ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿ ನಾಯಕರಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಜಾಮೀನು ಲಭಿಸಿ ಎರಡು ದಿನಗಳಾದರೂ, ಇನ್ನೂ ಬಿಡುಗಡೆಯಾಗಿಲ್ಲ. ಮಂಗಳವಾರ ಬಿಳಿಗ್ಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದಾಗಿ 48 ಗಂಟೆಗಳು ಈಗಾಗಲೇ ಕಳೆದಿವೆ. ದೆಹಲಿ ಪೊಲೀಸರು ಮಾತ್ರ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ.
‘ಖೈದಿಗಳ ಖಾಯಂ ವಿಳಾಸ ಇನ್ನೂ ಪರಿಶೀಲನೆಯಾಗದ ಕಾರಣ ಬಿಡುಗಡೆ ಮಾಡಲು ಜೂನ್ 21ರ ವರೆಗೆ ಸಮಯಾವಕಾಶ ಬೇಕು,” ಎಂದು ದೆಹಲಿ ಪೊಲೀಸರು ಹೈಕೋರ್ಟ್’ಗೆ ತಿಳಿಸಿದ್ದಾರೆ. ಬಿಡುಗಡೆಗೆ ಶ್ಯೂರಿಟಿ ನೀಡುವ ವ್ಯಕ್ತಿಗಳ ಆಧಾರ ದಾಖಲೆಗಳನ್ನು UIDAI ಪರಿಶೀಲಿಸಬೇಕಿದೆ. ಈ ಪರಿಶೀಲನೆಗೂ ಮತ್ತಷ್ಟು ಕಾಲಾವಕಾಶ ಬೇಕು ಎಂದು ಪೊಲೀಸರು ಹೇಳಿದ್ದಾರೆ.
ಇದರ ನಡುವೆಯೇ, ಬುಧವಾರದಂದು ಸುಪ್ರಿಂ ಕೋರ್ಟ್ ಮೊರೆ ಹೋಗಿರುವ ಪೊಲೀಸರು, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿಕೊಂಡಿದ್ದಾರೆ. “ದೆಹಲಿ ಹೈಕೋರ್ಟ್ ಅತ್ಯಮತ ಕಡಿಮೆ ಅವಧಿಯಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದೆ. ಇದರಿಂದಾಗಿ ಯುಎಪಿಎ ಅಡಿಯಲ್ಲಿ ಬರುವಂತಹ ಕಠಿಣ ನಿಯಮಗಳು ಸಡಿಲವಾಗಲಿವೆ. ಇದು ಎನ್ಐಎ ದಾಖಲಿಸಿರುವ ಇತರ ಪ್ರಕರಣಗಳ ಮೇಲೆಯೂ ಪರಿಣಾಮ ಬೀರಲಿದ್ದು, ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು,” ಎಂದು ದೆಹಲಿ ಪೊಲೀಸರು ಅರ್ಜಿಯಲ್ಲಿ ಹೇಳಿದ್ದಾರೆ.
ತಮ್ಮ ಬಳಿ ಪ್ರಕರಣವನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣ, ಸಾಧ್ಯವಾದಷ್ಟು ದಿನಗಳ ಕಾಲ ಮೂವರನ್ನೂ ಜೈಲಿನಲ್ಲಿ ಇಡಲು ಪೊಲೀಸರು ಪ್ರಯತ್ನ ಪಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್’ನ ಜಸ್ಟೀಸ್ ಸಿದ್ದಾರ್ಥ್ ಮೃದುಲ್ ಮತ್ತು ಅನೂಪ್ ಜೈರಾಮ್ ಭಂಭಾನಿ ಅವರಿದ್ದ ಪೀಠವು, ಇದೊಂದು ಸಾಮಾನ್ಯ ವಿದ್ಯಾರ್ಥಿ ಪ್ರತಿಭಟನೆಯಾಗಿದೆ. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಟ್ಟ ವಿಚಾರಗಳನ್ನು ಪ್ರಕರಣದಲ್ಲಿ ವಿವರಸಲಾಗಿದೆಯೇ ಹೊರತು, ದೋಷವನ್ನು ಸಾಬೀತು ಮಾಡುವ ಸಾಕ್ಷ್ಯಗಳು ದೋಷಾರೋಪಣಾ ಪಟ್ಟಿಯಲ್ಲಿ ಇಲ್ಲ ಎಂದು ಹೇಳಿದ್ದರು.
“ಇದು ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನದಂತೆ ಕಾಣುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ತಪ್ಪಿಸಲು ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮೂಲಭೂತವಾಗಿ ನಾಗರಿಕರಿಗೆ ಸಿಕ್ಕಿದಂತಹ ‘ಪ್ರತಿಭಟನೆಯ ಹಕ್ಕು’ ಮತ್ತು ‘ಉಗ್ರಗಾಮಿ ಚಟುವಟಿಕೆ’ಗಳ ಮಧ್ಯೆ ಇರುವಂತಹ ವ್ಯತ್ಯಾಸವನ್ನು ಸರ್ಕಾರ ನಿರ್ಲಕ್ಷಿಸಿದೆ. ಇದರಿಂದಾಗಿ ಪ್ರಜಾಪ್ರಭುತ್ವ ಅಪಾಯಕ್ಕೆ ಒಳಗಾಗಲಿದೆ,” ಎಂದು ನರ್ವಾಲ್ ಹಾಗೂ ಕಲಿತಾ ಅವರ ಜಾಮೀನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
JNU ವಿದ್ಯಾರ್ಥಿಗಳಾಗಿರುವ ನರ್ವಾಲ್ ಹಾಗೂ ಕಲಿತಾ, ಪಿಂಜ್ರಾ ಥೋಡ್ (ಪಂಜರ ಒಡೆಯಿರಿ) ಎಂಬ ಸಂಘಟನೆಯ ಸದಸ್ಯರಾಗಿದ್ದರು. ಹಾಸ್ಟೆಲ್’ಗಳಲ್ಲಿ ವಿದ್ಯಾರ್ಥಿಗಳಿಗೆ ವಿಧಿಸಲಾಗಿರುವ ನಿಯಮಗಳಲ್ಲಿನ ತಾರತಮ್ಯವನ್ನು ಪ್ರಶ್ನಿಸಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆಯ ಹಿಂದೆ ‘ದೊಡ್ಡ’ ಮಟ್ಟದ ಷಡ್ಯಂತ್ರ ಅಡಗಿದೆ ಎಂದು ಪೊಲೀಸರು ಆರೋಪಿಸಿದ್ದರು. ಈ ಷಡ್ಯಂತ್ರದಿಂದಾಗಿ ಈಶಾನ್ಯ ದೆಹಲಿಯಲ್ಲಿ ಫೆಬ್ರುವರಿ 2020ರಲ್ಲಿ ಕೋಮು ಗಲಭೆಗಳು ನಡೆದಿದ್ದವು ಎಂದು ಚಾರ್ಜ್ ಶೀಟ್’ನಲ್ಲಿ ಹೇಳಲಾಗಿತ್ತು.
ಪ್ರಮುಖವಾಗಿ ಸಿಎಎ ವಿರುದ್ದದ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದ ಹೋರಾಟಗಾರರನ್ನು ಗುರಿಯಾಗಿಸಿ ನೂರಾರು ಜನರನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ. ದೆಹಲಿ ಗಲಭೆಗಳು ಕೂಡಾ ಇದೇ ಹೋರಾಟಕ್ಕೆ ಸಂಬಂಧಪಟ್ಟಂತೆ ನಡೆದಿದ್ದವು ಎಂಬುದು ಹಲವು ರೀತಿಯಲ್ಲಿ ಸಾಬೀತಾಗಿದೆ. ಬಲಪಂಥೀಯ ಸಂಘಟನೆಗಳ ನಾಯಕರು ಬಹಿರಂಗವಾಗಿ ಗಲಭೆಗೆ ಪ್ರಚೋದನೆ ನಿಡಿರುವ ಕುರಿತ ವೀಡಿಯೋಗಳಿವೆ. ಆದರೂ, ವಿದ್ಯಾರ್ಥಿ ಪ್ರತಿಭಟನೆಯನ್ನು ಈ ಗಲಭೆಗೆ ಹೋಲಿಸಿ ಯುಎಪಿಎ ಅಡಿಯಲ್ಲಿ ಕೇಸು ದಾಖಲಿಸಿರುವುದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿತ್ತು.