ಈಶಾನ್ಯ ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆಗೆ ವಿಜ್ಞಾನಿಗಳು ‘ಹೋಮೋ ಲಾಂಗಿ’ (homo longi) ಅಥಾವಾ ‘ಡ್ರ್ಯಾಗನ್ ಮ್ಯಾನ್’ ಎಂದು ಹೆಸರಿಸಿದ್ದಾರೆ. ಇದುವರೆಗೆ ‘ನಿಯಾಂಡರ್ತಲ್’ (Neandarthal) ಪ್ರಭೇದವನ್ನು ಆಧುನಿಕ ಮನುಷ್ಯನ ಸಮೀಪದ ಸಂಬಂಧಿ ಎಂದು ಕರೆಯಲಾಗಿತ್ತು. ಆದರೆ ಹೊಸದಾಗಿ ಕಂಡುಹಿಡಿದ ಡ್ರ್ಯಾಗನ್ ಮ್ಯಾನ್ ಅನ್ನು ಇನ್ನು ಮುಂದೆ ಮನುಷ್ಯನ ಸಮೀಪದ ಸಂಬಂಧಿ ಎಂದು ಗುರುತಿಸಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.
1930 ರ ದಶಕದಲ್ಲಿ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಹಾರ್ಬಿನ್ ಕಪಾಲವನ್ನ ಕಂಡುಹಿಡಿಯಲಾಯಿತು, ಆದರೆ ಅದನ್ನು ಜಪಾನಿನ ಸೈನ್ಯದಿಂದ ರಕ್ಷಿಸಲು 85 ವರ್ಷಗಳ ಕಾಲ ಬಾವಿಯಲ್ಲಿ ಅಡಗಿಸಿಡಲಾಗಿತ್ತು ಎಂದು ವರದಿಗಳಿವೆ. ನಂತರ ಅದನ್ನು ಬಾವಿಯಿಂದ ಅಗೆದು 2018 ರಲ್ಲಿ ಹೆಬೀ ಜಿಇಒ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ ಕಿಯಾಂಗ್‌ಗೆ ಹಸ್ತಾಂತರಿಸಲಾಗಿತ್ತು.

“ನಮ್ಮ ಅಧ್ಯಯನಗಳಲ್ಲಿ, ಹರ್ಬಿನ್ ಗುಂಪು ನಿಯಾಂಡರ್ತಲ್ ಗಳಿಗಿಂತ ಹೋಮೋಸೇಪಿಯನ್ನರೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದೆ . ಅಂದರೆ, ನಿಯಾಂಡರ್ತಲ್ ಗಳಿಗಿಂತಲೂ ಇತ್ತೀಚಿನ ಸಾಮಾನ್ಯ ಪೂರ್ವಜರನ್ನು ಹರ್ಬಿನ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ” ಎಂದು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಸಹ ಲೇಖಕ ಕ್ರಿಸ್ ಸ್ಟ್ರಿಂಗರ್ ಎಎಫ್‌ಪಿಗೆ ತಿಳಿಸಿದ್ದಾರೆ.
“ಇವುಗಳನ್ನು ವಿಭಿನ್ನ ಜಾತಿ ಎಂದು ಪರಿಗಣಿಸಿದರೂ, ಇದು ನಮ್ಮ ಸಹೋದರಿ (ಹೆಚ್ಚು ನಿಕಟ ಸಂಬಂಧ ಹೊಂದಿರುವ) ಜಾತಿಗಳು” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಆವಿಷ್ಕಾರಗಳನ್ನು ದಿ ಇನ್ನೋವೇಶನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಈ ತಲೆಬುರುಡೆಯು ಕನಿಷ್ಠ 1,46,000 ವರ್ಷಗಳ ಹಿಂದಿನದು. ಇದು ಆಧುನಿಕ ಮಾನವರ ಗಾತ್ರಕ್ಕೆ ಹೋಲಿಸಬಹುದಾದ ಮೆದುಳನ್ನು ಹೊಂದಿದೆ. ಅದರ ಜೊತೆಗೆ ದೊಡ್ಡ ಕಣ್ಣಿನ ಸಾಕೆಟ್‌ಗಳು, ದಪ್ಪ ಹುಬ್ಬು ರೇಖೆಗಳು, ಅಗಲವಾದ ಬಾಯಿ ಮತ್ತು ದೊಡ್ಡ ಗಾತ್ರದ ಹಲ್ಲುಗಳನ್ನು ಹೊಂದಿದೆ.
“ಇದು ವಿಶಿಷ್ಟವಾದ ಪುರಾತನ ಮಾನವ ಲಕ್ಷಣಗಳನ್ನು ತೋರಿಸುತ್ತದೆಯಾದರೂ, ಹಾರ್ಬಿನ್ ಕಪಾಲವು ಈ ಹಿಂದೆ ಗುರುತಿಸಲಾದ ಎಲ್ಲಾ ಹೋಮೋ ಪ್ರಭೇದಗಳಿಗಿಂತ ಭಿನ್ನವಾಗಿದೆ” ಎಂದು ಅಧ್ಯಯನದ ಸಹ ಲೇಖಕ ಜಿ ಹೇಳಿದ್ದಾರೆ.
ಹೋಮೋ ಲಾಂಗಿ ಎಂಬ ಹೆಸರು ಲಾಂಗ್ ಜಿಯಾಂಗ್‌ನಿಂದ ಬಂದಿದೆ, ಇದರ ಅರ್ಥ “ಡ್ರ್ಯಾಗನ್ ನದಿ” ಎಂದಾಗಿದೆ.
ಕಾಡಿನ ಪ್ರವಾಹ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 50 ವರ್ಷ ವಯಸ್ಸಿನ ಪುರುಷನ ಕ್ರೇನಿಯಂ ಇದಾಗಿದೆ ಎಂದು ವಿಜ್ಞಾನಿಗಳ ತಂಡ ನಂಬಿದೆ.

