ಮೈಸೂರು ದಸರಾ ಗಜಪಯಣಕ್ಕೆ ಶುಕ್ರವಾರ (ಸೆಪ್ಟೆಂಬರ್ 1) ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು ಐತಿಹಾಸಿಕ ದಸರಾ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಕಟಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಅಕ್ಟೋಬರ್ 15 ರಿಂದ ಅಕ್ಟೋಬರ್ 24 ರವರೆಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ನಡೆಯಲಿದೆ.
ಬೆಳಿಗ್ಗೆ 9.45 ರಿಂದ 10.15ರ ತುಲಾ ಲಗ್ನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಸಚಿವ ಎಚ್.ಸಿ ಮಹದೇವಪ್ಪ ಚಾಲನೆ ನೀಡಿದರು. ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಲಿದ್ದು, ಕಬ್ಬು, ಬೆಲ್ಲ, ಫಲತಾಂಬೂಲ ಪೂಜಾ ಸಾಮಗ್ರಿಗಳ ಮೂಲಕ ಪೂಜೆ ಸಲ್ಲಿಕೆ ಮಾಡಲಾಯಿತು.
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಭೀಮ, ಮಹೇಂದ್ರ ಆಗಮಿಸುತ್ತಿದ್ದರೆ, ನಾಗರಹೊಳೆಯ ಬಳ್ಳೆ ಆನೆ ಶಿಬಿರದಿಂದ ಅರ್ಜುನ ಹಾಗೂ ದುಬಾರೆ ಆನೆ ಶಿಬಿರದಿಂದ ಧನಂಜಯ, ಗೋಪಿ, ವಿಜಯ ಆನೆಯನ್ನು ಅಂತಿಮಗೊಳಿಸಲಾಗಿದೆ. ಇನ್ನು ಬಂಡೀಪುರದ ರಾಮಪುರ ಶಿಬಿರದಿಂದ ಪಾರ್ಥ ಸಾರಥಿ, ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷಿ ಆನೆ ಮೊದಲ ಹಂತದಲ್ಲಿ ಆಗಮಿಸಲಿವೆ.
ಮೈಸೂರು ದಸರಾ ಗಜಪಯಣಕ್ಕೆ ಚಾಲನೆ ದೊರೆತ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಕಾಡಿನಿಂದ ನಾಡಿಗೆ ಆನೆಗಳು ತೆರಳುತ್ತವೆ. ಕಂಜನ್ ಈ ಬಾರಿ ದಸಾರಗೆ ಹೊಸ ಆನೆ ಸೇರ್ಪಡೆಯಾಗಿದೆ. ಒಂದುವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ. ನಿಶಾನೆ ಆನೆಯನ್ನ ಇನ್ನೂ ನಿರ್ಧಾರ ಮಾಡಿಲ್ಲ. ನಾಡ ಅದಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ. ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತೆ ಎಂದರು.
ಚಾಲನೆ ನೀಡಿ ಮಾತನಾಡಿದ ಸಚಿವ ಎಚ್.ಸಿ ಮಹದೇವಪ್ಪ, ಈ ಬಾರಿ ವಿಜೃಂಭಣೆ ,ಅದ್ಧೂರಿಯಾಗಿ ಮೈಸೂರು ದಸರಾ ಆಚರಣೆ ಮಾಡುತ್ತೇವೆ. ಇದಕ್ಕಾಗಿ 30 ಕೋಟಿ ರೂ. ಅನುದಾನ ಕೇಳಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಗಜಪಯಣಕ್ಕೆ ವಿದ್ಯುಕ್ತ ಚಾಲನೆ ಕೊಟ್ಟಿದ್ದೇವೆ. ಭಾರತದ ಸಂವಿಧಾನ ಎಲ್ಲಾ ಪ್ರಜೆಗಳಿಗೆ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದೆ. ನಾಡದೇವತೆ ಚಾಮುಂಡೇಶ್ವರಿಯಲ್ಲಿ ನಂಬಿಕೆ ಇರುವ ರಾಜ್ಯ ನಮ್ಮದು. 9 ಆನೆಗಳನ್ನು ಸಂಪ್ರಾದಯಕವಾಗಿ ಸ್ವಾಗತ ಮಾಡಿದ್ದೇವೆ. 2004 ರಲ್ಲಿ ಆನೆಗಳು ನಡೆದು ಬರುತ್ತಿದ್ದವು. ಆನೆಗಳ ಹಿತದೃಷ್ಟಿಯಿಂದ ಲಾರಿಯಲ್ಲಿ ಆನೆಗಳನ್ನು ಕರೆ ತರಲಾಗುತ್ತದೆ. ಈಗ 9 ಆನೆಗಳು ಇದರ ಜೊತೆಗೆ ಇನ್ನೂ 5 ಆನೆಗಳು ಬಂದು ಸೇರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಟ್ಟದ ಸಭೆ ಮಾಡಿದ್ದೆವು. ಸಿಎಂ ಸಿದ್ದರಾಮಯ್ಯ ಅದ್ದೂರಿ ದಸರಾ ಮಾಡಲು ಹೇಳಿದ್ದಾರೆ. ಮುಂದೆ ಕಾರ್ಯಕಾರಿ ಸಮಿತಿ ರಚನೆ ಮಾಡುತ್ತೇವೆ. ದೇಶದ ಚಾರಿತ್ರಿಕ ಹಿನ್ನೆಲೆ ಇರುವ ವಿಜಯ ನಗರ ಸಾಮ್ರಾಜ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ, ಸಂವಿಧಾನ ಆಶಯ, ಸ್ವಾತಂತ್ರ್ಯದ ಉದ್ದೇಶ ಜೊತೆಗೂಡಿ ದಸರಾ ಆಚರಣೆ ಮಾಡುತ್ತೇವೆ. ದೇಶ ವಿದೇಶಗಳಿಂದ ದಸರೆಗೆ ಜನ ಬರ್ತಾರೆ. ಆದ್ದರಿಂದ ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡುತ್ತೇವೆ. ಎಲ್ಲಾ ಆನೆಗಳಿಗೂ ಸ್ವಾಗತ ಎಂದು ಸಚಿವ ಮಹದೇವಪ್ಪ ಹೇಳಿದರು.
ಆನೆ ದಾಳಿಗೆ ಶಾರ್ಪ್ ಶೂಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ಪ್ರಕರಣದ ತನಿಖೆಗೆ ಆದೇಶ ನೀಡಿದ್ದೇನೆ. ಬಹಳ ದೊಡ್ಡ ದುರಂತ ಆಗಿದೆ. ಅರಣ್ಯ ಇಲಾಖೆಗೆ ದೊಡ್ಡ ಹಾನಿಯಾಗಿದೆ. ಸರ್ಕಾರದ ವತಿಯಿಂದ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಸರ್ಕಾರ ಕುಟುಂಬಸ್ಥರ ಪರವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.