ಇಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದೆ. ಆಗಸ್ಟ್ 15, 1947ರಂದು ಹುಟ್ಟಿದ ಹೊಸ ದೇಶಕ್ಕೆ ಇಂದು 75ರ ಸಂಭ್ರಮ. ಹಳೆಯ ಘಟನೆಗಳನ್ನು ಮೆಲುಕು ಹಾಕಲು ಇದೊಂದು ಸುಸಂದರ್ಭ.
ಮಾಧ್ಯಮಗಳು ಇಂದು ದೇಶದ ಬಹುಮುಖ್ಯ ಅಂಗವಾಗಿದೆ. ಕೆಲವೊಂದು ಕಾರಣಗಳಿಂದ ಮಾಧ್ಯಮಗಳು ತಮ್ಮ ವರ್ಚಸ್ಸನ್ನು ಕಳೆದುಕೊಂಡಿವೆ ಕೂಡಾ. ಆದರೆ, 1947ರ ಮಟ್ಟಿಗೆ ದಿನಪತ್ರಿಕೆಗಳು ಮತ್ತು ರೇಡಿಯೋ ಸಮೂಹ ಸಂವಹನದ ಮೂಲ ಮಾಧ್ಯಮಗಳಾಗಿದ್ದವು. ಆಗಸ್ಟ್ 15, 1947ರಂದು ವಿಶ್ವದ ವಿವಿಧ ದಿನಪತ್ರಿಕೆಗಳು ನೀಡಿದ ತಲೆಬರಹದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಂದಿಗೂ ಇಂದಿಗೂ ಭಾರತದ ಪ್ರಮುಖ ದಿನಪತ್ರಿಕೆಯಾಗಿ ತನ್ನ ಸ್ಥಾನಮಾನವನ್ನು ಉಳಿಸಿಕೊಂಡು ಬಂದಿರುವ The Times Of India, “birth of India’s freedom” ಎಂಬ ತಲೆಬರಹದೊಂದಿಗೆ ಭಾರತದ ಸ್ವಾತಂತ್ರ್ಯವನ್ನು ವರದಿ ಮಾಡಿತ್ತು. ಇದರೊಂದಿಗೆ, ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಭಾಷಣ, ಪಾಕಿಸ್ತಾನಕ್ಕೆ ಲಾರ್ಡ್ ಮೌಂಟ್ ಬ್ಯಾಟನ್ ಭೇಟಿ, ಮುಂಬಯಿಯಲ್ಲಿ ನಡೆದ ಸಂಭ್ರಮಾಚರಣೆ ಸೇರಿದಂತೆ ಇನ್ನೂ ಹಲವು ಸುದ್ದಿಗಳನ್ನು ಮುದ್ರಿಸಲಾಗಿತ್ತು.

ಭಾರತದ ಮತ್ತೊಂದು ಪ್ರಮುಖ ದಿನಪತ್ರಿಕೆ ಹಿಂದೂಸ್ತಾನ್ ಟೈಮ್ಸ್ “India Independent : British Rule Ends” (ಸ್ವತಂತ್ರಗೊಂಡ ಭಾರತ : ಬ್ರಿಟಿಷರ ಆಳ್ವಿಕೆಯ ಅಂತ್ಯ) ಎಂಬ ತಲೆಬರಹವನ್ನು ಪ್ರಕಟಿಸಿತ್ತು. ಟೈಮ್ಸ್ ಆಫ್ ಇಂಡಿಯಾದಂತೆಯೇ ನೆಹರೂ ಅವರ ಭಾಷಣಕ್ಕೆ ಹೆಚ್ಚಿನ ಸ್ಥಳಾವಕಾಶ ನೀಡಲಾಗಿತ್ತು.

ಆಗಸ್ಟ್ 15, 1947ರ ‘ದ ಹಿಂದೂ’ ದಿನಪತ್ರಿಕೆಯ ಡಿಜಿಟಲ್ ಆವೃತ್ತಿ ಇಂದಿಗೂ ಲಭ್ಯವಿದೆ. ಮೊದಲ ಪುಟದಲ್ಲಿಯೇ, ಜಾಹೀರಾತುಗಳ ಕಾರುಬಾರು. ನಂತರದ, ನಿಜವಾದ ಮೊದಲ ಪುಟದಲ್ಲಿ “Free India Is Born” ಎಂಬ ತಲೆಬರಹ. ಮೇಲಿನ ಎರಡೂ ದಿನಪತ್ರಿಕಗಳ ವರದಿಗೆ ವ್ಯತಿರಿಕ್ತವಾಗಿ, ರಾಜೆನ್ ಬಾಬು ಅವರು ಅಲ್ಪಸಂಖ್ಯಾತರಿಗೆ ನೀಡಿದ ಭರವಸೆಯ ಕುರಿತು ಮೊದಲ ಪುಟದಲ್ಲಿಯೇ ವರದಿ ನೀಡಲಾಗಿತ್ತು.

