ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಂದಿಗ್ರಾಮದಲ್ಲಿ ನಡೆದ ದಾಳಿ ಯೋಜಿತ ದಾಳಿಯಲ್ಲ ಎಂದು ಚುನಾವಣಾ ಆಯೋಗ ಭಾನುವಾರ ತೀರ್ಮಾನಿಸಿದೆ ಎಂದು ಸಮೀಕ್ಷಾ ಸಂಸ್ಥೆಯ ಮೂಲಗಳು ತಿಳಿಸಿವೆ. ಶನಿವಾರ ಮತದಾನ ವೀಕ್ಷಕರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಚುನಾವಣಾ ಆಯೋಗ ಈ ತೀರ್ಮಾನಕ್ಕೆ ಬಂದಿದೆ.
ತನ್ನ ಭದ್ರತಾ ಉಸ್ತುವಾರಿ ಕಡೆಯಿಂದ ಉಂಟಾದ ಲೋಪದಿಂದಾಗಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ ಎಂದು ಆಯೋಗ ತೀರ್ಮಾನಿಸಿ ಅವರ ಭದ್ರತಾ ನಿರ್ದೇಶಕ ವಿವೇಕ್ ಸಹಾಯ್ ಅವರನ್ನು ಅಮಾನತುಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪ್ರಕಾಶ್ ಅವರನ್ನೂ ಅಮಾನತುಗೊಳಿಸಲಾಗಿದೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಭು ಗೋಯೆಲ್ ಅವರನ್ನೂ ಅಮಾನತುಗೊಳಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ಟಾರ್ ಪ್ರಚಾರಕರಾಗಿದ್ದರೂ ಬ್ಯಾನರ್ಜಿ ಗುಂಡು ನಿರೋಧಕ ಅಥವಾ ಶಸ್ತ್ರಸಜ್ಜಿತ ವಾಹನವನ್ನು ಬಳಸುತ್ತಿರಲಿಲ್ಲ ಎಂದು ಇಸಿಯ ವೀಕ್ಷಕರು ಹೇಳಿದ್ದಾರೆ ಮತ್ತು ಇದು ಅವರ ಭದ್ರತೆಯ ಹೊಣೆಯನ್ನು ಹೊತ್ತುಕೊಂಡವರ ಬೇಜವಾಬ್ದಾರಿತನ ಎಂದು ಇಸಿ ಅಭಿಪ್ರಾಯ ಪಟ್ಟಿದೆ.
ವಿಶೇಷ ಚುನಾವಣಾ ವೀಕ್ಷಕರಾದ ಅಜಯ್ ನಾಯಕ್ ಮತ್ತು ವಿವೇಕ್ ಡ್ಯೂಬ್ ಅವರ ವರದಿಯನ್ನು ಉಲ್ಲೇಖಿಸಿ ಮಮತಾ ಅವರು ಸಾಮಾನ್ಯ ವಾಹನವನ್ನು ಬಳಸುತ್ತಿದ್ದರೆ ಅವರ ಭದ್ರತಾ ನಿರ್ದೇಶಕ ವಿವೇಕ್ ಸಹಾಯ್ ಅವರು ಗುಂಡು ನಿರೋಧಕ ಕಾರಿನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 10 ರಂದು ಪೂರ್ವ ಮಿಡ್ನಾಪುರ್ ಜಿಲ್ಲೆಯ ನಂದಿಗ್ರಾಮದ ಬಿರುಲಿಯಾ ಬಜಾರ್ನಲ್ಲಿ ನಡೆದ ಘಟನೆ, ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ ನಂತರ ‘ಹಠಾತ್ತನೆ’ ನಡೆದಿದ್ದರೂ ‘ಪಿತೂರಿ’ ಎಂದು ಹೇಳಲಾಗುವುದಿಲ್ಲ ಎಂದು ವಿಶೇಷ ವೀಕ್ಷಕ ಅಜಯ್ ನಾಯಕ್ ಮತ್ತು ವಿಶೇಷ ಪೊಲೀಸ್ ವೀಕ್ಷಕ ಸಿದ್ಧಪಡಿಸಿದ ವರದಿ ತಿಳಿಸುತ್ತದೆ.
ಘಟನೆಯ ಹಠಾತ್ ಆಗಿ ನಡೆದಿದ್ದರಿಂದಾಗಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
“ಈ ಘಟನೆ ಯೋಜಿತ ದಾಳಿಯಲ್ಲ, ಇದು ಇದ್ದಕ್ಕಿದ್ದಂತೆ ನಡೆದ ಅಪಘಾತ” ಎಂದು ವರದಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.ಮಮತಾ ಬ್ಯಾನರ್ಜಿಯ ಗಾಯಕ್ಕೆ ಕಾರಣ ಅಪಘಾತ, ದಾಳಿಯಲ್ಲ; ಪೋಲೀಸ್ ಇಲಾಖೆಯಿಂದ ಚುನಾವಣಾ ಆಯೋಗಕ್ಕೆ ವರದಿ
ಘಟನೆಯ ಸಮಯದಲ್ಲಿ ಹಾಜರಿದ್ದ ಪ್ರತ್ಯಕ್ಷದರ್ಶಿಗಳು ಒದಗಿಸಿದ ವಿವರಗಳು ಮತ್ತು ಅವರಿಂದ ಸಂಗ್ರಹಿಸಲಾದ ವಿಡಿಯೋವನ್ನು ವರದಿಯು ಗಣನೆಗೆ ತೆಗೆದುಕೊಂಡಿದೆ.
