ಬಿಜೆಪಿ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 65 ದಿನಗಳಿಂದ ರೈತರು ದೆಹಲಿಯಲ್ಲಿ ನಡೆಸುತ್ತಿರುವ ನಿರಂತರ ಹೋರಾಟ ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳ ಎಲ್ಲಾ ಕುತಂತ್ರಗಳ ಹೊರತಾಗಿಯೂ ಮುಂದುವರಿದೆ.
ಗಣರಾಜ್ಯೋತ್ಸವದಂದು ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ ವೇಳೆ ಬಿಜೆಪಿ ನಾಯಕರೊಂದಿಗೆ ಆಪ್ತರಾಗಿದ್ದವರೇ ರೈತರ ಗುಂಪೊಂದಕ್ಕೆ ಪ್ರಚೋದನೆ ನೀಡಿ ಕೆಂಪುಕೋಟೆಗೆ ನುಗ್ಗಿಸಿ ಅಲ್ಲಿ ಸಿಖ್ ಧ್ವಜ ಹಾರಿಸಿದ ಬಳಿಕ, ರೈತರ ಮೇಲೆ ದಂಗೆ, ದೇಶದ್ರೋಹ, ಹಿಂಸಾಚಾರಕ್ಕೆ ಕುಮ್ಮಕ್ಕು ಮತ್ತಿತರ ನೂರಾರು ಕೇಸು ದಾಖಲಿಸಿ, ಚಳವಳಿಯ ನೇತಾರರ ವಿರುದ್ಧ ಕಠಿಣ ಕೇಸು ಜಡಿದು ಹೋರಾಟವನ್ನು ಬಗ್ಗುಬಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ನಡೆಸಿದ ಎಲ್ಲಾ ಯತ್ನಗಳು ಆಳುವ ಮಂದಿಗೇ ತಿರುಗುಬಾಣವಾದ್ದದ್ದು ಈಗ ಗೊತ್ತಿರುವ ವಿಚಾರ.
ರೈತರ ಮೇಲೆ ಕೇಸು ಹಾಕಿ, ಹೋರಾಟಗಾರರನ್ನು ಧರಣಿ ಸ್ಥಳದಿಂದ ತೆರವು ಮಾಡಲು ಮುಂದಾದ ಸರ್ಕಾರಕ್ಕೆ, ರೈತರು ಸರಿಯಾದ ತಿರುಗೇಟು ನೀಡಿದರು. ರೈತ ನಾಯಕ ರಾಕೇಶ್ ಟಿಕಾಯತ್ ಸರ್ಕಾರ ತಮ್ಮ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಮತ್ತು ದೇಶದ ಅನ್ನದಾತರಿಗೆ ಬಗೆಯುತ್ತಿರುವ ದ್ರೋಹವನ್ನು ಪ್ರಸ್ತಾಪಿಸಿ ಕಣ್ಣೀರಿಟ್ಟರು. ಗಣರಾಜ್ಯೋತ್ಸವ ದಿನ ರಾತ್ರಿ ಅವರ ಆ ಹನಿ ಕಣ್ಣೀರು, ಮಾರನೇ ದಿನ ಬೆಳಗಿನ ಜಾವದ ಹೊತ್ತಿಗೆ ದೆಹಲಿ ಗಡಿಯಲ್ಲಿ ಜನಸಾಗರವನ್ನೇ ಸೇರಿಸಿಬಿಟ್ಟಿತು. ಪ್ರವಾಹದೋಪಾದಿಯಲ್ಲಿ ರೈತರು ಟಿಕಾಯತ್ ಬೆನ್ನಿಗೆ ನಿಂತರು. ಆಗಲೂ ಸರ್ಕಾರ ಕುತಂತ್ರಗಳನ್ನು ನಿಲ್ಲಿಸಲಿಲ್ಲ. ಧರಣಿನಿರತ ರೈತರ ಮೇಲೆ ಸ್ಥಳೀಯರ ವೇಷದಲ್ಲಿ ತನ್ನ ಪಕ್ಷದ ಕಾರ್ಯಕರ್ತರನ್ನು ಛೂ ಬಿಟ್ಟು ಪೆಟ್ರೋಲ್ ಬಾಂಬ್, ಕಲ್ಲು- ಗಾಜಿನ ಬಾಟಲಿಗಳ ದಾಳಿ ನಡೆಸಿತು.
