——-ನಾ ದಿವಾಕರ——–
ಮನರಂಜನೆಯಾಗಲೀ ಅಪರಾಧಗಳಾಗಲೀ ಮಹಿಳೆಯೇ ಏಕೆ ಬಳಕೆಯ ವಸ್ತುವಾಗಿ ಕಾಣುತ್ತಾಳೆ

ಕೇಂದ್ರ ಬಿಜೆಪಿ ಸರ್ಕಾರದ “ ಬೇಟಿ ಪಡಾವೋ ಬೇಟಿ ಬಚಾವೋ “ ಕಾರ್ಯಕ್ರಮ ಒಂದು ಉದಾತ್ತ ಚಿಂತನೆಯ ಮುಂದುವರಿಕೆ. ಮಹಿಳೆಯ ಶಿಕ್ಷಣದ ಬಗ್ಗೆ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಸಮಾಜ ಸುಧಾರಕರು ಹೇಳುತ್ತಲೇ ಬಂದಿದ್ದಾರೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಇಡೀ ಸಮಾಜ ಸುಶಿಕ್ಷಿತವಾದಂತೆ ಎಂಬ ವಿಶ್ವಾಸವನ್ನು ಫುಲೆ, ಅಂಬೇಡ್ಕರ್, ಗಾಂಧಿ, ಪೆರಿಯಾರ್ ಮೊದಲಾದ ಚಿಂತಕರು ಮತ್ತಷ್ಟು ವಿಸ್ತರಿಸಿ, ಮಹಿಳಾ ಸಬಲೀಕರಣಕ್ಕೆ, ಮಹಿಳೆಯ ಘನತೆ ಗೌರವಗಳನ್ನು ಕಾಪಾಡುವುದಕ್ಕೆ ಶಿಕ್ಷಣವೇ ಒಂದು ಪ್ರಬಲ ಅಸ್ತ್ರ ಎಂದೂ ಹೇಳಿರುವುದನ್ನು ಗಮನಿಸಬಹುದು. ಈ ಆಶಯಗಳಿಗೆ ಪೂರಕವಾಗಿ ಭಾರತದ ಸಂವಿಧಾನವೂ ಮಹಿಳಾ ಸಬಲೀಕರಣವನ್ನು ಹಲವು ಆಯಾಮಗಳಲ್ಲಿ ವ್ಯಾಖ್ಯಾನಿಸಿದ್ದು, ಇಂದು ಭಾರತದ ಮಹಿಳಾ ಸಂಕುಲ ವಿಶ್ವದ ಬೌದ್ಧಿಕ ಜ್ಞಾನಶಾಖೆಗಳಲ್ಲಿ , ಅತ್ಯುನ್ನತ ವಿಜ್ಞಾನ ಕ್ಷೇತ್ರದಲ್ಲಿ, ರಾಜಕೀಯ ವಲಯದಲ್ಲಿ ಹಾಗೂ ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಆದ ಗೌರವಯುತ ಸ್ಥಾನ ಪಡೆದುಕೊಂಡಿದೆ.

ಈ ಹೆಮ್ಮೆಯ ಬೆಳವಣಿಗೆಯೊಂದಿಗೆ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಲೇ ಆಧುನಿಕ ಭಾರತೀಯ ಸಮಾಜ ಮಹಿಳಾ ಸಂಕುಲದತ್ತ ನೋಡುವ ದೃಷ್ಟಿಕೋನವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಮ್ಮ ದೇಶದಲ್ಲಿ ನೈಜ-ಮೌಲ್ಯಯುತ ಶಿಕ್ಷಣ ಬೇಕಿರುವುದು ಮೂಲತಃ ಪುರುಷ ಸಮಾಜಕ್ಕೆ ಎನ್ನುವುದು ಸ್ಪಷ್ಟವಾಗುತ್ತದೆ. ಸಮಾನತೆ, ಸಬಲೀಕರಣ ಮುಂತಾದ ಉನ್ನತಾದರ್ಶದ ಮಾತುಗಳ ನಡುವೆಯೇ ಭಾರತೀಯ ಸಮಾಜದ ಒಳಹೊಕ್ಕು ನೋಡಿದಾಗ ಅಲ್ಲಿ ಮಹಿಳೆ ತನ್ನ ಜೈವಿಕ ಅಸ್ಮಿತೆಯನ್ನು/ಭೌತಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೂ ಪರದಾಡುತ್ತಿರುವ ಚಿತ್ರಣವನ್ನು ಕಾಣಬಹುದು. ಚಂದ್ರಯಾನದಲ್ಲಿ ಹೆಜ್ಜೆಯೂರಿದ ಮಹಿಳೆಯನ್ನು ವೈಭವೀಕರಿಸುತ್ತಲೇ ವಿಕೃತ ಪುರುಷ ಸಮಾಜದಿಂದ ಬೆತ್ತಲೆಯಾಗುವ ಮಹಿಳೆಯತ್ತ ಕಣ್ಣೆತ್ತಿಯೂ ನೋಡದ ಒಂದು ಕ್ರೂರ ಮನಸ್ಥಿತಿಯನ್ನು ಅಲ್ಲಿ ಗಮನಿಸಬಹುದು. ಮಹಿಳೆ ಎಂಬ ಜೀವಿಯನ್ನು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಾಂಪ್ರದಾಯಿಕ-ಆಧುನಿಕ ನೆಲೆಗಳಲ್ಲಿ ಔನ್ನತ್ಯಕ್ಕೇರಿಸುವ ಸಮಾಜವೇ ಈ ಜೈವಿಕ ಅಸ್ಮಿತೆಯು ಹಲ್ಲೆಗೊಳಗಾದಾಗ, ದೌರ್ಜನ್ಯಕ್ಕೀಡಾದಾಗ, ಅಪಮಾನಗಳನ್ನೆದುರಿಸಿದಾಗ ಕಣ್ಮುಚ್ಚಿ ಕೂರುವುದು ಈ ಬೌದ್ಧಿಕ ಕ್ರೌರ್ಯದ ಸಂಕೇತವಾಗಿ ಕಾಣುತ್ತದೆ. ಪಿತೃಪ್ರಧಾನ ಮೌಲ್ಯಗಳ ಬೇರುಗಳು ಅಷ್ಟು ಗಟ್ಟಿಯಾಗಿವೆ.