‘The Statesman’ ದಿನಪತ್ರಿಕೆಯು ದಪ್ಪ ಅಕ್ಷರಗಳಲ್ಲಿ ‘Two dominions are born’ ಎಂಬ ತಲೆಬರಹ ಪ್ರಕಟಿಸಿತ್ತು. ನಂತರ “Political Freedom for One-Fifth of Human Race” (ಮಾನವ ಸಂಕುಲದ ಐದನೇ ಒಂದು ಪಾಲಿಗೆ ರಾಜಕೀಯ ಸ್ವಾತಂತ್ರ್ಯ) ಎಂಬ ಅಡಿಬರಹವನ್ನೂ ನೀಡಿತ್ತೂ.

Indian Express ತಲೆಬರದಲ್ಲಿ “India Celebrates Freedom” ಎಂದು ಬರೆಯಲಾಗಿತ್ತು. ಜೊತೆಗೆ, ಮಧ್ಯರಾತ್ರಿ ನಡೆದ ಸಭೆಯನ್ನು ಐತಿಹಾಸಿಕ ಎಂದು ಕರೆಯಲಾಗಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಅವರು ತವರೂರಿಗೆ ಮರಳಲು ಏಪ್ರಿಲ್ 1948ರ ಗಡುವು ನೀಡಿದ ಕುರಿತಾಗಿಯೂ ವರದಿಯಾಗಿತ್ತು.

1947ರಲ್ಲಿ ಮಾಂಚೆಸ್ಟರ್ ಗಾರ್ಡಿಯನ್ ಎಂದು ಕರೆಯಲ್ಪಡುತ್ತಿದ್ದ ಇಂಗ್ಲೆಂಡಿನ ಪ್ರಮುಖ ದಿನಪತ್ರಿಕೆ ‘ದ ಗಾರ್ಡಿಯನ್’ “End of the Indian Empire : Birth of Two Dominions’ ಎಂಬ ತಲೆಬರಹದಡಿ ವರದಿಯನ್ನು ಪ್ರಕಟಿಸಿತ್ತು. ಬ್ರಿಟಿಷ್ ಅಧಿಕಾರಿಗಳಿಗೆ ‘ವಿದಾಯ ಮತ್ತು ಜಯಕಾರ’ ಎಂಬ ಸ್ಲಗ್ ತಲೆಬರಹದ ಮೇಲಿತ್ತು.

‘Two Indian Nations Emerge On World Scene’ (ವಿಶ್ವ ಭೂಪಟದಲ್ಲಿ ಎರಡು ಭಾರತೀಯ ರಾಷ್ಟ್ರಗಳ ಉಗಮ) ಎಂಬ ತಲೆಬರಹವನ್ನು The New York Times ಪತ್ರಿಕೆ ಪ್ರಕಟಿಸಿತ್ತು. ಇದರೊಂದಿಗೆ, ಸ್ವಾತಂತ್ರ್ಯದ ಸಂಭ್ರಮ ಮತ್ತು ವಿಭಜನೆಯ ದುರಂತದ ಚಿತ್ರಣವನ್ನೂ ವರದಿ ಮಾಡಿತ್ತು.

ತಾಪಮಾನ ಏರಿಕೆ ಮತ್ತು ಸೋವಿಯತ್ ಒಕ್ಕೂಟದ ಬೆದರಿಕೆಯ ಸುದ್ದಿಗಳ ನಡುವೆ The Washington Post ಭಾರತದ ಸ್ವಾತಂತ್ರ್ಯವನ್ನೂ ವರದಿ ಮಾಡಿತ್ತು. India AChieved Sovereignty, Amid Scenes of Wild Rejoicing ಎಂಬ ತಲೆಬರಹವನ್ನು ನೀಡಿತ್ತು.
