
ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತು ಅಂದ್ರೆ ನೇರವಂತಿಕೆ ಅನ್ನೋದು ಬಹುತೇಕ ಕರುನಾಡಿಗೆ ಗೊತ್ತಿರುವ ಸಂಗತಿ. ಒಮ್ಮೊಮ್ಮೆ ತನ್ನದೇ ಪಕ್ಷದ ನಾಯಕರ ವಿರುದ್ಧವೂ ನೇರಾನೇರವಾಗಿ ಮಾತನಾಡಿ ಚಳಿ ಬಿಡಿಸುವ ಜಾಯಮಾನದ ವ್ಯಕ್ತಿತ್ವ. ಆದರೆ ಇದೀಗ ಅದೇ ರಮೇಶ್ ಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ರಮೇಶ್ ಕುಮಾರ್ ಅರಣ್ಯ ಇಲಾಖೆಗೆ ಸೇರಿದ 61 ಎಕರೆ ಭೂಮಿಯನ್ನು ಒತ್ತುವತಿ ಮಾಡಿದ್ದಾರೆ ಎನ್ನುವ ವಿಚಾರ ಬಯಲಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನವರಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ನವೆಂಬರ್ 6 ರಂದು ಒತ್ತುವರಿ ಜಮೀನು ಬಗ್ಗೆ ಜಂಟಿ ಸರ್ವೇ ಮಾಡಲು ನಿರ್ಧಾರ ಮಾಡಲಾಗಿದೆ. ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಸರ್ವೇ ನಂಬರ್ 2 ರಲ್ಲಿ ಜಮೀನು ಒತ್ತುವರಿ ಮಾಡಿದ್ದಾರೆ ಎನ್ನಲಾಗಿದ್ದು, ಸರ್ವೇ ಇಲಾಖೆ ವರದಿ ಬಳಿಕ ಅಂತಿಮ ಆಗಲಿದೆ. ಹೈಕೋರ್ಟ್ ಆದೇಶ ಅನುಸರಿಸಿ ಕೇಂದ್ರ ಸರ್ಕಾರ ಸರ್ವೇ ಇಲಾಖೆಗೆ ಸೂಚನೆ ಕೊಟ್ಟಿದ್ದು, ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ಸೂಚನೆ ಆಧರಿಸಿ ಕ್ರಮಕೈಗೊಳ್ಳಲಾಗಿದೆ. ಜಂಟಿ ಸರ್ವೇ ಸಮಯದಲ್ಲಿ ಸ್ಥಳದಲ್ಲಿ ಇರುವಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ನೋಟಿಸ್ ನೀಡಲಾಗಿದೆ.

ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಶ್ರೀನಿವಾಸಪುರದಲ್ಲಿ ಜನಪ್ರತಿನಿಧಿಯೊಬ್ಬ 120 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. 61 ಎಕರೆ ಭೂಮಿಯನ್ನ ಸರ್ವೆ ಮಾಡಿ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಆದೇಶ ಆಗಿದೆ. ಆ ಒತ್ತುವರಿ ಭೂಮಿ ವಿಷಯದಲ್ಲಿ ಅರಣ್ಯ ಸಚಿವರು ಅಧಿಕಾರಿಗಳಿಗೆ ಏನ್ ಸೂಚನೆ ಕೊಟ್ಟಿದ್ದಾರೆ ಅಂತ ಗೊತ್ತಿದೆ. ಆ ವಿಚಾರದಲ್ಲಿ ಈಶ್ವರ್ ಖಂಡ್ರೆ ಏನ್ ಮಾಡ್ತಿದ್ದೀಯಪ್ಪ..? ಬಡವರಿಗೆ ಒಂದು ನ್ಯಾಯ..! ನಿಮ್ಮ ಕಾಂಗ್ರೆಸ್‌ನವರಿಗೆ ಒಂದು ನ್ಯಾಯನಾ..? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಟೀಕೆಗೆ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ. ಎಲ್ಲರಿಗೂ ಒಂದೇ ನ್ಯಾಯ ಇದೆ. ಕುಮಾರಸ್ವಾಮಿ ಮಾಜಿ ಸಿಎಂ ಆಗಿದ್ದು, ದಾಖಲೆ ಪರಿಶೀಲಿಸಿ ಮಾತನಾಡ್ಬೇಕು. ಕುಮಾರಸ್ವಾಮಿ ಆಲೋಚನೆ, ಆತ್ಮಾವಲೋಕನ ಮಾಡಿಕೊಳ್ಳಲಿ.. ಬೆಂಗಳೂರು ಬೆಳೆಯುತ್ತಿದೆ. ಅರಣ್ಯ, ಪ್ರಕೃತಿ, ಪರಿಸರ ಉಳಿಬೇಕಾ..? ಅಥವಾ ಕಾಂಕ್ರಿಟ್ ಜಂಗಲ್ ಆಗ್ಬೇಕಾ..? ಎಂದು ಪ್ರಶ್ನಿಸಿದ್ದಾರೆ. 60ರ ದಶಕದಲ್ಲಿ ಉದ್ಯೋಗಕ್ಕಾಗಿ ಕೈಗಾರಿಕೆ ಮಾಡ್ಬೆಕೆಂಬ ಉದ್ದೇಶದಿಂದ ಎಚ್ಎಂಟಿಗೆ ಭೂಮಿ ಕೊಟ್ಟಿದ್ದೇವೆ.. ಈಗ ಖಾಸಗಿಯವರಿಗೆ, ಬಿಲ್ಡರ್ಸ್‌ಗಳಿಗೆ ಮಾರಾಟ ಮಾಡಿ 330 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. 170 ಎಕರೆ ಜಮೀನು ಮಾರಾಟ ಮಾಡಿದ್ದಾರೆ, ಇದು ಅಕ್ರಮ ಎಂದಿದ್ದಾರೆ..
