ಕೋವಿಡ್ ಎರಡನೇ ಅಲೆಯ ವಿರುದ್ಧ ದೇಶವು ಹೋರಾಡುತ್ತಿರುವಾಗ ಭಾರತದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೋವಿಡ್-19 ಲಸಿಕೆಗಳ ಉತ್ಪಾದನೆಯಲ್ಲಿ ಒತ್ತಡ ಹೆಚ್ಚುತ್ತಿದೆ ಎಂದು SII ಸಿಇಒ ಆದರ್ ಪೂನ್‌ವಲ್ಲಾ ಶನಿವಾರ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ‘ವೈ’ ಕೆಟಗರಿ ಭದ್ರತೆ ದೊರೆತ ನಂತರ ‘ದಿ ಟೈಮ್ಸ್’ ನಡೆಸಿದ ತಮ್ಮ ಮೊದಲ ಸಂದರ್ಶನದಲ್ಲಿ ಮಾತನಾಡುತ್ತಾ ಅವರು ಕೋವಿಶೀಲ್ಡ್ ನ ವಿತರಣೆಯ ಕುರಿತಂತೆ ಭಾರತದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದಿದ್ದಾರೆ.
ಈ ಒತ್ತಡವನ್ನು ನಿಭಾಯಿಸಲಾಗದೆ ಸಂಸಾರ ಸಮೇತ ಲಂಡನ್ ಗೆ ತೆರಳುತ್ತಿದ್ದೇನೆ ಎಂದು 40 ವರ್ಷದ ಉದ್ಯಮಿ ಹೇಳಿದ್ದಾರೆ.
“ಲಂಡನ್‌ನಲ್ಲಿನ ನನ್ನ ವಾಸ್ತವ್ಯವನ್ನು ವಿಸ್ತರಿಸುತ್ತೇನೆ. ಯಾಕೆಂದರೆ ನಾನು ಅದೇ ಪರಿಸ್ಥಿತಿಗೆ ಮತ್ತೆ ಮರಳಲು ಬಯಸುವುದಿಲ್ಲ. ಎಲ್ಲಾ ಜವಾಬ್ದಾರಿಗಳೂ ನನ್ನ ಹೆಗಲ ಮೇಲೆ ಬೀಳುತ್ತವೆ. ಆದರೆ ನನಗೊಬ್ಬನಿಗೆ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ, ನಿಮ್ಮ ಕೆಲಸವನ್ನು ನೀವು ಸರಿಯಾಗಿ ನಿರ್ವಹಿಸುತ್ತಿರುವಾಗ ಯಾರೋ ಒಬ್ಬರಿಗೆ ಅವರ ಅಗತ್ಯಗಳನ್ನು ಪೂರೈಸಲಾಗುವುದಿಲ್ಲ ಎಂದಾದಾಗ ಉಂಟಾಗುವ ಒತ್ತಡದ ಸ್ಥಿತಿಗೆ ಮತ್ತೆ ಮರಳಲು ನಾನು ಬಯಸುವುದಿಲ್ಲ. ಅವರು ಏನೆಲ್ಲಾ ಮಾಡಬಹುದು ಎಂಬುವುದನ್ನು ನಿಮಗೆ ನಿಜವಾಗಿಯೂ ಊಹಿಸಲಾಗದು” ಎಂದು ಪೂನವಾಲ್ಲ ಪತ್ರಿಕೆಗೆ ತಿಳಿಸಿದ್ದಾರೆ.
