ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಪ್ರಾಪ್ತರಿಗೆ ಸಂಬಂಧಿಸಿದ ಭಾರತೀಯ ಕಾನೂನುಗಳನ್ನು ಜಾಲತಾಣಗಳು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಸೂಕ್ತ ಶಾಸನಬದ್ಧ ಚೌಕಟ್ಟನ್ನು ರೂಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಭಾರತೀಯ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸ್ವತಂತ್ರವಾಗಿ ಒಪ್ಪಂದಗಳಿಗೆ ಒಳಪಡಲು ಅನರ್ಹರಾಗಿದ್ದು, ಸಾಮಾಜಿಕ ಜಾಲತಾಣಗಳು ಈ ನಿಯಮಗಳನ್ನು ಉಲ್ಲಂಘಿಸದಂತೆ ವ್ಯವಸ್ಥೆ ರೂಪಿಸಬೇಕೆಂದು ನ್ಯಾಯಾಲಯ ಹೇಳಿದೆ.
ಕೇವಲ ಮಾರ್ಗಸೂಚಿಯಾದರೆ ಸಾಲದು ಎಂದ ನ್ಯಾಯಪೀಠ
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ (ಜೆಆರ್‌ಸಿಎ) ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಮಾತನಾಡಿದ ನ್ಯಾಯಮೂರ್ತಿ ಬಾಗ್ಚಿ ಅವರು, ಮಕ್ಕಳ ಸುರಕ್ಷತೆಯ ನಿಯಮಗಳು ಕೇವಲ ಸಾಧಾರಣ ಮಾರ್ಗಸೂಚಿಗಳಾಗಿ ಉಳಿಯಬಾರದು, ಅವುಗಳಿಗೆ ಮಧ್ಯವರ್ತಿ ನಿಯಮಗಳಡಿ ಶಾಸನಬದ್ಧ ಸ್ವರೂಪ ನೀಡಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದರು. ಸಾಮಾಜಿಕ ಜಾಲತಾಣಗಳ ಸಾಫ್ಟ್‌ವೇರ್ ಮತ್ತು ವ್ಯವಸ್ಥೆಗಳು ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ವಿನ್ಯಾಸಗೊಳ್ಳಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಹಾಲಿ ಕಾನೂನಿನ ಉಲ್ಲಂಘನೆ ಬಗ್ಗೆ ಅರ್ಜಿದಾರರ ಆಕ್ಷೇಪ
ಕಾನೂನುಬದ್ಧ ಒಪ್ಪಂದ ಮಾಡಿಕೊಳ್ಳಲು ಅರ್ಹತೆ ಇಲ್ಲದಿದ್ದರೂ ಅಪ್ರಾಪ್ತರು ಡಿಜಿಟಲ್ ತಾಣಗಳಲ್ಲಿ ಸ್ವತಂತ್ರವಾಗಿ ಖಾತೆಗಳನ್ನು ತೆರೆದು ನಿರ್ವಹಿಸಲು ಅವಕಾಶ ನೀಡಿರುವುದನ್ನು ಅರ್ಜಿದಾರರು ಪ್ರಶ್ನಿಸಿದರು. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ 2023ರ ಅಡಿಯಲ್ಲಿ ಈ ವಿಚಾರ ಬರುತ್ತದೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ತಿಳಿಸಿದಾಗ, ಅರ್ಜಿದಾರರ ಪರ ವಕೀಲ ಎಚ್.ಎಸ್. ಫೂಲ್ಕಾ ಅವರು ಆಕ್ಷೇಪ ವ್ಯಕ್ತಪಡಿಸಿದರು. ದತ್ತಾಂಶ ಸಂರಕ್ಷಣಾ ಕಾಯ್ದೆಯ ಸಂಬಂಧಿತ ನಿಯಮಗಳು ಜಾರಿಗೆ ಬರಲು 2027ರವರೆಗೆ ಕಾಯಬೇಕಾಗುತ್ತದೆ, ಆದರೆ ಪ್ರಸ್ತುತ ಕಾನೂನಿನ ಪ್ರಕಾರ ಅಪ್ರಾಪ್ತರು ಮಾಡಿಕೊಳ್ಳುವ ಯಾವುದೇ ಒಪ್ಪಂದಗಳು ಶೂನ್ಯವಾಗಿರುವುದರಿಂದ ಹೊಸ ಕಾಯ್ದೆಗೆ ಕಾಯುವ ಅಗತ್ಯವಿಲ್ಲ ಎಂದು ಅವರು ವಾದಿಸಿದರು.

ಪೋಷಕರ ಸಮ್ಮತಿ ಮತ್ತು ಡಿಜಿಟಲ್ ಸುರಕ್ಷತೆ ಚರ್ಚೆ
ಸಾಮಾಜಿಕ ಜಾಲತಾಣಗಳು ಮತ್ತು ಬಳಕೆದಾರರ ನಡುವಿನ ಒಪ್ಪಂದವು ಪೋಷಕರ ಸಮ್ಮತಿಯ ಆಧಾರದ ಮೇಲೆ ನಡೆಯುವಂತಹ ನಿಯಂತ್ರಣ ವ್ಯವಸ್ಥೆಯನ್ನು ಪರಿಗಣಿಸಬಹುದು ಎಂದು ಸಾಲಿಸಿಟರ್ ಜನರಲ್ ಸಲಹೆ ನೀಡಿದರು. ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ವಿದೇಶಗಳಲ್ಲಿ ನೋಂದಣಿಯಾಗಿದ್ದರೂ, ದೇಶದೊಳಗೆ ಕಾರ್ಯನಿರ್ವಹಿಸುವಾಗ ಭಾರತೀಯ ಕಾನೂನುಗಳನ್ನು ಪಾಲಿಸುವುದು ಕಡ್ಡಾಯ ಎಂದು ಪೀಠ ನೆನಪಿಸಿತು. ಆನ್‌ಲೈನ್‌ನಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆ, ಸೈಬರ್ ಬೆದರಿಕೆ, ಡಿಜಿಟಲ್ ಕಳ್ಳಸಾಗಣೆ, ಬ್ಲ್ಯಾಕ್‌ಮೇಲ್ ಹಾಗೂ ವೈಯಕ್ತಿಕ ಮಾಹಿತಿಯ ದುರ್ಬಳಕೆಯಂತಹ ಗಂಭೀರ ಅಪಾಯಗಳನ್ನು ತಡೆಯಲು ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
BREAKING : ಏಷ್ಯನ್ ಗೇಮ್ಸ್ ನ ಟ್ರ್ಯಾಪ್ ಶೂಟಿಂಗ್ ನಲ್ಲಿ ಭಾರತದ `ನೀರೂ ಧಂಡಾ’ಗೆ ಚಿನ್ನ | Neeru Dhanda






