ರಥ ಸಾಗುವ ಹಾದಿಯಲ್ಲಿ ಹಲವು ಕಾರು, ಬೈಕ್, ಆಟೋಗಳನ್ನು ನಿಲ್ಲಿಸಲಾಗಿತ್ತು. ಭಕ್ತರು ರಥಕ್ಕೆ ಅಡ್ಡಿಯಾಗದಿರಲಿ ಎಂದು ಎಲ್ಲ ವಾಹನಗಳನ್ನು ರಸ್ತೆ ಬದಿಗೆ ತಳ್ಳಿದ್ದರು. ಅನಗತ್ಯವಾಗಿ ಇದಕ್ಕೆ ಕೋಮು ಆಯಾಮ ನೀಡಲಾಗಿದೆ.
“ಒಗ್ಗಟ್ಟಿನ ಶಕ್ತಿ” ಎಂಬ ಒಕ್ಕಣೆಯೊಂದಿಗೆ ವಿಡಿಯೋವೊಂದು ವೈರಲ್ ಆಗಿದೆ. ಮುಸ್ಲಿಮ್ ವ್ಯಕ್ತಿಯೊಬ್ಬ ಕಾರನ್ನು ರಸ್ತೆಗೆ ಅಡ್ಡ ನಿಲ್ಲಿಸಿ, ರಥ ಸಾಗಲು ಅಡ್ಡಿಪಡಿಸಿದಾಗ ಕುಪಿತರಾದ ಭಕ್ತರು ಕಾರನ್ನು ರಸ್ತೆಯ ಬದಿಗೆ ತಳ್ಳಿ ಹಾಕಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿ ಕಾರನ್ನು ತಳ್ಳಿ ತಲೆಕೆಳಗೆ ಮಾಡಿ ಬೀಳಿಸಲಾಗಿರುವ ದೃಶ್ಯಗಳನ್ನುಕಾಣಬಹುದು.
‘ಕರ್ನಾಟಕದಲ್ಲಿ ರಥವೊಂದು ತೆರಳುವಾಗ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಮುಸ್ಲಿಮ್ ವ್ಯಕ್ತಿಗೆ ಬದಿಗೆ ನಿಲ್ಲಿಸಲು ಮನವಿ ಮಾಡಿಕೊಂಡರೂ, ನಿರಾಕರಿಸಿದ ಕಾರಣ, ಹಿಂದು ಭಕ್ತರ ಪ್ರತಿಕ್ರಿಯೆ ಹೀಗೆ ವ್ಯಕ್ತವಾಯಿತು’ ಎಂಬ ಎಕ್ಸ್ ತಾಣದಲ್ಲಿ ಬಳಕೆದಾರರೊಬ್ಬರು, ಟಿಪ್ಪಣಿಯೊಂದಿಗೆ 32 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ರಥವನ್ನು ಎಳೆಯುತ್ತಿರುವಾಗ, ಕಾರು ಅಡ್ಡ ನಿಂತಿರುವುದನ್ನು ಸಹಿಸದ ಭಕ್ತರು ಕಾರನ್ನು ರಸ್ತೆಯಿಂದ ಆಚೆ ತಳ್ಳಿದಾಗ ಅದು ತಲೆಕೆಳಗಾಗಿ ಬಿದ್ದಿದ್ದನ್ನು ಕಾಣಬಹುದು.
ಹಿಂದಿ ಮತ್ತು ಇಂಗ್ಲಿಷ್ನ ಅಡಿ ಟಿಪ್ಪಣಿಯೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್ಚೆಕ್
ವೈರಲ್ ವಿಡಿಯೋದ ಪ್ರತಿಪಾದನೆ ಸುಳ್ಳು. ಈ ವಿಡಿಯೋದಲ್ಲಿ ಪ್ರತಿಪಾದಿಸಿರುವ ಯಾವುದೇ ಮುಸ್ಲಿಮ್ ವ್ಯಕ್ತಿ ರಥಯಾತ್ರೆಗೆ ಅಡ್ಡಿ ಪಡಿಸಿಲ್ಲ.
ವೈರಲ್ ವಿಡಿಯೋದಲ್ಲಿರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಎಂದು ತಿಳಿಯಲು ಯತ್ನಿಸಿದೆವು. ಮಂಗಳೂರು ಟುಡೇ, ಸುದ್ದಿ ತಾಣದಲ್ಲಿ ಏಪ್ರಿಲ್ 4ರಂದು ಪ್ರಕಟವಾದ ಸುದ್ದಿಯ ಪ್ರಕಾರ, ಇದು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಘಟನೆ ಎಂಬುದು ತಿಳಿದು ಬಂತು.
ಮುಲ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನದ ರಥ ಯಾತ್ರೆಯ ವೇಳೆ ರಥಬೀದಿ ಎರಡೂ ಬದಿಗಳಲ್ಲಿ ವಾಹನಗಳನ್ನುನಿಲ್ಲಿಸಲಾಗಿತ್ತು. ಕಾರು, ಆಟೋ ರಿಕ್ಷ, ಬೈಕ್ಗಳು ಸಾಲಾಗಿ ನಿಂತಿದ್ದವು. ಇದರಿಂದ ರಥ ಸಾಗುವುದಕ್ಕೆ ಅಡ್ಡಿಯಾಗುತ್ತಿತ್ತು. ಭಕ್ತಾದಿಗಳು ವಾಹನಗಳನ್ನು ತೆರವುಗೊಳಿಸಲು ಆರಂಭಿಸಿದರು.
ಮಂಗಳೂರು ಟುಡೇ, ಸುದ್ದಿ ತಾಣವು ಭಕ್ತಿಗಳ ತಳ್ಳಾಟದಿಂದ ವಾಹನಗಳಿಗೆ ಹಾನಿಯಾಗಿದ್ದನ್ನು ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನಷ್ಟು ಹುಡುಕಾಟ ನಡೆಸಿದಾಗ, ಕರಾವಳಿ ಇನ್ನೊಂದು ಪ್ರಮುಖ ಸುದ್ದಿ ತಾಣ ಡೈಜಿ ವರ್ಲ್ಡ್ನಲ್ಲಿ ಆಟೋ ರಿಕ್ಷಾ ಜಖಂ ಆಗಿರುವ ಚಿತ್ರಗಳು ನಮಗೆ ಲಭ್ಯವಾದವು.
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಮುಸ್ಲಿಮ್ ವ್ಯಕ್ತಿಯದ್ದೆಂದು ಪ್ರತಿಪಾದಿಸಲಾಗಿದ್ದ ಕಾರಿನ ವಿವರಗಳನ್ನು ಪತ್ತೆ ಮಾಡಲು ಪ್ರಯತ್ನಿಸಿದೆವು. ಕಾರಿನ ಸಂಖ್ಯೆಯನ್ನು ಆರ್ಟಿಒ ಮೂಲಕ ಹುಡುಕಿದಾಗ ಬೆಂಳೂರು ದಕ್ಷಿಣ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ನೊಂದಾಯಿಸಿದ ವಾಹನವೆಂದು, ವೆಂಕಟೇಶ್ ಡಿ ಎಂಬುವವರು ಇದರ ಮಾಲೀಕರು ಎಂಬುದು ತಿಳಿಯಿತು.
ಈ ಮಾಹಿತಿ ಹಿನ್ನೆಲೆಯಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಡೆದ ಘಟನೆಗೆ ದುರುದ್ದೇಶಪೂರ್ವಕವಾಗಿ ಕೋಮುಬಣ್ಣ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.