ಚಿಕ್ಕಬಳ್ಳಾಪುರ ಜಿಲ್ಲೆಯ ಅವಲಗುರ್ಕಿ ಸಮೀಪದ ಈಶಾ ಫೌಂಡೇಶನ್ನಲ್ಲಿ ಮಹಾಶಿವರಾತ್ರಿಯ ಸಡಗರದ ಮಧ್ಯೆ ಬೆಂಕಿ ಅವಘಡ ಸಂಭವಿಸಿದೆ. ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಸೃಷ್ಟಿಸಿತ್ತು.ಪೋಲಿಸರ ಮುನ್ನೆಚ್ಚರಿಕೆ ಕ್ರಮದಿಂದ ಯಾರಿಗೂ ಏನು ಆಗದೆ, ಬೆಂಕಿ ನಂದಿಸಲಾಗಿದೆ

ಈಶಾ ಫೌಂಡೇಶನ್ ಆವರಣದ ನಾಗಮಂಟಪದ ಎದುರುಗಡೆ ಇರುವ ಅರಣ್ಯ ಪ್ರದೇಶದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ದಟ್ಟವಾದ ಹೊಗೆ ಆವರಿಸಿದೆ. ಲಕ್ಷಾಂತರ ಜನ ಸೇರಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಕೂಡಲೇ ಆಗಮಿಸಿದ ಅಗ್ನಿಶಾಮಕ ದಳ ಹರಸಾಹಸ ಪಟ್ಟು ಬೆಂಕಿ ನಂದಿಸಿದರು.

ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿರುವ ಶಂಕೆಯಿದೆ, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಒಂದೆಡೆ ಆಧ್ಯಾತ್ಮಿಕ ಸಂಭ್ರಮವಿದ್ದರೆ, ಮತ್ತೊಂದೆಡೆ ಅರಣ್ಯದ ಬೆಂಕಿ ಮತ್ತು ಟ್ರಾಫಿಕ್ ಅವಾಂತರಗಳು ಈ ಬಾರಿಯ ಶಿವರಾತ್ರಿಗೆ ಭಾರಿ ಸವಾಲಾಗಿಸಿತ್ತು.