ಅದರೂ ಭದ್ರತೆಯ ನೆಪದಲ್ಲಿ ರೈತರನ್ನು ಸುತ್ತುವರಿದಿದ್ದ ಸಾವಿರಾರು ಮಂದಿ ಪ್ಯಾರಾ ಮಿಲಿಟರಿ ಪಡೆಯ ಸಾಕ್ಷಾತ್ ಕಣ್ಣೆದುರೇ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿಯನ್ನು ಅವರೆಲ್ಲಾ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದಂತೆ ನೋಡಿಕೊಂಡು ನಿಂತಿದ್ದರು! ಅದರಲ್ಲೂ ದೆಹಲಿ ಪೊಲೀಸರಂತೂ ಪೆಟ್ರೋಲ್ ಬಾಂಬ್, ಕಲ್ಲು ತೂರುವರ ಜೊತೆಯಲ್ಲೇ ನಿಂತು ಅವರ ದಾಳಿಗಳಿಗೆ ಪರೋಕ್ಷ ಕುಮ್ಮಕ್ಕು ನೀಡಿದರು. ರೈತರ ಪ್ರತಿ ದಾಳಿ ನಡೆಸಿದಾಗ ಪೊಲೀಸರು ರಾಜಾರೋಷವಾಗಿ ದಾಳಿಕೋರ ದುಷ್ಕರ್ಮಿಗಳ ಪರ ರೈತರ ವಿರುದ್ಧದ ವರ್ತಿಸಿದರೇ ವಿನಃ ಶಾಂತಿಯುತ ಧರಣಿನಿರತರಾಗಿದ್ದ ರೈತರ ಪರ ಅಲ್ಲ!
ಅಲ್ಲಿಗೆ ಸರ್ಕಾರವೇ, ಈ ಹಿಂದೆ ಜೆಎನ್ ಯು, ಸಿಎಎ-ಎನ್ ಆರ್ ಸಿ ಹೋರಾಟಗಾರರ ಮೇಲೆ ನಡೆಸಿದ ಇಂತಹದ್ದೇ ದಾಳಿ ತಂತ್ರವನ್ನು ರೈತರ ಮೇಲೂ ಪ್ರಯೋಗಿಸಿರುವುದು ಅನುಮಾನಕ್ಕೆ ಎಡೆಯಿಲ್ಲದಂತೆ ಖಚಿತವಾಗಿ ಹೋಯಿತು.
ಜನವರಿ 30ರ ಹುತಾತ್ಮರ ದಿನದಂದು ಗಾಂಧಿ ಹತ್ಯೆಯ ಶೋಕಾಚರಣೆಯ ಜೊತೆಗೆ ರೈತರು, ತಾವೂ ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದರು. ರೈತರ ಸತ್ಯಾಗ್ರಹಕ್ಕೆ ಪೂರಕವಾಗಿ, ಹೋರಾಟವನ್ನು ಬೆಂಬಲಿಸಿ ತಾವೂ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಅಣ್ಣಾ ಹಜಾರೆ ಘೋಷಿಸಿದರು. 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಜನಲೋಕಪಾಲ್ ಮಸೂದೆಗೆ ಆಗ್ರಹಿಸಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟದ ನೇತೃತ್ವ ವಹಿಸಿದ್ದ ಹಜಾರೆ ಅವರು, ರೈತ ಬೇಡಿಕೆಗಳನ್ನು ಬೆಂಬಲಿಸಿ ಉಪವಾಸ ಕೂರುತ್ತೇನೆ ಎಂದದ್ದ ಸಹಜವಾಗೇ ಹೋರಾಟಕ್ಕೆ ದೊಡ್ಡ ಬಲ ಬರಲಿದೆ. ಸರ್ಕಾರ ಮತ್ತು ಬಿಜೆಪಿಯ ಮೇಲೆ ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಒತ್ತಡ ಬೀಳಲಿದೆ. ಮೂಲತಃ ಹಿಂದಿನ ಭ್ರಷ್ಟಾಚಾರ ವಿರೋಧಿ ಹೋರಾಟದ ವೇಳೆ ಅಣ್ಣಾ ಹಜಾರೆಯೊಂದಿಗೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಿದ್ದು ದೇಶದ ಜನಸಾಮಾನ್ಯರಿಗಿಂತ ಹೆಚ್ಚಾಗಿ ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್ ಮುಂತಾದ ಬಲಪಂಥೀಯ ಬಿಜೆಪಿ ಸಹ ಸಂಘಟನೆಗಳ ಕಾರ್ಯಕರ್ತರೇ. ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟವಾಗಿ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಪರಿವರ್ತಿಸಿದ ಬಲಪಂಥೀಯ ಶಕ್ತಿಗಳು, ಅಂತಿಮವಾಗಿ ದೇಶವ್ಯಾಪಿ ಅದನ್ನು ವಿಸ್ತರಿಸುವಲ್ಲಿ ಮತ್ತು ಬಿಜೆಪಿಯನ್ನು 2014ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವಲ್ಲಿ ದೊಡ್ಡ ಪಾತ್ರ ವಹಿಸಿದ್ದವು.
