ಬೆಂಗಳೂರು : ರಾಜ್ಯ ಸರ್ಕಾರ ಕೊನೆಗೂ ತನ್ನ ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸುವಂತಹ ಶಕ್ತಿ ಯೋಜನೆಗೆ ಇಂದು ಅಧಿಕೃತ ಚಾಲನೆ ದೊರಕಿದೆ.

ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ವಿಧಾನಸೌಧದ ಆವರಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಅಲ್ಲದೇ ಸ್ಮಾರ್ಟ್ ಕಾರ್ಡ್, ಶಕ್ತಿ ಯೋಜನೆಯ ಲೋಗೋ ಹಾಗೂ ಸ್ಟಿಕರ್ನ್ನು ಇದೇ ವೇಳೆ ಅನಾವರಣಗೊಳಿಸಿದ್ರು. ಇಂದು ಸಾಂಕೇತಿಕ ರೂಪದಲ್ಲಿ ಐವರು ಮಹಿಳೆಯರಿಗೆ ಸ್ಮಾರ್ಟ್ಕಾರ್ಡ್ ವಿತರಣೆ ಮಾಡಲಾಗಿದೆ.
ರಾಜ್ಯದ ಮಹಿಳೆಯರು ಇಂದಿನಿಂದ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದ್ದು ಐಷಾರಾಮಿ ಬಸ್ಗಳಲ್ಲಿ ಮಾತ್ರ ಟಿಕೆಟ್ಗೆ ಹಣ ನೀಡಬೇಕಾಗಿ ಬರಲಿದೆ. ಸ್ಮಾರ್ಟ್ಕಾರ್ಡ್ ಸಿಗುವ ಮುನ್ನ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಲು ತಾತ್ಕಾಲಿಕ ಅನುಮತಿ ನೀಡಲಾಗಿದೆ. ಸ್ಮಾರ್ಟ್ ಕಾರ್ಡ್ಗಳಿಗೆ ಮಹಿಳೆಯರು ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ , ಸ್ಮಾರ್ಟ್ ಕಾರ್ಡ್ಗಳನ್ನು ಮಾಡಿಕೊಳ್ಳಲು ಮಹಿಳೆಯರಿಗೆ ಸರ್ಕಾರ ಮೂರು ತಿಂಗಳ ಅವಕಾಶ ನೀಡಿದೆ.