ಮತದಾರರ ಮಾಹಿತಿ ಕಳವು, ಮಾರಾಟ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದಿರುವ ಬಗ್ಗೆ ತನಿಖೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ಆಯೋಗವು ಉಪ ಆಯುಕ್ತರನ್ನು ತನಿಖೆಗೆ ನೇಮಕ ಮಾಡಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಮಧ್ಯೆ ತಮ್ಮನ್ನು ತಾವೇ ಗಂಡಸು ಎಂದು ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದವರು ಹಾಗೂ ಚಿಲುಮೆ ಸಂಸ್ಥೆಯ ಪ್ರಮುಖ ಕಿಂಗ್ ಪಿನ್ ಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಹಲವು ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಅವುಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಹಣವನ್ನು ಯಾರು ಯಾವ ಕಾರಣಕ್ಕೆ ಯಾರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಬಗ್ಗೆ ಏನೇ ಮಾಹಿತಿ ಇದ್ದರೂ ಇದರ ವಿಚಾರವನ್ನು ಮಾಧ್ಯಮಗಳ ವಿವೇಚನೆಗೆ ಬಿಡುತ್ತೇವೆ. ಕೆಲ ಮಾಧ್ಯಮಗಳು ಈ ರೈತರ ಜತೆ ಮಾತುಕತೆ ನಡೆಸಿವೆ. ಇವರು ಹೇಳಿಕೊಂಡಿರುವ ವಿಚಾರ ಬಯಲಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು. ಪ್ರತಿ ಬೂತ್ ಗಳಲ್ಲಿ ಮತಗಳನ್ನು ಉಳಿಸಿಕೊಳ್ಳಲು ಜಾಗೃತಿ ಮೂಡಿಸಲು ಮಾರ್ಗದರ್ಶನ ನೀಡಲಾಗುವುದು. ಈ ಸರ್ಕಾರ ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಕಿತ್ತುಹಾಕುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅರ್ಜಿ ಹಾಕಿರುವ ಎಲ್ಲರೂ ಹಳ್ಳಿಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡಬೇಕು ಎಂದು ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ತಗಾದೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದೆಲ್ಲ ಬಿಜೆಪಿಯ ಮ್ಯಾಚ್ ಫಿಕ್ಸಿಂಗ್. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಈ ವಿಚಾರವಾಗಿ ಫಡ್ನವೀಸ್ ಏನು ಹೇಳಿದ್ದಾರೆ? ಅವರು ಬೆಳಗಾವಿ ಮಾತ್ರವಲ್ಲ, ಕಾರವಾರವನ್ನು ಕಬಳಿಸಲು ನೋಡುತ್ತಿದ್ದಾರೆ. ಇದೆಲ್ಲವೂ ಪೂರ್ವನಿಯೋಜಿತ ಷಡ್ಯಂತ್ರ. ರಾಜ್ಯದ ಒಂದು ಅಡಿ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ರಾಜ್ಯದಲ್ಲಿರುವ ಮರಾಠಿಗರು ನಮ್ಮ ರಾಜ್ಯದವರೇ. ಅವರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ನಮ್ಮ ಸರ್ಕಾರಗಳು ಅದನ್ನು ಮಾಡಿಕೊಂಡು ಬರುತ್ತಿವೆ. ಈಗ ರಾಜಕೀಯ ಉದ್ದೇಶಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.