ಚಿಕ್ಕಮಗಳೂರು: ಸುಮಾರು 1200 ಮನೆಗಳಿರುವ ದೊಡ್ಡ ಗ್ರಾಮದಲ್ಲಿ ಮೃತಪಟ್ಟವರ ಶವಸಂಸ್ಕಾರಕ್ಕೆ ಒಂದು ಸ್ಮಶಾನ ಇಲ್ಲದ ಪರಿಸ್ಥಿತಿ ಎದುರಾಗಿದೆ. ಹಿರಿಯರೊಬ್ಬರು ಮೃತಪಟ್ಟಾಗ ಅಂತ್ಯಕ್ರಿಯೆಗೆ ಜಾಗವಿಲ್ಲದೇ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರಲ್ಲೇ ಶವವಿಟ್ಟು ಅಹೋರಾತ್ರಿ ಧರಣಿ ಮಾಡಿದ ಪ್ರಸಂಗ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ 1200 ಮನೆಗಳಿವೆ. ಆದರೆ ಪುಟ್ಟದೊಂದು ಸ್ಮಶಾನವಿಲ್ಲ. ಪ್ರತಿ ಬಾರಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟಾಗ ಸ್ಮಶಾನವಿಲ್ಲದೆ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಪರದಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಉಡೇವಾ ಗ್ರಾಮದಲ್ಲಿ ನಿನ್ನೆ 75 ವರ್ಷದ ವೃದ್ಧ ರಂಗನಾಥ್ ಅನಾರೋಗ್ಯದಿಂದ ಮೃತ ಪಟ್ಟರು. ಮೃತಪಟ್ಟ ರಂಗನಾಥ್ ಅವರ ಶವಸಂಸ್ಕಾರ ಮಾಡಲು ಜಾಗವಿಲ್ಲದೆ ಗ್ರಾಮಸ್ಥರು ಪರದಾಡಿದ್ರು. ಅಂತಿಮವಾಗಿ ಯಾವುದೇ ಮಾರ್ಗ ಕಾಣದೆ ಗ್ರಾಮ ಪಂಚಾಯ್ತಿ ಆವರಣಕ್ಕೆ ಶವ ತಂದಿಟ್ಟು ಸ್ಮಶಾನಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.
ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಶವ ಸಂಸ್ಕಾರ ಮಾಡಲು ಸ್ಮಶಾನದ ಜಾಗವನ್ನ ತೆರವು ಮಾಡಿಸುವಂತೆ ಪಟ್ಟು ಹಿಡಿದು ಉಡೇವಾ ಗ್ರಾಮ ಪಂಚಾಯತಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ರು. ಸ್ಥಳಕ್ಕೆ ಬಂದ ಲಿಂಗದಳ್ಳಿ ಪೊಲೀಸರು ಗ್ರಾಮಸ್ಥರ ಮನವೊಲಿಸಿ ರಂಗನಾಥ್ ಅವರ ಅಂತ್ಯಕ್ರಿಯೆಯನ್ನ ಪರ್ಯಾಯ ಜಾಗದಲ್ಲಿ ಮಾಡಿಸಿದ್ದಾರೆ.