ಆ ಬಳಿಕ ಕಳೆದ ಆರು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬೆಲೆ ಏರಿಕೆ, ಕೃಷಿ ವಿರೋಧಿ ನೀತಿ, ನೋಟು ರದ್ದತಿ, ಕರೋನಾ ಲಾಕ್ ಡೌನ್ ವೇಳೆ ವಲಸೆ ಕಾರ್ಮಿಕರನ್ನು ಹಾದಿಬೀದಿ ಹೆಣವಾಗಿಸಿದ ಕ್ರಮಗಳ ಸಂದರ್ಭದಲ್ಲೆಲ್ಲಾ ದೇಶದ ಜನಪರ ಹೋರಾಟಗಾರರು ಅಣ್ಣಾ ಹಜಾರೆಯವರ ದನಿಗಾಗಿ ನಿರೀಕ್ಷಿಸುತ್ತಿದ್ದರು. ಅವರದೇ ಹೋರಾಟದ ಪ್ರತಿಫಲವಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರದ ಅನ್ಯಾಯಗಳ ವಿರುದ್ಧ ಅವರು ಮಾತನಾಡಬೇಕು, ಹೋರಾಟ ನಡೆಸಬೇಕು, ಉಪವಾಸ ಕೂರಬೇಕು ಎಂದು ಜನ ಬಯಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಪ್ರತಿ ಬಾರಿ ಸರ್ಕಾರದ ಜನ ವಿರೋಧಿ, ವಿವೇಚನಾಹೀನ ನೀತಿ-ನಿಲುವುಗಳು ಜಾರಿಗೆ ಬಂದಾಗೆಲ್ಲಾ ಹಜಾರೆ ಏನು ಮಾಡುತ್ತಿದ್ದಾರೆ? ಮಲಗಿರುವ ಅಣ್ಣಾ ಅವರನ್ನು ಎಬ್ಬಿಸಿ ಎಂದು ಟ್ರೋಲ್ ಚಾಲ್ತಿಗೆ ಬರುತ್ತಿತ್ತು.
ಇದೀಗ ರೈತರ ವಿಷಯದಲ್ಲಿ ಅವರು ಕನಿಷ್ಟ ಅರವತ್ತೈದು ದಿನಗಳ ಬಳಿಕವಾದರೂ ಹೋರಾಟದ ಬಗ್ಗೆ ಬಾಯಿ ಬಿಟ್ಟರಲ್ಲ, ರೈತರ ಹಕ್ಕೊತ್ತಾಯ ಬೆಂಬಲಿಸಿ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಘೋಷಿಸಿದರಲ್ಲಾ ಎಂಬ ಸಮಾಧಾನ ಹಲವರದ್ದಾಗಿತ್ತು. ಬಹುತೇಕರು, ಅಣ್ಣಾ ಹೋರಾಟಕ್ಕಿಳಿಯವುದು ಇಡೀ ರೈತ ಹೋರಾಟದ ದಿಕ್ಕನ್ನೇ ಬದಲಿಸಿಬಿಡಲಿದೆ ಎಂದೇ ಸಂಭ್ರಮಿಸಿದ್ದರು.
ಆದರೆ, ಶುಕ್ರವಾರ ಬೆಳಗ್ಗೆ ರೈತ ಹೋರಾಟ ಬೆಂಬಲಿಸಿ, ಮೂರು ಕೃಷಿ ಕಾಯ್ದೆಗಳ ವಿರುದ್ಧ ಉಪವಾಸ ಕೂರುವುದಾಗಿ ಹೇಳಿದ್ದ ಅಣ್ಣಾ ಹಜಾರೆ ಅವರು, ಮಧ್ಯಾಹ್ನದ ಊಟದ ಹೊತ್ತಿನ ಬಳಿಕ ತಮ್ಮ ನಿರ್ಧಾರದಲ್ಲಿ ಯೂಟರ್ನ್ ಹೊಡೆದರು. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಕೃಷಿ ಖಾತೆ ಕಿರಿಯ ಸಚಿವ ಕೈಲಾಶ್ ಚೌಧುರಿ ಅವರು ತಮ್ಮನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಯ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ತಾವು ತಮ್ಮ ಉದ್ದೇಶಿತ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿರುವುದಾಗಿ ಅಣ್ಣಾ ಸಂಜೆಯ ಹೊತ್ತಿಗೆ ಘೋಷಿಸಿದರು!