ಭೌತಿಕ ವಸ್ತುವಾಗಿ ಮಹಿಳಾ ಅಸ್ಮಿತೆ
ಭಾರತೀಯ ಸಿನಿಮಾ ಪ್ರಪಂಚದಲ್ಲಿ ನೂರಾರು ನಿರ್ಮಾಪಕ-ನಿರ್ದೇಶಕ-ನಟರಿಗೆ ಮನರಂಜನೆಯ ವಸ್ತುವಾಗಿ, ಮಾರುಕಟ್ಟೆಯಲ್ಲಿ ಅತಿಹೆಚ್ಚು ಮೌಲ್ಯ ಪಡೆಯುವ ʼ ಮಂಗಳ ಸೂತ್ರ ʼ ಈಗ ರಾಜಕೀಯವಾಗಿಯೂ ತನ್ನ ಅಸ್ತಿತ್ವವನ್ನು ಪಡೆದುಕೊಂಡಿರುವುದು ನವ ಭಾರತದ ಆಧುನಿಕತೆ(?)ಯ ದ್ಯೋತಕವೇ ? ಮಹಿಳೆಯನ್ನು ಪಿತೃಪ್ರಧಾನ ಯಜಮಾನಿಕೆಗೆ-ಗಂಡಾಳ್ವಿಕೆಗೆ ಬಂಧಿಸುವ ಒಂದು ಸಾಂಪ್ರದಾಯಿಕ ಸೂತ್ರವಾಗಿರುವ ʼಮಂಗಳ ಸೂತ್ರʼ ಒಂದೆಡೆ ಪುರುಷಾಧಿಪತ್ಯವನ್ನು ವೈಭವೀಕರಿಸಲು ಬಳಸುವ ಸಾಧನವಾಗಿದ್ದರೆ ಮತ್ತೊಂದೆಡೆ ಸಾಮಾನ್ಯ ಮಹಿಳೆಯನ್ನು ಭ್ರಮಾಧೀನರನ್ನಾಗಿಸುವ ಅಸ್ತ್ರವಾಗಿಯೂ ಬಳಕೆಯಾಗಿದೆ. ಈ ಸೂತ್ರಕ್ಕೆ ಪಾವಿತ್ರ್ಯತೆಯನ್ನು ಆರೋಪಿಸುವ ಮೂಲಕ ಆಧುನಿಕ-ಸುಶಿಕ್ಷಿತ ಸಮಾಜವೂ ಸಹ ಗಂಡು-ಹೆಣ್ಣು ಸಂಬಂಧಗಳಲ್ಲಿ ಇರಬೇಕಾದ ಲಿಂಗ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದೆ. ಮಾಂಗಲ್ಯದ ಸುತ್ತ ಹೆಣೆದ ಸಿನಿಮಾ ಕತೆಗಳು ಅಪಾರ ಮೊತ್ತದ ಹಣವನ್ನು ಬಾಚಿಕೊಂಡಿರುವುದರೊಂದಿಗೇ ಇಡೀ ಸಮಾಜವನ್ನು ಮತ್ತದೇ ಪ್ರಾಚೀನ ಪಿತೃಪ್ರಧಾನ ಮನಸ್ಥಿತಿಗೆ ಕಟ್ಟಿಹಾಕುವ ಪ್ರಬಲ ಅಸ್ತ್ರಗಳಾಗುತ್ತವೆ. ಭಾರತದ ಅಧಿಕಾರ ರಾಜಕಾರಣ ಇದೇ ಸಿದ್ಧಮಾದರಿಯನ್ನು ಅನುಸರಿಸುತ್ತಿರುವುದು ದುರಂತ ಅಲ್ಲವೇ ?

