ರಣದೀಪ್ ಸಿಂಗ್ ಸುರ್ಜೆವಾಲ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಭಾರತ ಜೋಡೋ ಪಾದಯಾತ್ರೆ ಸಭೆಗಳು ಇದೇ ತಿಂಗಳು 28, 29 ರಂದು ನಡೆಯಲಿವೆ. ಶಾಸಕಾಂಗ ಸಭೆ ಹಾಗೂ ಪದಾಧಿಕಾರಿಗಳ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಯಾರಿಗೆ ಏನೆಲ್ಲಾ ಜವಾಬ್ದಾರಿ ವಹಿಸಬೇಕು, ಯಾವ ರೀತಿ ಯಾತ್ರೆ ಮಾಡಬೇಕು, ಅಧಿವೇಶನದ ನಡುವೆ ಇದರ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ಸೆ.1 ರಂದು ದಿಗ್ವಿಜಯ್ ಸಿಂಗ್ ಹಾಗೂ ಜೈರಾಮ್ ರಮೇಶ್ ಅವರ ಜತೆ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳ ಜತೆ ಸಭೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿಯವರು ಗಣೇಶೋತ್ಸವದ ಹೆಸರಲ್ಲಿ ಸಾರ್ವಕರ್ ಫೋಟೋ ಹಂಚುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ‘ಈ ರಾಜ್ಯದಲ್ಲಿ ಬಿಜೆಪಿಗೆ ಅಭಿವೃದ್ಧಿ ಮಂತ್ರ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗಲಾಟೆ ಮಾಡಿಸಿ, ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ವಿಘ್ನಕ್ಕೆ ನಾಯಕ ವಿನಾಯಕ. ವಿಘ್ನ ನಿವಾರಕನಿಗೂ ಸಾರ್ವಕರ್ ಗೂ ಏನು ಸಂಬಂಧ? ಅವರ ಪಕ್ಷ, ಅವರ ವಿಚಾರಧಾರೆಗಳನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಬಿಡಿಎ ವಿಚಾರವಾಗಿ ಪತ್ರಿಕೆಗಳಲ್ಲಿ ನೋಡಿದ್ದೇನೆ. ರಾಜಕೀಯ ಒತ್ತಡ ಇಲ್ಲದೆ ಯಾವುದೇ ಅಧಿಕಾರಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇದರ ಫಲಾನುಭವಿಗಳು ಮೊದಲು ನೈತಿಕ ಹೊಣೆ ಹೊರಬೇಕು. ಕೂಡಲೇ ಫಲಾನುಭವಿಗಳು, ಸರ್ಕಾರ ದುರುಪಯೋಗ ಮಾಡಿಕೊಂಡಿರುವವರು ರಾಜೀನಾಮೆ ನೀಡಬೇಕು. ಬೊಮ್ಮಾಯಿ ಅವರು ಈ ಸಮಸ್ಯೆ ದೊಡ್ಡದಾಗಿ ಮಾಡಿಕೊಳ್ಳುವ ಮುನ್ನ ಫಲಾನುಭವಿಗಳನ್ನು ಸಂಪುಟದಿಂದ ಕೈ ಬಿಡುವುದು ಸೂಕ್ತ.
ಸೆ. 12 ರಿಂದ ಅಧಿವೇಶನ ಕರೆದಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯತಂತ್ರ ಬಗ್ಗೆ ಪ್ರಶ್ನಿಸಿದಾಗ, ‘ಆ ಬಗ್ಗೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ನಮ್ಮ ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ನಮ್ಮ ಕಾರ್ಯಯೋಜನೆ ತಿಳಿಸುತ್ತೇವೆ’ ಎಂದು ಹೇಳಿದ್ದಾರೆ.