿದ್ದಾರೆ. ಜಿಎಸ್ ಟಿ, ನೋಟು ರದ್ಧತಿ ಮೂಲಕ ಸರ್ಕಾರ ಜನರ ಮೇಲೆ ಬರೆ ಎಳೆದಿದೆ. ರಾಷ್ಟ್ರದ ಸಂಪತ್ತಿನಲ್ಲಿ ಶೇ.50ರಷ್ಟು ದೇಶದ ಶೇ.10ರಷ್ಟು ಶ್ರೀಮಂತರ ಕೈಯಲ್ಲಿದೆ. ಜಿಡಿಪಿ ಋಣಾತ್ಮಕ ಹಂತ ತಲುಪಿದೆ, ನಿರುದ್ಯೋಗ ಹೆಚ್ಚಾಗಿದೆ. ಆದರೆ 14 ಕೋಟಿ ಉದ್ಯೋಗ ಕಳೆದುಕೊಂಡಿದ್ದೇವೆ. ಕಪ್ಪು ಹಣ ತಂದು 15 ಲಕ್ಷ ಖಾತೆಗೆ ಹಾಕುತ್ತೇವೆ ಎಂದು ಜನರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾನು ಕಾನೂನು ಸಚಿವ ಆಗಿದ್ದಾಗ ಒಂದು ಸಮಿತಿ ಮಾಡಿದ್ದೆವು. ನಂತರ 2014ರಲ್ಲಿ ಲೋಕಪಾಲ ಮಸೂದೆ ಜಾರಿಗೆ ತಂದಿದ್ದೆವು. ನಾವು ಅದಕ್ಕೆ ಬದ್ಧರಾಗಿದ್ದೆವು. ಆದರೆ 2017ರವರೆಗೆ ಲೋಕಪಾಲರ ನೇಮಕ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತ್ತು. ನಂತರ ಲೋಕಪಾಲರನ್ನು ನೇಮಕ ಮಾಡಿತ್ತು.
ರಾಜ್ಯದಲ್ಲೂ ಲೋಕಾಯುಕ್ತರು ಇಲ್ಲ, ಕೇಂದ್ರದಲ್ಲಿ ಲೋಕಪಾಲರೂ ಇಲ್ಲ. ಭ್ರಷ್ಟಾಚಾರದ ಲಾಭ ಪಡೆದು ಅಧಿಕಾರಕ್ಕೆ ಬಂದ ಮೋದಿ, ಕೇಜ್ರಿವಾಲ್ ಇಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಮೌನವಾಗಿದ್ದಾರೆ. ಚುನಾವಣಾ ಬಾಂಡ್ ಎಲ್ಲ ಪಕ್ಷಗಳ ಆದಾಯ ಕಡಿಮೆ ಮಾಡಿದರೆ, ಬಿಜೆಪಿಯದ್ದು ಊಹೆಗೂ ಮೀರಿ ಬೆಳೆಯುತ್ತಿದೆ. ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಇದು ಸಾಧ್ಯ ಎಂದು ಹೇಳಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹ ಪ್ರಕರಣ 300 ಪಟ್ಟು ಹೆಚ್ಚಾಗಿದೆ. ಸುಪ್ರೀಂಕೋರ್ಟ್ ಇಡಿ, ಸಿಬಿಐ ಇದರ ದುರ್ಬಳಕೆಗೆ ಛಿಮಾರಿ ಹಾಕಿದೆ. ಇಡಿ, ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆ ರಾಜಕೀಯ ಅಸ್ತ್ರವಾಗಿವೆ. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿ ತತ್ವಗಳನ್ನು, ಗಾಂಧಿ ಕೊಂದವರ ಪೂಜಿಸಲಾಗುತ್ತಿದೆ. ಗಾಂಧಿ ತತ್ವ ರಕ್ಷಣೆಯಾಗಬೇಕಾದರೆ ಈ ಕಾರ್ಯಕ್ರಮ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಅಧ್ಯಕ್ಷರು ಉತ್ತಮ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಕಾರ್ಯಾಧ್ಯಕ್ಷರುಗಳು ಕೂಡ ರಾಜ್ಯಾದ್ಯಂತ ಸುತ್ತಿ ಚುರುಕಿನ ಕೆಲಸ ಮಾಡುತ್ತಿದ್ದಾರೆ. ದೇಶ ಬದಲಾಗವೇಕಾದರೆ ನಾವು ಬದಲಾಗಬೇಕು ಎನ್ನುವ ಹಾಗೆ, ನಾವು ನಿಸ್ವಾರ್ಥವಾಗಿ ಕೆಲಸ ಮಾಡಬೇಕು. ಹೀಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ಪ್ರೋತ್ಸಾಹ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ಇದು ಅಧಿಕಾರ ಹಿಡಿಯುವುದಕ್ಕಿಂತ, ಗಾಂಧಿ, ನೆಹರು ಅವರ ತತ್ವ ಉಳಿಸುವ ಕಾರ್ಯವಾಗಿದೆ ಎಂಧು ಅವರು ಹೇಳಿದ್ದಾರೆ.