ಈ ನಡುವೆಯೇ ಲೋಕಸಭಾ ಚುನಾವಣೆಗಳು ಮಹಿಳಾ ಅಸ್ಮಿತೆಯನ್ನು ಮತ್ತೊಮ್ಮೆ ಕಟಕಟೆಯಲ್ಲಿ ನಿಲ್ಲಿಸಿದ್ದು , ರಾಜಕೀಯ ಪ್ರಾತಿನಿಧ್ಯದ ಮೂಲಕ ಮಹಿಳೆಗೆ ನ್ಯಾಯ ಒದಗಿಸುವ ಬದಲು, ಮಹಿಳಾ ಅಸ್ಮಿತೆಯನ್ನು ಪ್ರಚಾರದ ಸರಕಿನಂತೆ ಬಳಸುವ ಹೊಸ ಪರಂಪರೆಯನ್ನು ಹುಟ್ಟುಹಾಕಿದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ-ಶಕ್ತಿ ಯೋಜನೆಯಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿಯ ಉವಾಚ , ತಮ್ಮ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರ ʼ ಮಂಗಳಸೂತ್ರ ʼ ದ ಉಲ್ಲೇಖ ಇವೆಲ್ಲವೂ ಮಹಿಳಾ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವುದಾದರೂ, ರಾಜಕಾರಣದಲ್ಲಿ ಲಿಂಗಸೂಕ್ಷ್ಮತೆಯ ಕೊರತೆ ಇರುವುದನ್ನು ಸಹ ಎತ್ತಿತೋರಿಸುತ್ತದೆ. ಈ ಪ್ರಸಂಗಗಳು ಕಾಡುತ್ತಿರುವ ಹೊತ್ತಿನಲ್ಲೇ ಹಾಸನದ ಪ್ರಭಾವಿ ರಾಜಕೀಯ ನಾಯಕರೊಬ್ಬರ ಸುತ್ತ ಹೆಣೆದುಕೊಂಡಿರುವ ಪೆನ್‌ಡ್ರೈವ್ ಪ್ರಸಂಗ, ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಮತ್ತೊಂದೆಡೆ ಲೋಕಸಭೆಯ 190 ಕ್ಷೇತ್ರಗಳಿಗೆ ಎರಡು ಹಂತಗಳ ಮತದಾನ ಪೂರ್ತಿಯಾಗಿದ್ದು ಮೊದಲ ಹಂತದಲ್ಲಿ 1192 ಅಭ್ಯರ್ಥಿಗಳ ಪೈಕಿ 100 ಮಹಿಳೆಯರಿದ್ದರೆ, ಎರಡನೆ ಹಂತದಲ್ಲಿ 1628 ಅಭ್ಯರ್ಥಿಗಳ ಪೈಕಿ ಕೇವಲ 134 ಮಹಿಳೆಯರಿದ್ದಾರೆ. ಶಾಸನಸಭೆಗಳಲ್ಲಿ ಶೇಕಡಾ 33ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಕಲ್ಪಿಸುವ ವಾಗ್ದಾನ ಮಾಡುತ್ತಲೇ ಮಹಿಳಾ ಮೀಸಲಾತಿ ಮಸೂದೆಯನ್ನೂ ಅಂಗೀಕರಿಸಿರುವ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಶೇಕಡಾ 8ರಷ್ಟು ಮಹಿಳೆಯರು ಅಭ್ಯರ್ಥಿಗಳಾಗಿರುವುದು ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯ ಕೊರತೆಯನ್ನು ಮತ್ತೆಮತ್ತೆ ಸೂಚಿಸುತ್ತದೆ.
