
ಸಾವಿರಾರು ಭಕ್ತರ ಜಯಘೋಷ ನಡುವೆ ಅದ್ಧೂರಿ ಕರಗೋತ್ಸವ ನಡೆದಿದೆ. ಸಾವಿರಾರು ಭಕ್ತರು, ನೂರಾರು ವೀರ ಕುಮಾರರ ಜಯಘೋಷದ ಜೊತೆಗೆ ನಟ್ಟ ನಡುರಾತ್ರಿ ದ್ರೌಪದಮ್ಮನ ಕರಗ ದೇವಸ್ಥಾನದಿಂದ ಹೊರ ಬಂತು. ತುಂತುರು ಮಳೆಯ ನಡುವೆ ಕರಗ ಹೊತ್ತ ಅರ್ಚಕ ಜ್ಞಾನೇಂದ್ರ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ ನಡೆಯುತ್ತಿದ್ರೆ, ಖಡ್ಗ ಹಿಡಿದ ವೀರ ಕುಮಾರರು ಸುತ್ತಲು ಕುಣಿಯುತ್ತಾ ಸಾಗಿದರು.

ಧರ್ಮರಾಯಸ್ವಾಮಿ ದೇಗುಲ ನವ ವಧುವಿನಂತೆ ಸಿಂಗಾರಗೊಂಡಿತ್ತು. ದೇವಸ್ಥಾನದ ಸುತ್ತಮುತ್ತಲೂ ಸಾವಿರಾರು ಭಕ್ತರು ನೆರೆದಿದ್ರು. 15ನೇ ಬಾರಿ ಹೂವಿನ ಕರಗ ಹೊತ್ತ ಅರ್ಚಕ ಜ್ಞಾನೇಂದ್ರ, ಧರ್ಮರಾಯ ದೇವಸ್ಥಾನ ಪ್ರದಕ್ಷಿಣೆ ಮಾಡಿ, ಕುಂಬಾರ ಪೇಟೆ ರಸ್ತೆ, ರಾಜ ಮಾರ್ಕೆಟ್ ಸರ್ಕಲ್-ಸಿಟಿ ಮಾರ್ಕೆಟ್ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ರು. ಆ ಬಳಿಕ ಸಿಟಿ ಮಾರ್ಕೆಟ್ ಸರ್ಕಲ್-ಪೊಲೀಸ್ ರೋಡ್, ಮಸ್ತಾನ್ ಸಾಬ್ ದರ್ಗಾ, ಬಳೇಪೇಟೆ ಸರ್ಕಲ್, ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಕಬ್ಬನ್ ಪೇಟೆ ಮುಖ್ಯ ರಸ್ತೆ ಮೂಲಕ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಕರಗ ವಾಪಸ್ ಆಯ್ತು.

ಕರಗ ಆರಂಭಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದ್ರು. ಸಿಎಂ ಸಿದ್ದರಾಮಯ್ಯ ಜೊತೆಗೆ ಗೋವಿಂದರಾಜ್, ಪಿ.ಆರ್ ರಮೇಶ್ ಸೇರಿದಂತೆ ಹಲವಾರು ನಾಯಕರು ಸಾಥ್ ನೀಡಿದ್ರು. ಸಚಿವ ರಾಮಲಿಂಗಾರೆಡ್ಡಿ, ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಕರಗಕ್ಕೆ ಭೇಟಿ ನೀಡಿ ದ್ರೌಪದಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ರು.

ಐತಿಹಾಸಿಕ ಬೆಂಗಳೂರು ಕರಗಕ್ಕೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 7 ಮಂದಿ ಎಸಿಪಿ, 20 ಮಂದಿ ಇನ್ಸ್ಪೆಕ್ಟರ್, 39 ಮಂದಿ ಪಿಎಸ್ಐ , 552 ಮಂದಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. 8 ಕೆಎಸ್ಆರ್ಪಿ ತುಕಡಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಹೂವಿನ ಕರಗಕ್ಕೂ ಮುನ್ನ ಮಳೆಯ ನಡುವೆ ರಥೋತ್ಸವ ಮಾಡಿದ ಬಳಿಕ ಅದ್ಧೂರಿ ಕರಗವನ್ನು ಭಕ್ತರು ಕಣ್ತುಂಬಿಕೊಂಡ್ರು.