ಇಂದಿರಾಗಾಂಧಿ ಬ್ಯಾಂಕ್ ರಾಷ್ಟೀಕರಣ ಮಾಡಿದರೆ, ಇವರು ಬ್ಯಾಂಕ್ ವಿಲೀನ ಮಾಡುತ್ತಿದ್ದಾರೆ. ಕೈಗಾರಿಕೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಸಮಾಜವನ್ನು ಮತ್ತೆ ಕಟ್ಟಬೇಕಾದರೆ ಗಾಂಧಿ ತತ್ವ ಅಗತ್ಯವಿದೆ. ಕಾಂಗ್ರೆಸ್ ಅನ್ನು ಮೊದಲು ಬದಲಿಸಿಕೊಂಡು ನಂತರ ದೇಶ ಹಾಗೂ ಸಮಾಜ ಬದಲಿಸೋಣ. ಈ ಉದ್ದೇಶದಿಂದ ಗಾಂಧಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಸುದ್ಧಿಘೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷರಾದ ರಾಮಲಿಂಗರೆಡ್ಡಿ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಅವರು ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ. ಮೊದಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಗಾಂಧಿ ನಡಿಗೆ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ನಡೆಸಲು ನಮ್ಮ ಸಿಎಲ್ ಪಿ ನಾಯಕರು ಹಾಗೂ ಅಧ್ಯಕ್ಷರ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಹಾಗೂ ದೇಶದಲ್ಲಿ ರಾಜಕಾರಣ ಹದಗೆಟ್ಟಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸವದರ ಕೈಯಲ್ಲಿ ದೇಶದ ಅಧಿಕಾರ ಸಿಕ್ಕಿದೆ. ದೇಶಕ್ಕೆ ಸ್ವಾತಂತ್ರ್ಯ ತಂದವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ, ಅಪಪ್ರಚಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ .
ಕಾಂಗ್ರೆಸ್, ಗಾಂಧಿ, ನೆಹರು, ಇಂದಿರಾಗಾಂಧಿ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯ ಸುಳ್ಳುಗಳು ಜನರಿಗೆ ಮನದಟ್ಟಾಗುತ್ತದೆ. ಹಾಗಂತ ನಾವು ಸುಮ್ಮನೆ ಕೂರದೆ, ಜನರಲ್ಲಿ ಅರಿವು ಮೂಡಿಸಲು ನಾವು ಕೂಡ ಪ್ರಯತ್ನ ಮಾಡಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹ್ಮದ್ ಮಾಜಿ ಮುಖ್ಯಮಂತ್ರಿಗಳು ‘ಗಾಂಧಿ ನಡಿಗೆ’ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲ್ಲಿ ಕಾಂಗ್ರೆಸ್ ತತ್ವ, ಸಿದ್ಧಾಂತ, ಕೊಡುಗೆ, ವಿಚಾರಧಾರೆ ವಿವರಿಸಲಾಗುವುದು. ಆ ಮೂಲಕ ಅವರು ಜನರಿಗೆ, ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಲಾಗುತ್ತದೆ.
ಕಾಂಗ್ರೆಸ್ ವತಿಯಿಂದ ಮುಂದಿನ ತಿಂಗಳು ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಪಂಚಾಯ್ತಿ, ಬ್ಲಾಕ್ ಹಾಗೂ ಗಾಂಧೀಜಿ ಕೊಡುಗೆ, ಹೋರಾಟ ಎಲ್ಲವನ್ನು ಜನರಿಗೆ ವಿವರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾದರೂ ಈ ಸರ್ಕಾರ ಟೆಕ್ ಆಫ್ ಆಗಿಲ್ಲ. ಸಿಎಂ ಬೊಮ್ಮಾಯಿ ಅವರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಬಿಜೆಪಿ ಮನೆಯೊಂದು ಮೂರು ಬಾಗಿಲಂತಾಗಿದೆ. ಧವಳ ಗಿರಿ, ಕೇಶವ ಕೃಪ ಹಾಗೂ ದೆಹಲಿ ಹೈಕಮಾಂಡ್ ನಡುವೆ ಸರ್ಕಾರ ನಲುಗುತ್ತಿದೆ.
ಕಾಂಗ್ರೆಸ್ ಶಾಸಕರು ಮುಂಬರುವ ದಿನಗಳಲ್ಲಿ ಬಿಜೆಪಿ ಸೇರುತ್ತಾರೆ ಅಂತ ಹೇಳುತ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅವರು ಭ್ರಮೆಯಲ್ಲಿದ್ದಾರೆ. ಅವರು ಆತಂತ್ರಕ್ಕೆ ಸಿಲಿಕಿರುವುದರಿಂದ ಇಂತಹ ಹೇಳಿಕೆ ನೀಡಿದ್ದಾರೆ. ಜನರಿಗೆ ಸ್ವರ್ಗ ನೀಡುತ್ತಾರೆ ಎಂದು ಹೇಳಿದ್ದ ಬಿಜೆಪಿ ಜನರಿಗೆ ನರಕ ತೋರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.