ಯಾದಗಿರಿ: ಯಾದಗಿರಿ ನಗರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರಶುರಾಮ್ (Parashuram) ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ದಲಿತ ಸಂಘಟನೆಗಳು ಆಗ್ರಹಿಸಿವೆ. ಅಷ್ಟೇ ಅಲ್ಲದೇ ಪರಶುರಾಮ್ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ (Channa Reddy Patel) ಮತ್ತು ಪುತ್ರ ಸನ್ನಿಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪೋಸ್ಟಿಂಗ್ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್ ಶಾಸಕ (Congress MLA) ಚೆನ್ನಾರೆಡ್ಡಿ ಪಾಟೀಲ್ ಬೇಡಿಕೆ ಇಟ್ಟಿದ್ದರು. ಈಗ ನಿಯಮಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್ ಹೆಸರೇ ಇರಲಿಲ್ಲ.
ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಎಂದು ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.ಪತಿಯ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಶ್ವೇತಾ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಮಾಧ್ಯಮ ಮುಂದೆ ಮಾತನಾಡಿದ ಅವರು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. 30/ 40 ಲಕ್ಷ ಹಣ ಕೇಳಿದ್ದಾರೆ. ಸಾಕಷ್ಟು ಭಾರೀ ಹಣ ಕೇಳ್ತಿರುವ ಬಗ್ಗೆ ನನಗೆ ಹೇಳಿದ್ದಾರೆ.
ಎಂಎಲ್ಎ ಹಾಗೂ ಎಂಎಲ್ಎ ಮಗ ಹಣ ಕೇಳಿದ್ದಾರೆ. ಅವರ ಇಬ್ಬರನ್ನೂ ಕರೆಸಿ ಅವರು ಅರೆಸ್ಟ್ ಮಾಡಬೇಕು’ ಎಂದು ಹೇಳಿದ್ದಾರೆ.ಪರಶುರಾಮ್ ಅವರು ಪಿಎಸ್ಐ ಹುದ್ದೆ ಪಡೆಯಲು 30 ಲಕ್ಷ ರೂ. ನೀಡಿದ್ದರು. ಈ ಹುದ್ದೆ ಪಡೆಯಲು ಬಹಳ ಸಾಲ ಮಾಡಿದ್ದರು. ಈಗ ಮತ್ತೆ ನಿಯಮಬಾಹಿರವಾಗಿ ಒಂದು ವರ್ಷ ಪೂರೈಸುವ ಮುನ್ನವೇ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಖಿನ್ನತೆಗೆ ಜಾರಿದ್ದರು.
ಈ ಕಾರಣದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.ಕಾರ್ಯಕರ್ತರ ಪ್ರತಿಭಟನೆ:ಪಿಎಸ್ಐ ಪರಶುರಾಮ್ ಮೃತಪಟ್ಟ ಹಿನ್ನೆಲೆಯಲ್ಲಿ ಯಾದಗಿರಿಯ ದಲಿತ ಸಂಘಟನೆಗಳು ರಾತ್ರಿಯೇ ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಅಂಬುಲೆನ್ಸ್ ತಡೆದು ಪ್ರತಿಭಟಿಸಿದ್ದಾರೆ.