ಒಳ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸೂಕ್ತ ದಾಖಲೆ ಸಂಗ್ರಹ ಮಾಡಲು ಆಯೋಗ ಮಾಡ್ತೇವೆ. ಆಯೋಗ 3 ತಿಂಗಳಲ್ಲಿ ವರದಿ ಕೊಡಲಿದೆ. ಇವತ್ತೇ ಆಯೋಗಕ್ಕೆ ಜಡ್ಜ್ ನೇಮಕ ಮಾಡಲಾಗುತ್ತದೆ. ಆಯೋಗ ರಚನೆ ಹಿನ್ನೆಲೆಯಲ್ಲಿ ಹೊಸ ಹುದ್ದೆಯ ನೇಮಕ ಇಲ್ಲ. ಹಳೆಯ ಅಧಿಸೂಚನೆ ಪ್ರಕಾರ ನೇಮಕಾತಿ ನಡೆಯುತ್ತಿರುವುದು ಮಾತ್ರ ಮುಂದುವರಿಯಲಿದೆ ಎಂದಿದ್ದಾರೆ.
ಕ್ಯಾಬಿನೆಟ್ನಲ್ಲಿ ಒಳ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ಇದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ತೆಲಂಗಾಣ ಹಾಗೂ ರಾಜ್ಯ ಸರ್ಕಾರ ಮಾತು ಕೊಟ್ಟಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿ ಕೂಡ ಇತ್ತು. ಜನಸಂಖ್ಯೆ ಆಧಾರದಲ್ಲಿ ತೀರ್ಮಾನ ಮಾಡಲಿದ್ದೇವೆ. ಎಲ್ಲ ವರ್ಗಕ್ಕೆ ನ್ಯಾಯ ದೊರಕಬೇಕು. ಕಾಂಗ್ರೆಸ್ ಪಕ್ಷಕ್ಕೆ ಬದ್ದತೆ ಇದೆ ಎಂದಿದ್ದಾರೆ.
ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರಿದೆ ಎಂದು ಆರ್ ಅಶೋಕ್ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಒಳಮೀಸಲಾತಿ ಜಾರಿ ಇಷ್ಟ ಇಲ್ಲ. ಸುಪ್ರೀಂಕೋರ್ಟ್ ತೀರ್ಪು ಕೊಟ್ಟ ಮೇಲೆ ಇನ್ನೇನಿದೆ? ಎಂದು ಪ್ರಶ್ನಿಸಿದ್ದಾರೆ. ಸಂಪುಟದಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿದೆ. ಆಯೋಗದ ಮೇಲೆ ಮತ್ತೊಂದು ಆಯೋಗ ರಚನೆ ಆಗ್ತಿದೆ. ಆದರೆ ಒಳಮೀಸಲಾತಿ ಮಾತ್ರ ಸಿಕ್ತಿಲ್ಲ. ಸದಾಶಿವ ಆಯೋಗ ರಚಿಸಿ ವರದಿ ಕೊಡಲು ಹತ್ತು ವರ್ಷ ಹಿಡಿಯಿತು. ಈಗ ಈ ಸರ್ಕಾರ ಮತ್ತೊಂದು ಆಯೋಗ ರಚಿಸಿದೆ, ಇದು ವರದಿ ಕೊಡೋದು ಇನ್ನೆಷ್ಟು ವರ್ಷಕ್ಕೋ ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಮಾತನಾಡಿ, ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಆಯಾ ರಾಜ್ಯಗಳಿಗೆ ಒಳಮೀಸಲಾತಿ ಕೊಡುವ ಅಧಿಕಾರ ಇದೆ. ಆದರೆ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವಿಚಾರ ಇರೋ ಬಗ್ಗೆ ಹಿಂದಿನ ರಾತ್ರಿವರೆಗೂ ಸಚಿವರಿಗೆ ಗೊತ್ತಿರಲಿಲ್ಲ. ನಂತರ ಹೆಚ್ಚುವರಿ ಅಜೆಂಡಾದಲ್ಲಿ ಒಳಮೀಸಲಾತಿ ವಿಚಾರ ಸೇರಿಸಲಾಯ್ತು ಎಂದು ಟೀಕಿಸಿದ್ದಾರೆ. ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಈಗಾಗಲೇ ಪಡೆಯಲಾಗಿದೆ. ಮಾಧುಸ್ವಾಮಿ ವರದಿ ಆಧಾರದಲ್ಲಿ ಒಳಮೀಸಲಾತಿ ಕೊಡಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.