ಅಸೂಕ್ಷ್ಮ ಸಮಾಜದ ಅಮಾನುಷತೆ
ಆಡಳಿತಾತ್ಮಕವಾಗಿ, ಅಧಿಕಾರ ರಾಜಕಾರಣದಲ್ಲಿ ಮಹಿಳೆಗೆ ಸೂಕ್ತ ಪ್ರಾತಿನಿಧ್ಯ ನೀಡುವ ನೈತಿಕತೆ ಇಲ್ಲದಿದ್ದರೂ, ಮಹಿಳೆಯನ್ನು ಮತ್ತು ಮಹಿಳಾ ಸಂಕುಲವನ್ನು ಸಾಂಕೇತಿಕವಾಗಿ ಬಿಂಬಿಸುವ ಚಿಹ್ನೆ, ಲಾಂಛನಗಳನ್ನು ತಮ್ಮ ಚುನಾವಣಾ ಸರಕಿನಂತೆ ಬಳಸಿಕೊಳ್ಳುತ್ತಿರುವುದು ಭಾರತದ ಪಿತೃಪ್ರಧಾನ ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ. ಹಾಸನದ ಪೆನ್‌ಡ್ರೈವ್ ಹಗರಣ ಇದರ ರಾಜಕೀಯ ಆಯಾಮವಾಗಿ ಕಾಣುತ್ತಿದೆ. ಪ್ರಭಾವಿ ರಾಜಕಾರಣಿಗಳು, ಅವರ ತೋಳ್ಬಲ ಮತ್ತು ಬಂಡವಾಳದ ಶಕ್ತಿ, ರಾಜಕೀಯ ಅಧಿಕಾರದ ವ್ಯಾಪ್ತಿ ಹಾಗೂ ಸಾಮಾಜಿಕ ಪ್ರಾಬಲ್ಯವನ್ನು ಬಳಸಿಕೊಂಡು, ಇಡೀ ಪ್ರಕರಣವನ್ನು ಮುಚ್ಚಿಹಾಕಿದರೂ ಅಚ್ಚರಿಯೇನಿಲ್ಲ. ಆದರೆ ಈಗಾಗಲೇ ಬಹಿರಂಗವಾಗಿರುವ ವರದಿಯ ಅನುಸಾರ ನೂರಾರು ಅಮಾಯಕ ಮಹಿಳೆಯರು ಗಂಡಾಳ್ವಿಕೆಯ ಕಾಮತೃಷೆಗೆ ಆಟಕಾಯಿಗಳಾಗಿ ಬಳಕೆಯಾಗಿರುವುದು ಸ್ಪಷ್ಟವಾಗಿದೆ. ಕೆಲವು ಸಾಮಾಜಿಕ ತಾಣಗಳನ್ನೂ ಒಳಗೊಂಡಂತೆ , ವಿದ್ಯುನ್ಮಾನ ಸುದ್ದಿಮನೆಗಳಿಗೆ ಈ ಪ್ರಕರಣವು ಒಂದು ಮನರಂಜನೆಯ ವಸ್ತುವಾಗಿ ಕಂಡರೆ,

ರಾಜಕೀಯ ಪಕ್ಷಗಳಿಗೆ ವಿರೋಧಿಗಳನ್ನು ಮಣಿಸಲು ನೆರವಾಗುವ ಅಸ್ತ್ರವಾಗಿ ಕಾಣುತ್ತಿದೆ. ಈಗಾಗಲೇ ವ್ಯಾಪಕವಾಗಿ ಹರಿದಾಡುತ್ತಿರುವ ದೃಶ್ಯಾವಳಿಗಳು ಮನರಂಜನೆಯ ಸರಕುಗಳಾಗಿ ಸಮಾಜದೊಳಗಿನ ಬೌದ್ಧಿಕ ಮಾಲಿನ್ಯವನ್ನು ಹೊರಹಾಕಿದೆ. ಮಹಿಳೆಯನ್ನು ಕುರಿತ ಒಂದು ಸಣ್ಣ ಪ್ರಸಂಗವಾದರೂ ರೋಚಕವಾಗಿ ಬಿತ್ತರಿಸುವ ಕೆಲವು ಮಾಧ್ಯಮಗಳು ಈ ವಿಷಯದಲ್ಲಿ ತಣ್ಣನೆಯ ಮೌನ ವಹಿಸಿರುವುದು ಮಾಧ್ಯಮ ರಾಜಕಾರಣದ ಸಂಕೇತವಾಗಿದೆ.
ಪೆನ್‌ಡ್ರೈವ್ ಮುಖಾಂತರ ನೂರಾರು ಮಹಿಳೆಯರ ಲೈಂಗಿಕ ಚಿತ್ರಗಳನ್ನು, ದೃಶ್ಯಗಳನ್ನು ದಾಖಲಿಸಿ ಅದನ್ನು ವಾಟ್ಸಾಪ್ ಮೂಲಕ ಹರಡುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಹಾಸನದ ಪ್ರಭಾವಿ ರಾಜಕಾರಣಿಯ ಸುತ್ತ ಹೆಣೆದುಕೊಂಡಿರುವ ಈ ಕಾಮಕಾಂಡದಲ್ಲಿ ಕಾಣಿಸಿಕೊಳ್ಳುವ ನೂರಾರು ಮಹಿಳೆಯರ ಖಾಸಗಿ ಬದುಕು ತೀವ್ರ ಘಾಸಿಗೊಳಗಾಗಿರುವುದನ್ನು ಸಮಾಜ ಗಮನಿಸಬೇಕಿದೆ. ಆದರೆ ಪ್ರಜ್ಞಾವಂತ ನಾಗರಿಕ ಸಮಾಜದ ಕ್ರಿಯಾಶೀಲ ಮನಸ್ಸುಗಳನ್ನು ಹೊರತುಪಡಿಸಿ ವಿಶಾಲ ಸಮಾಜದಲ್ಲಿ ಈ ರೀತಿಯ ಹೇಯ ಘಟನೆಗಳಿಗೂ ಯಾವುದೇ ರೀತಿಯ ಪ್ರತಿರೋಧ ಅಥವಾ ಸಾತ್ವಿಕ ಸಿಟ್ಟು ವ್ಯಕ್ತವಾಗದಿರುವುದು ನಮ್ಮ ಸಮಾಜವನ್ನು ಹಿಡಿದಿಟ್ಟಿರುವ ಪಿತೃಪ್ರಧಾನತೆಯ ದ್ಯೋತಕವಾಗಿಯೇ ಕಾಣುತ್ತದೆ. ರಾಜಕೀಯ ಪರ ವಿರೋಧಗಳನ್ನು ಬದಿಗಿಟ್ಟು ನೋಡಿದರೂ, ಈ ಘಟನೆ ಇಡೀ ರಾಜ್ಯದ ಸುಶಿಕ್ಷಿತ ಸಮಾಜವನ್ನು ವಿಚಲಿತಗೊಳಿಸಬೇಕಿತ್ತು. ಪೆನ್‌ಡ್ರೈವ್‌ಗಳಲ್ಲಿ ಸೆರೆಹಿಡಿಯಲ್ಪಟ್ಟಿರುವ ದೃಶ್ಯಗಳನ್ನು ಮನೋರಂಜಕ ವಸ್ತುವಾಗಿ ನೋಡುವ lumpen ಪ್ರವೃತ್ತಿಯಿಂದ ಹೊರಬಂದು, ಆಧುನಿಕ ನಾಗರಿಕ ಸಮಾಜವು ಈ ಘಟನೆಯ ವಿರುದ್ಧ ದನಿ ಎತ್ತಬೇಕಿತ್ತಲ್ಲವೇ ? ಆದರೆ ಈ ಗಂಭೀರ ವಿಚಾರವೂ ಸಹ ಮಹಿಳಾ ಸಂಘಟನೆಗಳಿಗೆ ಅಥವಾ ಪ್ರಗತಿಪರ-ದಲಿತ-ಎಡಪಂಥೀಯ ಸಂಘಟನೆಗಳಿಗೆ ಮಾತ್ರ ಸಂಬಂಧಿಸಿದ
ವಿಷಯವಾಗಿರುವುದು ದುರಂತ.
ಸಂಪ್ರದಾಯ, ಸಂಸ್ಕೃತಿ ಮತ್ತು ಜಾತಿ-ಧರ್ಮ ಪಾರಮ್ಯದ ಸಂರಕ್ಷಕರಾಗಿ ಬಿಂಬಿಸಲ್ಪಡುವ ಮಹಿಳಾ ಸಂಕುಲ ಇದೇ ಸಾಂಪ್ರದಾಯಿಕ ಸಮಾಜದ ಮೂಗಿನಡಿಯಲ್ಲೇ ನಿರಂತರ ಶೋಷಣೆಗೊಳಗಾಗುತ್ತಿರುವುದನ್ನು ಕಂಡೂಕಾಣದಂತಿರುವ ಬೌದ್ಧಿಕ-ರಾಜಕೀಯ-ಸಾಂಸ್ಕೃತಿಕ ಸಮಾಜ ನಮ್ಮ ನಡುವೆ ಇರುವುದೇ ನಾಚಿಕೆಗೇಡಿನ ವಿಚಾರವಾಗಿದೆ. ಆಧುನಿಕ ಮಹಿಳೆಯನ್ನೂ ಸೇರಿದಂತೆ ಇಡೀ ಮಹಿಳಾ ಸಂಕುಲವನ್ನೇ ಅಧೀನತೆಗೊಳಪಡಿಸುವ ಸಾಮಾಜಿಕ-ಸಾಂಸ್ಕೃತಿಕ ಕಟ್ಟುಪಾಡುಗಳನ್ನು ಕಾಪಾಡಲೆಂದೇ ಜಾತಿ ಶ್ರೇಷ್ಠತೆ, ಪಾವಿತ್ರ್ಯತೆ, ಮತಶ್ರೇಷ್ಠತೆಯ ನೆಲೆಗಳನ್ನು ಬಳಸಿಕೊಳ್ಳುವ ಸಮಾಜ ಮತ್ತೊಂದು ಬದಿಯಲ್ಲಿ ಮಹಿಳೆ ಧರಿಸುವ ಉಡುಪು ಮತ್ತು ಚಿಹ್ನೆಗಳನ್ನೇ ಬಳಸಿ ಇಡೀ ಮಹಿಳಾ ಸಮುದಾಯವನ್ನು ಭ್ರಮಾಧೀನಗೊಳಿಸಲು ಪ್ರಯತ್ನಿಸುತ್ತಿದೆ. ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆ ಧರಿಸುವ ಧಾರ್ಮಿಕ ಚಿಹ್ನೆ-ಲಾಂಛನಗಳ ಮೇಲೆ ಸದಾ ಯಜಮಾನಿಕೆಯನ್ನು ಸಾಧಿಸುವ ಗಂಡಾಳ್ವಿಕೆಯ ನೆಲೆಗಳು, ಇದೇ ಚಿಹ್ನೆಗಳನ್ನೇ ತಮ್ಮ ಪಿತೃಪ್ರಧಾನ ಸಾಮ್ರಾಜ್ಯ ವಿಸ್ತರಣೆಯ ಸುಲಭ ಸಾಧನಗಳಾಗಿ ಬಳಸಿಕೊಳ್ಳುತ್ತಿರುವುದು ಅನಾಗರಿಕತೆಯ ಲಕ್ಷಣವಲ್ಲವೇ ?

