ಗುಜರಾತಿಗಳನ್ನು ‘ವ್ಯಾಪಾರಿ ಮನೋಭಾವದವರು’ ಎಂದು ಹೇಳುವುದುಂಟು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಗುಜರಾತ್ ಮೂಲದವರಾಗಿರುವುದರಿಂದ ಅವರ ಬಗ್ಗೆಯೂ ಹಾಗೆ ಮಾತನಾಡುವುದುಂಟು. ಮತ್ತು ಅವರ ಸರ್ಕಾರವನ್ನು ಕೂಡ ‘ಉದ್ಯಮಿಗಳ ಪರ’ ಇರುವ ಸರ್ಕಾರ ಎಂದು ಉಲ್ಲೇಖಿಸುವುದುಂಟು. ಗುಜರಾತ್-ವ್ಯಾಪಾರ-ಮೋದಿ; ಒಂದಕ್ಕೊಂದನ್ನು ಸೇರಿಸಿ ಮೂದಲಿಸಿ ಮಾತನಾಡಲು ಹಲವು ಸಕಾರಣಗಳಿವೆ. ಉದಾಹರಣೆಗೆ ಕರೋನಾ ಹೊಡೆತಕ್ಕೆ, ಅದರಲ್ಲೂ ಎರಡನೇ ಅಲೆಯ ಹೊಡೆತಕ್ಕೆ ದೇಶವೇ ತತ್ತರಿಸಿ ಹೋಗಿದೆ. ಇಂಥ ಕಡುಕಷ್ಟದ ಕಾಲದಲ್ಲೂ ಔಷದೀಯ ಉತ್ಪನ್ನಗಳಿಗೆ ಅದೂ ಕರೋನಾ ಔಷಧೋತ್ಪನ್ನಗಳ ಮೇಲೆ ನರೇಂದ್ರ ಮೋದಿ ಸರ್ಕಾರ ಕವಡೆಕಾಸಿನಷ್ಟು ಕರುಣೆ ತೋರದೆ ಜಿಎಸ್ ಟಿ ವಿಧಿಸುತ್ತಿದೆ.
ಇದಕ್ಕಿಂತಲೂ ಕ್ರೂರವಾದ ನಡೆ ಇನ್ನೊಂದು ಇದೆ. ಈ ದುರ್ದಿನಗಳಲ್ಲೂ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿ ಖಜಾನೆ ತುಂಬಿಕೊಳ್ಳುತ್ತಿದೆ. ಮೊದಲನೆಯ ಉದಾಹರಣೆಗಿಂತ ಇದು ಏಕೆ ಭೀಕರ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲರ ಜೇಬನ್ನೂ ಲೂಟಿ ಮಾಡಲಾಗುತ್ತದೆ ಎಂಬುದು ಬಹುತೇಕ ಗೊತ್ತಿರುವ ವಿಷಯ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವುದರಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಎಷ್ಟು ನಿರ್ಲಜ್ಜವಾಗಿ ಮತ್ತು ನಿಷ್ಕರುಣಿಯಾಗಿ ವರ್ತಿಸಿದೆ ಎಂಬುದನ್ನು ಕರೋನಾ ಕಂಡುಬಂದ ದಿನಗಳಿಂದಲೂ ಕಾಣಬಹುದಾಗಿದೆ. ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕರೋನಾ ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು. ಅಂದಿನಿಂದಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುತ್ತಲೇ ಇದೆ.
ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಲಾಕ್ಡೌನ್ ಕಾರಣಕ್ಕೆ ಜನ ಹೊರಗಡೆ ಓಡಾಡುತ್ತಿರಲಿಲ್ಲ. ಹಾಗಾಗಿ ಆ ಅವಧಿಯಲ್ಲಿ ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿರಲಿಲ್ಲ. ಮತ್ತೆ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿವೆ ಎನ್ನುವಷ್ಟೊತ್ತಿಗೆ ಜೂನ್ ತಿಂಗಳಲ್ಲಿ ಸರಿಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೆರಡನ್ನೂ ಏರಿಕೆ ಮಾಡಲಾಯಿತು. ಈ ಮೂಲಕ ಇದೆಂಥಾ ಕ್ರೂರಿ ಸರ್ಕಾರ ಎಂಬುದು 2020ರ ಜೂನ್ ತಿಂಗಳಲ್ಲೇ ಸಾಬೀತಾಗಿತ್ತು. ಏಕೆಂದರೆ ಆಗ ಜನ ಕರೋನಾ ಮತ್ತು ಲಾಕ್ಡೌನ್ ಸಂಕಷ್ಟಗಳ ಸುಳಿಯಿಂದ ಸಂಪೂರ್ಣವಾಗಿ ಹೊರಬಂದಿಲ್ಲದಿದ್ದರೂ ಅವರ ಮೇಲೆ ನಿರಂತರವಾಗಿ 23 ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬರೆ ಎಳೆಯಲಾಗಿತ್ತು.
ಆಗ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಹೊಸ ವರಸೆ ಆರಂಭಿಸಿತು. ದಿನ ಬಿಟ್ಟು ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿತು. ಇದಾದ ಮೇಲೆ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕೆಲವು ದಿನ ಬಿಡುವು ಕೊಟ್ಟು ಕೆಲವು ದಿನ ಬೆಲೆ ಏರಿಕೆ ಮಾಡಿತು. ಇದನ್ನು 2021ರ ಜನವರಿ, ಫೆಬ್ರವರಿಯಲ್ಲೂ ಮುಂದುವರೆಸಿತು. ಆದರೆ ಯಾವಾಗ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ದಿನಾಂಕ ನಿಗಧಿಯಾಯಿತೋ ಆಗ ದಿಢೀರನೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಬ್ರೇಕ್ ಹಾಕಿತು.
ಆ ಸಂದರ್ಭದಲ್ಲಿ ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿಯೊಂದನ್ನು ಪ್ರಕಟಿಸಿತ್ತು. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಮೇಲೆ ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗುತ್ತದೆ ಎಂದು. ಅದು ನಿಜವಾಗಿದೆ. ಮೇ 2ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಯಿತು. ಮೇ 4ರಿಂದಲೇ ನರೇಂದ್ರ ಮೋದಿ ಅವರ ಘನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಹಳೆಯ ಚಾಳಿಯನ್ನು ಮುಂದುವರೆಸಿತು. ಮೇ 4ರಿಂದ ಈಚೆಗೆ ಈ ತಿಂಗಳು ಈಗಾಗಲೇ ಹತ್ತು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಮೂಲಕ ದರೋಡೆ ಮಾಡುತ್ತಿದೆ. ಮೇ ತಿಂಗಳೊಂದರಲ್ಲೇ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.45 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 2.78 ರೂಪಾಯಿ ಬೆಲೆ ಏರಿಸಿದೆ. ಕರೋನಾ ಕಷ್ಟಕಾಲದಲ್ಲೂ ಮೇ ತಿಂಗಳೊಂದರಲ್ಲೇ ಹತ್ತು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವ ನರೇಂದ್ರ ಮೋದಿ ಅವರನ್ನು ‘ವ್ಯಾಪಾರಿ’ ಎನ್ನದೆ ಇನ್ನೇನೆಂದು ಕರೆಯಬೇಕು?