ಮಮತಾ ಅವರ ‘ಸಮೀಪ’ ನೆರೆದಿದ್ದ ಜನಸಮೂಹವನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿಯ ಭದ್ರತೆಯ ಉಸ್ತುವಾರಿ ವಹಿಸಿದ್ದ ಪೊಲೀಸ್ ಸಿಬ್ಬಂದಿಗಳ ವೈಫಲ್ಯವನ್ನೂ ವರದಿ ಉಲ್ಲೇಖಿಸುತ್ತದೆ.
“ಸ್ಥಳೀಯ ಪೊಲೀಸರು ಮತ್ತು ಸಿಎಂ ಅವರ ಭದ್ರತೆಯು ಜನಸಂದಣಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಮತ್ತು ಅದು ಅನಪೇಕ್ಷಿತ ಘಟನೆಗೆ ಕಾರಣವಾಯಿತು” ಎಂದು ವರದಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.
ನಂದಿಗ್ರಾಮ್ ಘಟನೆಯ ನಂತರ, ರಾಜ್ಯ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ನೋಡಲ್ ಅಧಿಕಾರಿ ಜಗಮೋಹನ್ ಅವರು ಪ್ರಚಾರಕ್ಕಾಗಿ ಮುಖ್ಯಮಂತ್ರಿಗಳ ಪ್ರವಾಸದ ಸಮಯದಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ವ್ಯವಸ್ಥೆ ಮಾಡುವಂತೆ ಎಲ್ಲಾ ಜಿಲ್ಲಾಡಳಿತಗಳಿಗೆ ಶನಿವಾರ ನಿರ್ದೇಶನ ನೀಡಿದ್ದಾರೆ.
“ಸಿಎಂಗೆ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇತರ ಸ್ಟಾರ್ ಪ್ರಚಾರಕರ ಭದ್ರತೆಯನ್ನು ಬಿಗಿಗೊಳಿಸಬೇಕು. ನಂದಿಗ್ರಾಮ್ ಘಟನೆಯ ನಂತರ ನಾವು ಯಾವುದೇ ಛಾನ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ ”ಎಂದು ಜಗ್ಮೋಹನ್ ಅವರು ಹೇಳಿದ್ದಾರೆ.
ಸಿಇಒ ಕಚೇರಿಯಲ್ಲಿರುವ ಇನ್ನೊಬ್ಬ ಅಧಿಕಾರಿಯ ಪ್ರಕಾರ, ಇಬ್ಬರು ವೀಕ್ಷಕರು ಮಾರ್ಚ್ 18 ರಿಂದ ದಕ್ಷಿಣ 24 ಪರಗಣ, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. “ಇಬ್ಬರು ವೀಕ್ಷಕರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ ಮತ್ತು ಮತದಾನದ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ” ಎಂದು ಅವರು ಹೇಳಿದರು.
ಈ ಮಧ್ಯೆ, ರಾಜ್ಯ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯರು ಇಸಿಗೆ ನೀಡಿದ ವಿವರವಾದ ವರದಿಯಲ್ಲಿ ನಂದಿಗ್ರಾಮದ ಘಟನಾ ಸ್ಥಳದಿಂದ ಸಂಗ್ರಹಿಸಲಾದ “ವಿಡಿಯೋ ಸ್ಪಷ್ಟವಾಗಿಲ್ಲ” ಎಂದು ಹೇಳಿದ್ದಾರೆ. ಶುಕ್ರವಾರ ಸಲ್ಲಿಸಿದ ವರದಿಯನ್ನು ಇಸಿ ರಾಜ್ಯ ಆಡಳಿತ ಮಂಡಳಿಯು “ಸ್ಕೆಚೀ (sketchy)” ಎಂದು ಕರೆದ ನಂತರ ಶನಿವಾರ ಸಂಜೆ ಎರಡನೇ ವರದಿಯನ್ನು ಸಲ್ಲಿಸಲಾಯಿತು.
ಸಿಎಂ ವಾಹನವು ಕಿಕ್ಕಿರಿದ ಜನಸಮೂಹದ ಮಧ್ಯೆ ಹಾದುಹೋಗುತ್ತಿತ್ತು. ಆಗ ಅವರ ಕಾರಿನ ಬಾಗಿಲನ್ನು ತಳ್ಳಲಾಯಿತು. ಆದರೆ ತಳ್ಳುವಿಕೆಯು ಉದ್ದೇಶಪೂರ್ವಕವಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಸಂಗ್ರಹಿಸಿದ ವೀಡಿಯೊಗಳೂ ಸ್ಪಷ್ಟವಾಗಿಲ್ಲ ”ಎಂದು ಸಿಇಒ ಮೂಲವೊಂದು ಬಂದೋಪಾಧ್ಯಾಯರ ಎರಡನೇ ವರದಿಯನ್ನು ಉಲ್ಲೇಖಿಸಿ ಹೇಳಿದೆ.
ಮುಖ್ಯ ಕಾರ್ಯದರ್ಶಿ ವರದಿಯೊಂದಿಗೆ ವಿಡಿಯೋವನ್ನು ಲಗತ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಇಸಿ ರಾಜ್ಯ ಸರ್ಕಾರ ಮತ್ತು ಇಬ್ಬರು ವೀಕ್ಷಕರಿಂದ ವರದಿಗಳನ್ನು ಕೋರಿತ್ತು. ರಾಜ್ಯ ಆಡಳಿತ ಶುಕ್ರವಾರ ತನ್ನ ವರದಿಯನ್ನು ಸಲ್ಲಿಸಿತ್ತು.
ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಿಗೆ ಮಾರ್ಚ್ 27 ಮತ್ತು ಏಪ್ರಿಲ್ 29 ರ ನಡುವೆ ಚುನಾವಣೆ ನಡೆಯಲಿದೆ. ಮೇ 2 ರಂದು ಮತಗಳನ್ನು ಎಣಿಸಲಾಗುವುದು.