ಲಿಂಗಸೂಕ್ಷ್ಮತೆಯ ರಾಜಕೀಯ ಆಯಾಮ
ಹಾಸನದ ಪೆನ್ ಡ್ರೈವ್ ಹಗರಣವನ್ನು ಎರಡು ಆಯಾಮಗಳಲ್ಲಿ ನೋಡಬೇಕಿದೆ. ಮೊದಲನೆಯದು ಗಂಡಾಳ್ವಿಕೆಯ ನೆಲೆಗಳಲ್ಲಿ ಸಾಂಸ್ಕೃತಿಕ ವಲಯವನ್ನೂ ಸೇರಿದಂತೆ ಲಿಂಗಸೂಕ್ಷ್ಮತೆ-ಸಂವೇದನೆ ಇಲ್ಲದಿರುವುದು. ಎರಡನೆಯದು ಅಧಿಕಾರ ರಾಜಕಾರಣವನ್ನು ಹಿಡಿದಿಟ್ಟುಕೊಂಡಿರುವ ಪುರುಷಾಧಿಪತ್ಯದ ನೆಲೆಗಳಲ್ಲಿ ಮಹಿಳೆ ಒಂದು ಗ್ರಾಹಕ ವಸ್ತುವಾಗಿ ಬಳಕೆಯಾಗುತ್ತಿರುವುದು. ಇಲ್ಲಿ ಹೆಣ್ತನದ ಘನತೆ ಮತ್ತು ಮಹಿಳಾ ಅಸ್ಮಿತೆ ಪುರುಷಾಡಳಿತವನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಅಗತ್ಯವಾದ ಸೇತುವೆಯಾಗಿ ಮಾತ್ರವೇ ಕಾಣುತ್ತದೆ. ಪೆನ್‌ಡ್ರೈವ್ ಮೂಲಕ ಸಮಾಜವನ್ನು ತಲುಪಿರುವ ದೃಶ್ಯಾವಳಿಗಳು ಮಹಿಳೆಯ ಬಗ್ಗೆ ಅನುಕಂಪ ಮೂಡಿಸುತ್ತವೆಯೇ ಹೊರತು, ಪುರುಷ ಸಮಾಜದಲ್ಲಿ ಆತ್ಮಾವಲೋಕನಕ್ಕೆ ಎಡೆಮಾಡಿಕೊಡುವುದಿಲ್ಲ. ಸಾಂಪ್ರದಾಯಿಕ ಸಮಾಜದ ದೃಷ್ಟಿಯಲ್ಲಿ ಶೋಷಣೆಗೊಳಗಾದ ಮಹಿಳೆಯೇ ಅಪರಾಧಿಯಾಗಿ ಕಂಡರೂ ಅಚ್ಚರಿಯೇನಿಲ್ಲ. ಶೋಷಣೆ-ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯನ್ನೇ ಕಟಕಟೆಯಲ್ಲಿ ನಿಲ್ಲಿಸುವ ದೊಡ್ಡ ಪರಂಪರೆಯೇ ನಮ್ಮಲ್ಲಿದೆ.
ಧಾರ್ಮಿಕ ವಿಚಾರಗಳಲ್ಲಿ, ಜಾತಿ ಶ್ರೇಷ್ಠತೆಯ ನೆಲೆಗಳಲ್ಲಿ, ಸಂಪ್ರದಾಯ-ಸಂಸ್ಕೃತಿಯ ಆಚರಣೆಗಳಲ್ಲಿ ಅತ್ಯಂತ ಸೂಕ್ಷ್ಮಮತಿಗಳಾಗಿ ವರ್ತಿಸುವ ಪುರುಷ ಸಮಾಜ, ಮಹಿಳಾ ದೌರ್ಜನ್ಯ ಅಥವಾ ಶೋಷಣೆಯ ವಿಚಾರಕ್ಕೆ ಬಂದಾಗ ಅಸೂಕ್ಷ್ಮತೆಯ ಪರಾಕಾಷ್ಠೆ ಪ್ರದರ್ಶಿಸುವುದನ್ನು ಈ ಸಂದರ್ಭದಲ್ಲಿ ಪ್ರಶ್ನಿಸಲೇಬೇಕಿದೆ. ರಾಜಕೀಯ ಸಿದ್ಧಾಂತ-ಅಸ್ಮಿತೆಗಳಿಂದಾಚೆಗೂ ನಾವೇ ಕಟ್ಟಿಕೊಂಡಿರುವ ಒಂದು ಮಾನವೀಯ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಪರಿಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕಲ್ಲವೇ ? ಈ ಸಮಾಜದಲ್ಲಿ ಸಂಭವಿಸುವ ಪ್ರತಿಯೊಂದು ಅಮಾನುಷ ಘಟನೆಯ ಹಿಂದೆ ಇರುವಂತಹ ಪೈಶಾಚಿಕ ಮನಸ್ಥಿತಿ, ಪ್ರಾಚೀನ ಮನೋಭಾವ ಮತ್ತು ಹೀನ ಸಂಸ್ಕೃತಿಗಳನ್ನು ಖಂಡಿಸುವುದು ಸಮಾಜದ ನೈತಿಕ ಕರ್ತವ್ಯವಲ್ಲವೇ ? ಲಿಂಗ ಸೂಕ್ಷ್ಮತೆಯ ಕೊರತೆ ಇದ್ದರೂ ಕನಿಷ್ಠ ಮನುಜ ಸೂಕ್ಷ್ಮತೆಯಾದರೂ ನಮ್ಮ ಸುಪ್ತ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಲ್ಲವೇ ?
