ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಟಿ-20 ಕ್ರಿಕೆಟ್ ನಲ್ಲಿ 8000 ರನ್ ಪೂರೈಸಿದ ದೇಶದ 2ನೇ ಆಟಗಾರ ಎಂಬ ದಾಖಲೆಯ ಹೊಸ್ತಿಲಲ್ಲಿದ್ದಾರೆ.
ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 120 ರನ್ ಬಾರಿಸಿದರೆ 8000 ರನ್ ಪೂರೈಸಲಿದ್ದಾರೆ. ಈ ಮೂಲಕ ತಮ್ಮದೇ ದೇಶದ ಶೋಯೆಬ್ ಮಲಿಕ್ ದಾಖಲೆಯನ್ನು ಮುರಿಯಲಿದ್ದಾರೆ.
ಶೋಯೆಬ್ ಮಲಿಕ್ 472 ಪಂದ್ಯಗಳಲ್ಲಿ 36.55 ಸರಾಸರಿಯಲ್ಲಿ 127.13 ಬ್ಯಾಟಿಂಗ್ ಸರಾಸರಿಯಲ್ಲಿ 71 ಅರ್ಧಶತಕ ಸೇರಿದಂತೆ 11,698 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದ ನಂ.1 ಬ್ಯಾಟ್ಸ್ ಮನ್ ಆಗಿರುವ 27 ವರ್ಷದ ಬಾಬರ್ ಅಜಮ್ 219 ಪಂದ್ಯಗಳಲ್ಲಿ 45.88ರ ಸರಾಸರಿಯಲ್ಲಿ 67 ಅರ್ಧಶತಕ ಹಾಗೂ 6 ಶತಕ ಸೇರಿದಂತೆ 7880 ರನ್ ಗಳಿಸಿದ್ದಾರೆ.

ಪಾಕಿಸ್ತಾನ ತಂಡದಲ್ಲಿರುವ ಮೊಹಮದ್ ರಿಜ್ವಾನ್ ಟಿ-20ಯಲ್ಲಿ 5000 ರನ್ ಪೂರೈಸುವ ಅವಕಾಶ ಹೊಂದಿದ್ದು ಪ್ರಸ್ತುತ 7ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ಶೋಯೆಬ್ ಮಲಿಕ್, ಬಾಬರ್, ಮೊಹಮದ್ ಹಫೀಜ್, ಉಮರ್ ಅಕ್ಮಲ್, ಅಹ್ಮದ್ ಶೆಹಜಾದ್ ಮತ್ತು ಕಮ್ರಾನ್ ಅಕ್ಮಲ್ ಸ್ಥಾನ ಪಡೆದಿದ್ದಾರೆ.
ರಿಜ್ವಾನ್ 187 ಪಂದ್ಯಗಳಲ್ಲಿ 41.95ರ ಸರಾಸರಿಯಲಲ್ಲಿ 4909 ರನ್ ಗಳಿಸಿದ್ದು, 91 ರನ್ ಗಳಿಸಿದರೆ 5000 ರನ್ ಪೂರೈಸಲಿದ್ದಾರೆ. ಲಾಹೋರ್ ಮೂಲದ ರಿಜ್ವಾನ್ ಮತ್ತು ಬಾಬರ್ ಇಬ್ಬರೂ ಟಿ-20 ವಿಶ್ವಕಪ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೇ ಪಾಕಿಸ್ತಾನ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ನಿಂತಿದ್ದಾರೆ.