“ಭೂಮಿಯ ಮೇಲೆ ವಾಸಿಸುತ್ತಿದ್ದ ಬೇಟೆಗಾರ ಜನಾಂಗ ಇದಾಗಿತ್ತು ” ಎಂದು ಸ್ಟ್ರಿಂಗರ್ ಹೇಳಿದ್ದಾರೆ. ಹಾರ್ಬಿನ್‌ನಲ್ಲಿ ಈಗಿರುವ ಚಳಿಗಾಲದ ತಾಪಮಾನವನ್ನು ಗಣನೆಗೆ ತೆಗೆದುಕೊಂಡರೆ ಅವರು ನಿಯಾಂಡರ್‌ತಲ್‌ಗಳಿಗಿಂತ ಕಠಿಣವಾದ ಶೀತ ವಾತಾವರಣದಲ್ಲಿ ಬದುಕುತ್ತಿದ್ದರೆಂದು ತೋರುತ್ತಿದೆ” ಎಂದು ಹೇಳುತ್ತಾರೆ.
“ತಲೆಬುರುಡೆ ದೊರೆತ ಸ್ಥಳ ಮತ್ತು ದೊಡ್ಡ ಗಾತ್ರದ ಮನುಷ್ಯನನ್ನು ಗಮನಿಸಿದರೆ, ಹೆಚ್. ಲಾಂಗಿ ಕಠಿಣ ವಾತಾವರಣಕ್ಕೆ ಹೊಂದಿಕೊಂಡಿರಬಹುದು ಮತ್ತು ಏಷ್ಯಾದಾದ್ಯಂತ ಚದುರಿಹೋಗಿದ್ದಿರಬಹುದು” ಎಂದು ವಿಜ್ಞಾನಿಗಳ ತಂಡವು ಊಹಿಸಿದೆ.

ವಂಶ ವೃಕ್ಷ
ಸಂಶೋಧಕರು ಮೊದಲು 600 ಕ್ಕೂ ಹೆಚ್ಚು ಗುಣಲಕ್ಷಣಗಳನ್ನು ಬಳಸಿಕೊಂಡು ಕ್ರೇನಿಯಂನ ಬಾಹ್ಯ ರೂಪವಿಜ್ಞಾನವನ್ನು ಅಧ್ಯಯನ ಮಾಡಿ ನಂತರ ಇತರ ಪಳೆಯುಳಿಕೆಗಳಿಗೆ ಸಂಬಂಧಿಸಿದ ವಂಶವೃಕ್ಷವನ್ನು ನಿರ್ಮಿಸಲು ಕಂಪ್ಯೂಟರ್ ಮಾದರಿಯನ್ನು ಬಳಸಿಕೊಂಡು ಲಕ್ಷಾಂತರ ಸಿಮ್ಯುಲೇಶನ್‌ಗಳನ್ನು ರಚಿಸಿದ್ದಾರೆ.
“ಹಾರ್ಬಿನ್ ಮತ್ತು ಚೀನಾದ ಇತರ ಕೆಲವು ಪಳೆಯುಳಿಕೆಗಳು ನಿಯಾಂಡರ್ತಲ್ ಮತ್ತು ಹೋಮೊ ಸೇಪಿಯನ್ಸ್ ಜೊತೆಗೆ ಮಾನವರ ಮೂರನೇ ವಂಶಾವಳಿಯೂ ಇತ್ತು ಎಂಬುವುದನ್ನು ನಿರೂಪಿಸುತ್ತವೆ” ಎಂದು ಸ್ಟ್ರಿಂಗರ್ ವಿವರಿಸುತ್ತಾರೆ.
ಹೋಮೋ ಲಾಂಗಿ ಇದ್ದ ಸಮಯದಲ್ಲಿ ಹೋಮೋ ಸೇಪಿಯನ್ಸ್ ಪೂರ್ವ ಏಷ್ಯಾವನ್ನು ಪ್ರವೇಶಿಸಿದ್ದರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಪುರಾತತ್ತ್ವ ಶಾಸ್ತ್ರದ ಅಧ್ಯಯನ ವಸ್ತುಗಳ ಕೊರತೆಯಿಂದಾಗಿ ಹೊಮೋಲಾಂಗಿಗಳ ಸಂಸ್ಕೃತಿ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಅನೇಕ ಉತ್ತರ ಸಿಗದ ಪ್ರಶ್ನೆಗಳಿವೆ.











