ಹಿಂದಿ ರಾಷ್ಟ್ರಭಾಷೆ, ಅದಕ್ಕೆ ವಿರೋಧ ಯಾಕೆ ಎಂದು ಹಿಂದಿ ಸಾಮ್ರಾಜ್ಯಶಾಹಿಯ ಪರವಾಗಿ ಮಾತನಾಡಿರುವ ಸಾಹಿತಿ ಡಾ.ದೊಡ್ಡರಂಗೇಗೌಡರು ಕೂಡಲೇ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಹಾವೇರಿಯಲ್ಲಿ ನಡೆಯಬೇಕಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟಿಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಎಚ್ಚರಿಸಿದ್ದಾರೆ.
ದೊಡ್ಡರಂಗೇಗೌಡರು ಕನ್ನಡದ ಹೆಸರಾಂತ ಕವಿ. ಅವರ ಮೇಲೆ ನಾವೆಲ್ಲರೂ ಅಭಿಮಾನ ಇಟ್ಟುಕೊಂಡಿದ್ದೇವೆ. ಹಿಂದೆ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಿಂದಿಹೇರಿಕೆ ವಿರುದ್ಧ ಮಾತನಾಡಿದ್ದರು. ಈಗ ಇದ್ದಕ್ಕಿದ್ದಂತೆ ಅವರಿಗೆ ಹಿಂದಿ ವ್ಯಾಮೋಹ ಹೇಗೆ ಬಂದಿತು? ಇದನ್ನು ಅವರು ಬಿಡಿಸಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೊಡ್ಡರಂಗೇಗೌಡರು ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲೇ ಈ ಹೇಳಿಕೆ ಹೊರಬಂದಿರುವುದು ಕಳವಳಕಾರಿ. ‘ಹಿಂದಿ ನಮ್ಮ ರಾಷ್ಟ್ರಭಾಷೆ’ ಎಂದು ಅವರ ಬಾಯಿಂದ ಕೆಲವು ಪಟ್ಟಭದ್ರ ಶಕ್ತಿಗಳು ಹೇಳಿಸಿರಬಹುದೇ ಎಂಬ ಅನುಮಾನ ನನಗಿದೆ. ಕನ್ನಡ ಜಾನಪದ ಸೊಗಡಿನ ಸಾಹಿತಿ ಇದ್ದಕ್ಕಿದ್ದಂತೆ ಬದಲಾಗಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ದೊಡ್ಡರಂಗೇಗೌಡರು ಹಿಂದಿಹೇರಿಕೆ ಪರವಾಗಿ ಮಾತನಾಡಲು ಏನು ಕಾರಣ ಎಂದು ಅವರೇ ಬಹಿರಂಗಪಡಿಸಲಿ. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದಕ್ಕೆ ಋಣ ಸಂದಾಯ ಮಾಡುತ್ತಿದ್ದಾರೆಯೇ ಅಥವಾ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಹಿಂದಿಪರ ಮಾತಾಡಲು ಷರತ್ತು ವಿಧಿಸಲಾಗಿತ್ತೇ? ಎಂದು ಅವರು ಕೇಳಿದ್ದಾರೆ.
ಹಾವೇರಿಯಲ್ಲಿ ನಡೆಯಬೇಕಿರುವ ಸಾಹಿತ್ಯ ಸಮ್ಮೇಳನ ಸಾಂಗವಾಗಿ ನಡೆಯಬೇಕೆಂದರೆ ದೊಡ್ಡರಂಗೇಗೌಡರು ನೀಡಿರುವ ಹೇಳಿಕೆ ಹಿಂದಕ್ಕೆ ಪಡೆಯಬೇಕು. ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರಿಗೂ ಹೊಣೆಗಾರಿಕೆ ಇದೆ. ಅವರೂ ಸಹ ಸ್ಪಷ್ಟನೆ ನೀಡಬೇಕು. ಸ್ವಾಭಿಮಾನಿ ಕನ್ನಡಿಗರ ತಾಳ್ಮೆಯನ್ನು ಯಾರೂ ಪರೀಕ್ಷಿಸಬಾರದು ಎಂದು ನಾರಾಯಣ ಗೌಡ ಅವರು ತಾಕೀತು ಮಾಡಿದ್ದಾರೆ.