ಆದರೆ ಈ ಪ್ರಜ್ಞಾವಂತಿಕೆಯೇ ನಶಿಸಿಹೋಗಿರುವ ಒಂದು ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಹಾಗಾಗಿಯೇ ಹಾಸನದಲ್ಲಿ ನಡೆದಿರುವ ಪೈಶಾಚಿಕ ಕೃತ್ಯಗಳಾಗಲೀ, ಕೆಲವು ದಿನಗಳ ಹಿಂದೆ ಬಯಲಾದ ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನುಷ ಘಟನೆಗಳಾಗಲೀ ವಿಶಾಲ ನಾಗರಿಕ ಸಮಾಜದ ಬೌದ್ಧಿಕ ಸೂಕ್ಷ್ಮತೆಗಳನ್ನು ಘಾಸಿಗೊಳಿಸಿಲ್ಲ. ಮಹಿಳಾ ಸಮುದಾಯದ ವಾರಸುದಾರಿಕೆಯನ್ನು , ಮಹಿಳಾ ಸಂಕುಲದ ಸಾಂಸ್ಕೃತಿಕ ಯಜಮಾನಿಕೆಯನ್ನು ವಹಿಸಿಕೊಳ್ಳುವ, ಸಬಲೀಕರಣ-ಸಮಾನತೆಯ ಘೋಷಣೆಗಳೊಂದಿಗೆ ಮಹಿಳಾ ಮುನ್ನಡೆಯ ಮುಂದಾಳತ್ವವನ್ನು ವಹಿಸಿಕೊಳ್ಳುವ ಪಿತೃಪ್ರಧಾನ ರಾಜಕೀಯ ವ್ಯವಸ್ಥೆಯು, ಮಹಿಳೆಯ ಅಸ್ಮಿತೆ ಮತ್ತು ಘನತೆಗೆ ಧಕ್ಕೆ ಉಂಟಾದಾಗ, ಜಾಣಮೌನ ವಹಿಸುವುದು ಏನ್ನು ಸೂಚಿಸುತ್ತದೆ ? ಇದು ನಮ್ಮ ಸಾಮಾಜಿಕ ನೈತಿಕತೆಯ ಅಧಃಪತನದ ಸಂಕೇತ ಎನಿಸುವುದಿಲ್ಲವೇ ?

ನೈತಿಕತೆಯ ಪಾತಾಳಕುಸಿತ
ಲಿಂಗ ಸೂಕ್ಷ್ಮತೆ-ಸಂವೇದನೆ- ನೈತಿಕತೆ ಮತ್ತು ಮಾನವೀಯತೆಯ ಈ ಪಾತಾಳ ಕುಸಿತವನ್ನು ಭವಾರಿ ದೇವಿಯಿಂದ ಸಾಕ್ಷಿ ಮಲ್ಲಿಕ್ ಪ್ರಕರಣದವರೆಗೂ ಗುರುತಿಸಬಹುದು. ಹಾಸನದ ಘಟನೆಗಳು ಇದರ ಮತ್ತೊಂದು ವಿಕೃತ ರಾಜಕೀಯ ಆಯಾಮವನ್ನು ನಮ್ಮೆದುರು ತೆರೆದಿಟ್ಟಿದೆ. ನೇಹಾ ಹತ್ಯೆಯ ಪ್ರಕರಣದಲ್ಲಿ ದೆಹಲಿಯಿಂದ ದೌಡಾಯಿಸಿದ ಬಿಜೆಪಿ ನಾಯಕರು, ಪತ್ರಿಕಾಗೋಷ್ಠಿಗಳನ್ನು ನಡೆಸಿ ಅಪರಾಧಿಗಳಿಗೆ ಉಗ್ರಶಿಕ್ಷೆ ವಿಧಿಸಲು ಆಗ್ರಹಿಸಿದ ನಾಯಕ ಶಿಖಾಮಣಿಗಳು, ಹಾಸನದ ಘಟನೆಯಲ್ಲಿ ತೆಪ್ಪಗಿರುವುದು ಸಾಮಾಜಿಕ ವಿಕೃತಿಯ ಪರಾಕಾಷ್ಠೆ ಎಂದಷ್ಟೇ ಹೇಳಬಹುದು. ಚುನಾವಣೆಗಳ ಭರಾಟೆಯಲ್ಲಿ ಶೋಷಣೆಗೊಳಗಾದ ಮಹಿಳೆಯರ ಧ್ವನಿಗಳು ಸದ್ದಿಲ್ಲದೇ ಸುರುಟಿಹೋಗಬಹುದು. ಅಧಿಕಾರ ರಾಜಕಾರಣದ ಅಂಗಳದಲ್ಲಿ ಈ ನೂರಾರು ಮಹಿಳೆಯರ ಆಕ್ರಂದನ ಅರಣ್ಯರೋದನವಾಗಬಹುದು. ಹಣಬಲ, ತೋಳ್ಬಲ, ರಾಜಕೀಯ ಅಧಿಕಾರ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಶ್ರೀರಕ್ಷೆಯಿಂದ ಗಂಡಾಳ್ವಿಕೆಯ ಕ್ರೌರ್ಯ ಸಮಾಜದ ಗಮನಕ್ಕೇ ಬಾರದಂತೆ ಮರೆಗೆ ಸರಿಯಬಹುದು. ಹೆಣ್ತನದ ಘನತೆಗಾಗಿ, ಮಹಿಳಾ ಅಸ್ಮಿತೆಗಾಗಿ ಹೊರಮೂಡುವ ಪ್ರತಿರೋಧದ ಕೆಲವೇ ಗಟ್ಟಿ ಧ್ವನಿಗಳು, ಬಂಡವಾಳ-ಮಾರುಕಟ್ಟೆ-ರಾಜಕಾರಣ-ಪುರುಷಾಧಿಪತ್ಯದ ಸಂತೆಯಲ್ಲಿ ಕ್ಷೀಣ ಸ್ವರಗಳಾಗಿ ನಿರ್ಲಕ್ಷ್ಯಕ್ಕೊಳಗಾಗಬಹುದು.
ಏಕೆಂದರೆ ವಿಶಾಲ ನಾಗರಿಕ ಪ್ರಪಂಚ, ಗಂಡು ಸಮಾಜ ತನ್ನ ಸೂಕ್ಷ್ಮತೆಗಳೆಲ್ಲವನ್ನೂ ಕಳೆದುಕೊಂಡಿದೆ. ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯ ಆಳ್ವಿಕೆಯಲ್ಲಿ ಮನುಷ್ಯನ ತಾತ್ವಿಕ ಚಿಂತನೆಗಳೂ ಸಹ ಮಾರುಕಟ್ಟೆ ಸರಕುಗಳಂತಾಗಿವೆ. ಮನುಜ ಸಂಬಂಧಗಳನ್ನು ವ್ಯಾವಹಾರಿಕವಾಗಿಸುತ್ತಲೇ ಈ ಸಂಬಂಧಗಳನ್ನು ಬೆಸೆಯಲು ಅಗತ್ಯವಾದ ಲಿಂಗ ಸೂಕ್ಷ್ಮತೆ-ಸಂವೇದನೆಗಳನ್ನೂ ಸರಕೀಕರಣಗೊಳಿಸುವ (Commodification) ಮಾರುಕಟ್ಟೆ ಆರ್ಥಿಕತೆ, ಅಧಿಕಾರ ರಾಜಕಾರಣದ ಅವಶ್ಯಕತೆಗಳಿಗೆ ತಕ್ಕಂತೆ ಮಾನವ ಅಸ್ಮಿತೆಯನ್ನೂ ಬಳಸಿಕೊಳ್ಳುತ್ತದೆ. ಇಲ್ಲಿ ಮಹಿಳಾ ಸಂಕುಲ ಮತ್ತು ಮಹಿಳಾ ಅಸ್ಮಿತೆಯೂ ಸಹ ಸ್ಥಾಪಿತ ಗಂಡಾಳ್ವಿಕೆಯ ಪಿತೃಪ್ರಧಾನ ಮೌಲ್ಯಗಳ ನಡುವೆ ನಿರಂತರ ದಾಳಿಗೊಳಗಾಗುತ್ತಿರುತ್ತದೆ. ಪೆನ್ ಡ್ರೈವ್ ಹಗರಣ ಇಂತಹ ವಿಕೃತ ದಾಳಿಯ ಒಂದು ಸೂಚನೆಯಾಗಿ ಕಾಣುತ್ತದೆ. ಇಡೀ ಸಮಾಜವೇ ನಾಚಿಕೆಪಟ್ಟು ತಲೆತಗ್ಗಿಸುವಂತಹ ಈ ಘಟನೆಗಳಿಗೆ ಸ್ಪಂದಿಸದೆ ಮೌನಕ್ಕೆ ಶರಣಾಗುವ ನಾಗರಿಕ ಜಗತ್ತನ್ನು ಏನೆಂದು ಕರೆಯಬೇಕು ?
-೦-೦-೦-