“ನಿರೀಕ್ಷೆ ಮತ್ತು ಆಕ್ರಮಣಶೀಲತೆಯ ಮಟ್ಟವು ನಿಜವಾಗಿಯೂ ಅಗಾಧವಾಗಿದೆ. ಲಸಿಕೆ ಪಡೆಯಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಬೇರೆಯವರೂ ಅದನ್ನು ಪಡೆಯಬೇಕು ಎಂದು ಅವರಿಗೆ ಅರ್ಥವಾಗುವುದಿಲ್ಲ”ಎಂದು ಅವರು ಹೇಳಿದರು. ಲಸಿಕೆ ತಯಾರಿಕೆಯನ್ನು ಭಾರತದ ಹೊರಗಿನ ದೇಶಗಳಿಗೆ ವಿಸ್ತರಿಸುವ ವ್ಯವಹಾರ ಯೋಜನೆಗಳೂ ಈ ಲಂಡನ್ ಪ್ರವಾಸದ ಹಿಂದಿದೆ ಎಂದು ಉದ್ಯಮಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ದಿ ಟೈಮ್ಸ್’ ಪ್ರಕಾರ ಈ ವರ್ಷದ ಜನವರಿಯಲ್ಲಿ ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ ಲಸಿಕೆಯನ್ನು ಅನುಮೋದಿಸುವ ಹೊತ್ತಿಗೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 1.5 ಮಿಲಿಯನ್‌ನಿಂದ 2.5 ಬಿಲಿಯನ್ ಡೋಸ್‌ಗಳಿಗೆ 800 USD ಮಿಲಿಯನ್ ವೆಚ್ಚದಲ್ಲಿ ಹೆಚ್ಚಿಸಿತ್ತು ಮತ್ತು 50 ಮಿಲಿಯನ್ ಕೋವಿಶೀಲ್ಡ್ ಡೋಸ್‌ಗಳನ್ನು ಸಂಗ್ರಹಿಸಿತ್ತು. ಭಾರತದಲ್ಲಿ ಪರಿಸ್ಥಿತಿ ಹದಗೆಡುವವರೆಗೂ ಬ್ರಿಟನ್ ಸೇರಿದಂತೆ 68 ದೇಶಗಳಿಗೆ ಕಂಪೆನಿಯು ಲಸಿಕೆಗಳನ್ನು ರಫ್ತು ಮಾಡಿದೆ. “ಆದರೆ ಇಷ್ಟು ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಇರಲಿದೆ ಎನ್ನುವ ಮುನ್ಸೂಚನೆ ಬಹುಶಃ ದೇವರಿಗೂ ಇದ್ದಿರಲಿಕ್ಕಿಲ್ಲ” ಎಂದು ಪತ್ರಿಕೆಯವರೊಡನೆ ಮಾತಾಡುತ್ತಾ ಹೇಳಿದ್ದಾರೆ.
ಕೋವಿಶೀಲ್ಡ್ ದರವನ್ನು ಇತ್ತೀಚೆಗೆ ಹೆಚ್ಚಿಸಿದ್ದರಿಂದ ಕಂಪೆನಿಯ ಮೇಲೆ ಹೆಚ್ಚು ಲಾಭಮಾಡುವ ಆರೋಪ ಬಂದಿರುವುದರ ಕುರಿತು ಮಾತನಾಡಿದ ಅವರು ಈ ಆರೋಪಗಳು ಸಂಪೂರ್ಣ ಸುಳ್ಳಾಗಿದ್ದು ಕೈಗೆಟುಕುವ ಬೆಲೆಯಲ್ಲಿ ದೊರಕುವ ಪ್ರಪಂಚದ ಅತ್ಯುತ್ತಮ ಲಸಿಕೆಯಾಗಿದೆ ಕೋವಿಶೀಲ್ಡ್ ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಲಾಭದ ಉದ್ದೇಶವಿಲ್ಲದೆ ನಾವು ಮಾಡಬಹುದಾದ ಅತ್ಯುತ್ತಮ ಕೆಲಸ ಮಾಡಿದ್ದೇವೆ. ಇತಿಹಾಸ ನಮ್ಮನ್ನು ಹೇಗೆ ನಿರ್ಣಯಿಸುತ್ತದೆ ಎನ್ನುವುದರ ಬಗ್ಗೆ ನಮಗೆ ನಂಬಿಕೆ ಇದೆ” ಎಂದ ಅವರು “ನಾವು ತಯಾರಿಸುವ ಲಸಿಕೆಯ ಕಾರಣದಿಂದ ಭಾರತ ಮತ್ತು ಜಗತ್ತಿನ ಬಗೆಗಿನ ನಮ್ಮ ಜವಾಬ್ದಾರಿಯ ಬಗ್ಗೆ ಸದಾ ಒಂದು ಅರಿವನ್ನು ಹೊಂದಿದ್ದೆವು” ಎಂದೂ ಹೇಳಿದ್ದಾರೆ.