ನವದೆಹಲಿ :ಏ.೦7: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಆಂಧ್ರ ಪ್ರದೇಶ ಸೇರಿದಂತೆ ದೇಶದಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಹಿನ್ನೆಡೆಯಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಭಜನೆಗೊಳ್ಳುವ ಮೊದಲು ಕಿರಣ್ ಕುಮಾರ್ ರೆಡ್ಡಿ ಅವರು ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿದ್ದರು.

ನಾಲ್ಕು ಬಾರಿ ಶಾಸಕರಾಗಿರುವ ಅವರು ಕಾಂಗ್ರೆಸ್ ತೊರೆಯಬೇಕೆಂದು ನಾನು ಎಂದಿಗೂ ಊಹಿಸಿರಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕತ್ವದ ತಪ್ಪು ನಿರ್ಧಾರಗಳಿಂದ ಈ ರೀತಿ ಮಾಡಿರುವುದಾಗಿ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
“ಕಾಂಗ್ರೆಸ್ ಹೈಕಮಾಂಡ್‌ನ ಕೆಟ್ಟ ನಿರ್ಧಾರಗಳಿಂದ ಎಲ್ಲಾ ರಾಜ್ಯಗಳು ತೊಂದರೆ ಅನುಭವಿಸುತ್ತಿವೆ. ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ. ನಾಯಕರು ಜನರ ಜತೆ ಚರ್ಚಿಸುತ್ತಿಲ್ಲ. ನಾಯಕರ ಅಭಿಪ್ರಾಯಗಳನ್ನು ಪರಿಗಣಿಸುತ್ತಿಲ್ಲ. ಇದು ಒಂದು ರಾಜ್ಯದ ಕತೆಯಲ್ಲ. ಎಲ್ಲಾ ರಾಜ್ಯಗಳಲ್ಲಿಯೂ ಇದೇ ಕತೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ರೆಡ್ಡಿ ಕುಟುಕಿದ್ದಾರೆ. ʼಒಂದು ಹಳೆಯ ಮಾತಿದೆ- ನನ್ನ ರಾಜ ತುಂಬಾ ಬುದ್ಧಿವಂತ, ಅವನು ಸ್ವಂತವಾಗಿ ಯೋಚಿಸುವುದಿಲ್ಲ ಮತ್ತು ಯಾರ ಸಲಹೆಯನ್ನು ಕೇಳುವುದಿಲ್ಲ” ಎಂದು ಅವರು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ್ದಾರೆ.

ಕಿರಣ್ ಕುಮಾರ್ ರೆಡ್ಡಿ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವು ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಮುಖಂಡ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕಿರಣ್ ಕುಮಾರ್ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. “ಕಿರಣ್ ಕುಮಾರ್ ಅವರ ಕುಟುಂಬದ ಹಲವಾರು ಸದಸ್ಯರು ಕಾಂಗ್ರೆಸ್ ನಲ್ಲಿದ್ದಾರೆ. ಆಂಧ್ರದ ಮಾಜಿ ಸಿಎಂ ಬಿಜೆಪಿ ಸೇರುವ ನಿರ್ಧಾರವನ್ನು ಶ್ಲಾಘಿಸಿದ ಅವರು, ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟವನ್ನು ಅವರು ಬಲಗೊಳಿಸುತ್ತಾರೆ. ಏಕೆಂದರೆ ಅವರು ಶಾಸಕರು ಮತ್ತು ಸಚಿವರಾಗಿ ಕಿರಣ್ ರೆಡ್ಡಿ ತುಂಬಾ ಕ್ಲೀನ್ ಇಮೇಜ್ ಇಟ್ಟುಕೊಂಡಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಉತ್ತೇಜನ ನೀಡಲಿದೆ” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟರು.
ಆಂಧ್ರಪ್ರದೇಶವು ವಿಭಜನೆಯಾಗುವುದನ್ನು ವಿರೋಧಿ ಕಿರಣ್ ಕುಮಾರ್ 2014ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ತೊರೆದ ಇವರು ‘ಕಿರಣ್ ಜೈ ಸಮೈಕ್ಯಾ ಆಂಧ್ರ’ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಪಕ್ಷ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. 2018ರಲ್ಲಿ ಕಾಂಗ್ರೆಸ್‌ಗೆ ವಾಪಸ್ ಬಂದಿದ್ದರು. ಇದೀಗ ಕಾಂಗ್ರೆಸ್ ಕುರಿತು ಅಸಮಧಾನಗೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.