
ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಬಳಿಕ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಮುನಿರತ್ನರನ್ನು ಭೇಟಿ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷದ ಶಾಸಕರ ಮೇಲೆ ದಬ್ಬಾಳಿಕೆ ಆಗ್ತಿದೆ. ಪೊಲೀಸರನ್ನ ಬಳಸಿಕೊಂಡು ದಬ್ಬಾಳಿಕೆ ಮಾಡಲಾಗಿದೆ. ಸಿ.ಟಿ ರವಿ ಪ್ರಕರಣದಲ್ಲಿ ಪೊಲೀಸರು ಹೇಗೆ ನಡೆಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ಇದ್ಯಾವುದು ಸರ್ಕಾರದ ಕುಮ್ಮಕ್ಕು ಇಲ್ಲದೆ ಆಗಲ್ಲ, ಮುನಿರತ್ನ ಮೇಲೆ ದಾಳಿ ಸಣ್ಣ ಪ್ರಕರಣವಲ್ಲ ಎಂದಿದ್ದಾರೆ.
ಈ ಘಟನೆಗಳು ಷಡ್ಯಂತ್ರಗಳಿಂದ ನಡೆಯುತ್ತಿದೆ, ಇದೆಲ್ಲಾ ಕಾರ್ಯಕರ್ತರ ಮನಸ್ಸಿಗೆ ಬಹಳ ಬೇಜಾರಾಗಿದೆ. ಬೆದರಿಕೆ, ಒತ್ತಡ ಹಾಕಿ ಏನೂ ಮಾಡಲು ಆಗಲ್ಲ. ಜನಪ್ರತಿನಿಧಿಗಳನ್ನ ಬೆದರಿಸುವುದು ಅಕ್ಷ್ಯಮ್ಯ ಅಪರಾಧ. ಮುನಿರತ್ನ ಗನ್ ಮ್ಯಾನ್ ವಿತ್ ಡ್ರಾ ಮಾಡಿದ್ದಾರೆ. ಅವರು ಜನಪ್ರತಿನಿಧಿಗಳು ಅಲ್ವಾ..? ಮುನಿರತ್ನ ಅವರು ಗಟ್ಟಿಯಾಗಿದ್ದಾರೆ. ಬಲಾಢ್ಯರು ಅಂತ ಅವರನ್ನ ಕುಗ್ಗಿಸುವ ಕೆಲಸ ಮಾಡಿದ್ದಾರೆ. ನಮ್ಮ ಶಾಸಕರ ವಿರುದ್ಧ ಷಡ್ಯಂತ್ರ ಬಂದಾಗ ಅವರ ಬೆಂಬಲಕ್ಕೆ ಬಂದಿದ್ದೇನೆ ಎಂದಿದ್ದಾರೆ. ಮುನಿರತ್ನ ಮೇಲಿನ ಹಲ್ಲೆ ಇಡೀ ಕ್ಷೇತ್ರದ ಜನರಿಗೆ ಮಾಡುವ ಅಪಮಾನ. ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ನಾವು ಇದನ್ನ ಖಂಡಿಸುತ್ತೇವೆ ಎಂದಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಮುನಿರತ್ನ ಮೇಲೆ ಆರೋಪಗಳಿವೆ. ಅವರಿಗೆ ಕಾನೂನು ರೀತಿಯಲ್ಲಿ ಪೊಲೀಸರು ಕ್ರಮ ತಗೊಳ್ತಾರೆ. ಆದರೆ ಅವರು ಕ್ಷೇತ್ರಕ್ಕೆ ಹೋಗಬಾರದು ಎಂದರೆ ಹೇಗೆ..? ಸರ್ಕಾರವೇ ಪೊಲೀಸರ ಮೂಲಕ ಒತ್ತಡ ಹೇರುತ್ತಿದೆ. ಕಾನೂನು ಬಿಟ್ಟು ಈ ರೀತಿ ಮಾಡೋದು ಶೋಭೆ ತರಲ್ಲ ಎಂದಿದ್ದಾರೆ.
ಮಾಜಿ ಸಿಎಂ ಹಾಗು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ನಾಯಕರ ಅಸಹನೆ ಮಿತಿ ಮೀರುತ್ತಿದೆ. ಕಾನೂನು ಕೈಗೆತ್ತಿಕೊಳ್ಳಬಾರದು ಅನ್ನೋ ಕನಿಷ್ಟ ಜ್ಞಾನ ಕೂಡ ಕಾಂಗ್ರೆಸ್ನವರಿಗೆ ಇಲ್ಲ. ಹೀಗಿದ್ಮೇಲೆ ನೂರು ವರ್ಷದ ಕಾಂಗ್ರೆಸ್ ಅಧಿವೇಶನ ಕಾರ್ಯಕ್ರಮ ಮಾಡಿ ಪ್ರಯೋಜನ ಏನು ಅಂತ ಪ್ರಶ್ನೆ ಮಾಡಿದ್ದಾರೆ.

ಇನ್ನು ಸಂಸದ ಮಂಜುನಾಥ್ ಮಾತನಾಡಿ, ನಾನು ಮುನಿರತ್ನ ಅವರನ್ನ ನೋಡಿ ಪರೀಕ್ಷೆ ಮಾಡಿದ್ದೇನೆ. ಅವರ ತಲೆಗೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ. ಮೊಟ್ಟೆ ದಾಳಿಯಿಂದ ಕೂದಲು ಸ್ವಲ್ಪ ಬರ್ನ್ ಆಗಿದೆ. ಮುನಿರತ್ನರನ್ನ ಟಾರ್ಗೆಟ್ ಮಾಡಲಾಗ್ತಿದೆ ಅಂತ ಅನ್ನಿಸ್ತಿದೆ ಅಂತ ಹೇಳಿದ್ರು.