ರೈತ ಹೋರಾಟಕ್ಕೆ ಬೆಂಬಲಿಸಿ ಎಂದೂ ರೈತ ಸಂಘಟನೆಗಳು ಬಹುಶಃ ಅವರನ್ನು ಆಹ್ವಾನಿಸಿರಲಿಲ್ಲ. ಆದರೂ ಅಣ್ಣಾ ಹಜಾರೆ ಅವರು ಬರೋಬ್ಬರಿ ಆರೇಳು ವರ್ಷಗಳ ಅಜ್ಞಾತವಾಸದಿಂದ ತಾವೇ ತಾವಾಗಿ ಎದ್ದುಬಂದು ಸತ್ಯಾಗ್ರಹ ಕೈಗೊಳ್ಳುವ ಘೋಷಣೆ ಮಾಡಿದ್ದರು. ಘೋಷಣೆ ಮಾಡಿದಷ್ಟೇ ದಿಢೀರಾಗಿ ಮತ್ತು ಅದೇ ವೇಗದಲ್ಲಿ ಸತ್ಯಾಗ್ರಹ ಕೈಬಿಟ್ಟಿರುವುದಾಗಿಯೂ ಹೇಳಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಮಗೆ, ಕನಿಷ್ಟ ಬೆಂಬಲ ಬೆಲೆ ಕುರಿತ ತಮ್ಮ ಬೇಡಿಕೆ ಸೇರಿದಂತೆ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂಬಂಧ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲು ಸ್ವತಃ ಸಚಿವರ ನೇತೃತ್ವದಲ್ಲಿ ನೀತಿ ಆಯೋಗವೂ ಸೇರಿದಂತೆ ವಿವಿಧ ವಲಯದಿಂದ ತಾವು ಸೇರಿದಂತೆ ಹಲವು ಶಿಫಾರಸು ಮಾಡುವ ಮಂದಿ ಆ ಸಮಿತಿಯಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ. ತಾವು ಅವರಿಗೆ 15 ಅಂಶಗಳ ಸೂತ್ರವನ್ನು ಮುಂದಿಟ್ಟಿದ್ದೇನೆ. ಆ ಸೂತ್ರಕ್ಕೆ ಅವರು ಒಪ್ಪಿದ್ದಾರೆ. ಹಾಗಾಗಿ ತಮ್ಮ ಸತ್ಯಾಗ್ರಹವನ್ನು ಕೈಬಿಟ್ಟಿರುವುದಾಗಿ ಹಜಾರೆ ಹೇಳಿದ್ದಾರೆ.
ಆದರೆ, ಹಜಾರೆ ಅವರು ತಮ್ಮ ಮತ್ತು ಸಚಿವರು ಹಾಗೂ ಮಾಜಿ ಸಿಎಂ ನಡುವಿನ ಮಾತುಕತೆಯ ವಿವರಗಳನ್ನಾಗಲೀ, ತಾವು ಅವರ ಮುಂದಿಟ್ಟಿರುವ ಬೇಡಿಕೆಗಳು ಯಾವುವು ಎಂಬುದರ ಬಗ್ಗೆಯಾಗಲೀ, ಅಥವಾ ತಾವು ಪ್ರಸ್ತಾಪಿಸಿದ 15 ಅಂಶಗಳ ಸೂತ್ರವೇನು ಎಂಬ ಬಗ್ಗೆಯಾಗಲೀ ಯಾವುದೇ ವಿವರ ನೀಡಿಲ್ಲ. ಹಾಗಾಗಿ ಅಣ್ಣಾ ಅವರ ಈ ನಡೆ ಬಹುಶಃ ರೈತರ ಹೋರಾಟದ ಮೇಲೆ ಯಾವುದೇ ಪರಿಣಾಮಬೀರದು. ಏಕೆಂದರೆ; ಪ್ರಮುಖವಾಗಿ ಅಣ್ಣ, ತಮ್ಮ ಸತ್ಯಾಗ್ರಹದ ಬಗ್ಗೆಯಾಗಲೀ, ಆ ಬಳಿಕ ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರೊಂದಿಗಿನ ತಮ್ಮ ಮಾತುಕತೆಯ ಬಗ್ಗೆಯಾಗಲೀ, ಅಥವಾ ಅವರ ಆಶ್ವಾಸನೆಯ ಮೇಲೆ ಸತ್ಯಾಗ್ರಹ ಕೈಬಿಟ್ಟ ಬಗ್ಗೆಯಾಗಲೀ, .. ಯಾವ ಹಂತದಲ್ಲೂ ಹೋರಾಟನಿರತ ರೈತ ನಾಯಕರೊಂದಿಗೆ ಸಮಾಲೋಚಿಸಿದ ಯಾವ ವಿವರಗಳು ಬಹಿರಂಗಗೊಂಡಿಲ್ಲ. ಅಂದರೆ; ಇದು ನಿದ್ರೆಯಿಂದ ಎದ್ದು ತಡಬಡಾಯಿಸಿ ಮತ್ತೆ ಗೊರಕೆ ಹೊಡೆಯುವಂತಹ ಒಂದು ವರಸೆ ಅಷ್ಟೇ!
