ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಹೈಕಮಾಂಡ್ ಉರುಳಿಸಿದ ದಾಳ ಸರಿಯಾಗಿದೆ ಎನ್ನುವಂತಾಗಿದೆ. ವಿಧಾನಸಭಾ ಚುನಾವಣೆ ವೇಳೆ ಯಡಿಯೂರಪ್ಪ ಕುಟುಂಬವನ್ನು ದೂರ ಇಟ್ಟು ಮಾಡಿದ್ದ ಪ್ರಯೋಗ ನೆಲ ಕಚ್ಚಿತ್ತು. ಆದನ್ನು ಮನಗಂಡ ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ ನಾಯಕರು ಬಿ.ವೈ ವಿಜಯೇಂದ್ರ ಅವರನ್ನು ಕರ್ನಾಟಕ ರಾಜ್ಯದಲ್ಲಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಲಿಂಗಾಯತರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ಮಾಡಿತ್ತು. ಆ ನಿರ್ಧಾರ ಇದೀಗ ಸಫಲತೆ ಕಂಡಿದೆ. ಯಡಿಯೂರಪ್ಪ ಕುಟುಂಬದ ನಾಯಕತ್ವವನ್ನು ರಾಜ್ಯದ ಜನತೆ ಹಾಗು ಲಿಂಗಾಯತ ಸಮುದಾಯ ಒಕ್ಕೋರಲಿನಿಂದ ಬೆಂಬಲಿಸಿದೆ ಎನ್ನುವುದು ಸಮೀಕ್ಷೆಗಳ ಅಂಕಿಅಂಶ ಸಾರಿ ಹೇಳುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಕೇವಲ 4-8 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದ್ದು, ಬಿಜೆಪಿ – ಜೆಡಿಎಸ್ ಮೈತ್ರಿಕೂಟ 20-24 ಸ್ಥಾನಗಳಲ್ಲಿ ಗೆಲುವು ಕಾಣಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅಂದರೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಸಮುಲತಾ ಸೇರಿದಂತೆ 26 ಸ್ಥಾನಗಳಲ್ಲಿ ಗೆಲುವು ಕಂಡಿದ್ದ ಬಿಜೆಪಿ ಈ ಬಾರಿ ಒಂದೆರಡು ಸ್ಥಾನ ಕಡಿಮೆ ಗಳಿಸಿದ್ರೂ ಉತ್ತಮ ಸಾಧನೆ ಎಂದೇ ಹೇಳಬಹುದು. B.S ಯಡಿಯೂರಪ್ಪ ನಾಯಕತ್ವವನ್ನು ಕಡೆಗಣಿಸಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಬಿಜೆಪಿ ಇದೀಗ ಮತ್ತೆ ತನ್ನ ಶಕ್ತಿ ವೃದ್ಧಿ ಮಾಡಿಕೊಳ್ಳುವುದು ಕಂಡುಬಂದಿದೆ.
ರಾಜ್ಯದಲ್ಲಿ ಹೆಚ್ಚು ಅಭ್ಯರ್ಥಿಗಳು ಗೆಲ್ಲುವ ವರದಿ ಬರುತ್ತಿದ್ದ ಹಾಗೆ ಬಿಜೆಪಿ ನಾಯಕರಲ್ಲಿ ಖುಷಿ ತಂದಿದೆ. ಮೋದಿ ಅಲೆ ಕಡಿಮೆ ಆಗಬಹುದು ಎಂಬ ಆತಂಕದಲ್ಲಿದ್ದ ಬಿಜೆಪಿ ನಾಯಕರು, ರಾಜ್ಯದಲ್ಲೂ ಕಡಿಮೆ ಸೀಟು ಬರಬಹುದೆಂಬ ಅಂದಾಜಿನಲ್ಲಿದ್ದರು. ರಾಜ್ಯದಲ್ಲಿ 20ಕ್ಕಿಂತ ಕಡಿಮೆ ಸ್ಥಾನಗಳು ಬರಬಹುದು ಅನ್ನೋ ಚಿಂತೆಯಲ್ಲಿದ್ದ ನಾಯಕರು, ಸಮೀಕ್ಷೆ ಬಳಿಕ ಫುಲ್ ಖುಷ್ ಆಗಿದ್ದಾರೆ. ರಾಜ್ಯ ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳು ವರ್ಕೌಟ್ ಆಗಿದ್ರೆ ಪಕ್ಷಕ್ಕೆ ಹಿನ್ನಡೆಯೆಂಬ ಆತಂಕ ಎದುರಾಗಿತ್ತು. ವಿಶೇಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೆನ್ಷನ್ ಇತ್ತು. ಇದೀಗ ಎಲ್ಲವೂ ನಿರಾಳ ಎನ್ನುವಂತಾಗಿದೆ.
ರಾಜ್ಯದಲ್ಲಿ ಕಡಿಮೆ ಸೀಟುಗಳು ಬಂದ್ರೆ ಅಧ್ಯಕ್ಷ ಸ್ಥಾನ ಬದಲಾಗಬಹುದು ಅನ್ನೋ ಚರ್ಚೆ ನಡೆದಿತ್ತು. ಇದೆ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಸಾಕಷ್ಟು ನಾಯಕರು ಒಂದು ವರ್ಷಕ್ಕೆ ಮಾತ್ರ ರಾಜ್ಯಾಧ್ಯಕ್ಷ ಎಂದು ವ್ಯಂಗ್ಯ ಮಾಡಿದ್ದರು. ಇದೀಗ ಉತ್ತರ ಭಾರತದಲ್ಲಿ ಜಾಸ್ತಿ ಸ್ಥಾನ ಬಂದು, ಕರ್ನಾಟಕ ರಾಜ್ಯದಲ್ಲಿ ಕಡಿಮೆ ಸ್ಥಾನ ಆಗಿದ್ರೆ, ನಾಯಕತ್ವ ಕಳೆದುಕೊಳ್ಳುವ ಭಯದಲ್ಲಿದ್ದ ಬಿ.ವೈ ವಿಜಯೇಂದ್ರಗೆ ನಿಟ್ಟುಸಿರು ಬಿಡುವಂತಾಗಿದೆ. ಸರ್ವೆಯಲ್ಲಿ ಜಾಸ್ತಿ ಬಂದಿದ್ದು, ರಾಜ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರುವ ವರದಿ ಬಂದಿದೆ. ಎಲ್ಲಾ ಸರ್ವೇ ಆಧಾರದ ಮೇಲೆ ಅಂತಿಮವಾಗಿ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ನಾಯಕರು. ಸರ್ವೇ ವರದಿಯನ್ನು ನೋಡಿ ಮಾಜಿ ಸಿಎಂ ಯಡಿಯೂರಪ್ಪ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖುಷ್ ಆಗಿದ್ದಾರೆ. ನಾಯಕತ್ವಕ್ಕೆ ರಾಜ್ಯದಲ್ಲಿ ಬೆಂಬಲ ಇದೆ ಎನ್ನುವುದನ್ನು ಸಾರಿ ಹೇಳುವಂತಾಗಿದೆ.
ಕೃಷ್ಣಮಣಿ