ಸತತ ಒಂದು ವರ್ಷದ ಹೋರಾಟದ ನಂತರ ಕೇಂದ್ರ ಸರ್ಕಾರ ತನ್ನ ವಿವಾದಾತ್ಮಕ ಕೃಷಿ ಕಾಯ್ದೆ ಅನ್ನು ಇಂದು ಶುಕ್ರವಾರ ಬೆಳಿಗ್ಗೆ ಹಿಂಪಡೆಯುವುದಾಗಿ ಹೇಳಿದೆ. ಈ ಕುರಿತು ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇದು ರೈತರಿಗೆ ಸಂದ ಜನ ಇದುವೇ ಸ್ವತಂತ್ರ್ಯೋತ್ಸವ ಎಂದಿದ್ದಾರೆ.
ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ. ರೈತ ಹೋರಾಟಗಾರರಿಗೆ ಅಭಿನಂದನೆಗಳು.
ಕೃಷಿಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ,
ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು.
ಇದುವೇ ರೈತರ ಸ್ವಾತಂತ್ರ್ಯೋತ್ಸವ ಎಂದಿದ್ದಾರೆ.
ಕೃಷಿ ಕಾಯ್ದೆಯಷ್ಟೇ ಅಲ್ಲ, ಕೇಂದ್ರ ಬಿಜೆಪಿ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು. ಇದು ವಿರಮಿಸುವ ಕಾಲ ಅಲ್ಲ, ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ ಸ್ಪೂರ್ತಿ ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ಧದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಮೋದಿ, ನಮ್ಮ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.