ಜೊತೆಗೆ, ಹೋರಾಟವನ್ನು ದಿಕ್ಕುತಪ್ಪಿಸುವ, ಮಸಿ ಬಳಿಯುವ ಮತ್ತು ಬಗ್ಗುಬಡಿಯುವ ಎಲ್ಲಾ ತಂತ್ರ- ಕುತಂತ್ರಗಳ ಬಳಿಕವೂ ಯಶಸ್ವಿಯಾಗಿ ರೈತ ಹೋರಾಟ ಮುಂದುವರಿದಿರುವುದು ಮತ್ತು ದಿನದಿಂದ ದಿನಕ್ಕೆ ಹೋರಾಟಕ್ಕೆ ದೇಶದ ಮೂಲೆಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ದಿಕ್ಕೆಟ್ಟಿರುವ ಆಡಳಿತ, ಮಲಗಿದ ಮಾಜಿ ಗಾಂಧಿವಾದಿಯನ್ನು ಎಬ್ಬಿಸಿ ಮತ್ತೊಂದು ತಂತ್ರ ಹೂಡಿದೆಯೇ ಎಂಬ ಅನುಮಾನ ಕೂಡ ಎದ್ದಿದೆ. ದೇಶದ ಮಧ್ಯಮವರ್ಗ ಮತ್ತು ಬಲಪಂಥೀಯ ಧೋರಣೆಯ ಬಿಜೆಪಿ ಮತಬ್ಯಾಂಕ್ ಗೆ ‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚಿಸಿದ ಕೃಷಿ ಕಾಯ್ದೆಯ ಬಗ್ಗೆ ಅಣ್ಣಾ ಹಜಾರೆಯಂತಹ ಗಾಂಧಿವಾದಿಗೇ ಮನವರಿಕೆಯಾಗಿದೆ. ಕಾಯ್ದೆಯ ಕುರಿತ ವಿವರ ಪಡೆದ ಬಳಿಕ ಅವರು ಹಮ್ಮಿಕೊಂಡಿದ್ದ ಹೋರಾಟವನ್ನೇ ಕೈಬಿಟ್ಟಿದ್ದಾರೆ’ ಎಂಬ ಸಂದೇಶ ರವಾನಿಸುವ ಮೂಲಕ, ದೆಹಲಿಯಲ್ಲಿ ನಡೆಯುತ್ತಿರುವ ನೈಜ ರೈತ ಹೋರಾಟ ಬಿಜೆಪಿ ವಿರುದ್ಧ ಹೋರಾಟ, ಪಿತೂರಿ ಎಂಬ ಭಾವನೆ ಮೂಡಿಸುವ ತಂತ್ರಗಾರಿಕೆಯೂ ಇರಬಹುದು!
ಆ ಹಿನ್ನೆಲೆಯಲ್ಲಿ; ಮಾಜಿ ಗಾಂಧಿವಾದಿ ಹಜಾರೆ, ಬಿಜೆಪಿಗೆ ಹರಾಜಾಗಿದ್ದಾರೆ ಎಂಬ ಸಾಮಾಜಿಕ ಜಾಲತಾಣದ ವ್ಯಂಗ್ಯದ ಮಾತುಗಳಲ್ಲಿ ಹುರುಳಿಲ್ಲದೇ ಇಲ್ಲ! 2014ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಹೆಸರಿನಲ್ಲಿ ಕಾಂಗ್ರೆಸ್ ನೇತೃತ್ವದ ಅಂದಿನ ಯುಪಿಎ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಬಿಜೆಪಿಯ ದಾಳವಾಗಿ ಕೆಲಸ ಮಾಡಿದ್ದ ಅಣ್ಣಾ, ಇದೀಗ ರೈತರ ವಿಷಯದಲ್ಲಿ ಕೂಡ ಅಂತಹದ್ದೇ ದಾಳವಾಗಿ ಉರುಳಿದರಾ? ಎಂಬ ಪ್ರಶ್ನೆಗೆ ಮುಂದಿನ ದಿನಗಳು ಉತ್ತರ ನೀಡಲಿವೆ!