“ 1950ರ ಜನವರಿ 26ರಂದು ನಾವು ವೈರುಧ್ಯಗಳ ಹೊಸ ಯುಗಕ್ಕೆ ಪ್ರವೇಶಿಸುತ್ತಿದ್ದೇವೆ. ರಾಜಕೀಯವಾಗಿ ಸಮಾನತೆಯನ್ನು ಹೊಂದಿದ್ದರೂ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆಯನ್ನು ಕಾಣಲಿದ್ದೇವೆ. ರಾಜಕೀಯದಲ್ಲಿ ನಾವು ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದು ಮೌಲ್ಯ ಎನ್ನುವುದನ್ನು ಮಾನ್ಯ ಮಾಡಿರುತ್ತೇವೆ. ನಮ್ಮ ಸಾಮಾಜಿಕ-ಆರ್ಥಿಕ ಬದುಕಿನಲ್ಲಿ, ನಮ್ಮ ಸಾಮಾಜಿಕಾರ್ಥಿಕ ಸಂರಚನೆಯ ಕಾರಣಗಳಿಂದ, ಒಬ್ಬ ವ್ಯಕ್ತಿಗೆ ಒಂದು ಮೌಲ್ಯದ ತತ್ವವನ್ನು ಅನ್ವಯಿಸಲಾಗುವುದಿಲ್ಲ. ಈ ವೈರುಧ್ಯಗಳೊಡನೆ ನಾವು ಎಷ್ಟು ದಿನ ಬಾಳಲು ಸಾಧ್ಯ ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಎಷ್ಟು ದಿನ ಸಮಾನತೆಯನ್ನು ನಿರಾಕರಿಸಲು ಸಾಧ್ಯ? ಇದು ದೀರ್ಘ ಕಾಲ ಮುಂದುವರೆದರೆ ನಾವು ನಮ್ಮ ಪ್ರಜಾಪ್ರಭುತ್ವವನ್ನೇ ಅಪಾಯಕ್ಕೆ ಸಿಲುಕಿಸಲಿದ್ದೇವೆ. ಈ ವೈರುಧ್ಯಗಳನ್ನು ಆದಷ್ಟು ಶೀಘ್ರವಾಗಿ ನಿವಾರಿಸಬೇಕು. ಇಲ್ಲವಾದರೆ ಅಸಮಾನತೆಯಿಂದ ನೊಂದ ಜನರು, ಈ ಸಂವಿಧಾನ ರಚಕ ಸಭೆಯು ಶ್ರಮವಹಿಸಿ ನಿರ್ಮಿಸಿರುವ ಪ್ರಜಾಸತ್ತಾತ್ಮಕ ಸಂರಚನೆಯನ್ನು ಸ್ಫೋಟಿಸಿಬಿಡುತ್ತಾರೆ ” ಇದು ಡಾ ಬಿ ಆರ್ ಅಂಬೇಡ್ಕರ್ 1949ರ ನವಂಬರ್ 25ರಂದು ಸಂವಿಧಾನ ರಚಕ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲಿ ಆಡಿದ ಮಾತುಗಳು. ಭಾರತ ಅಂಬೇಡ್ಕರ್ ಕನಸಿನ ಹಾದಿಯಲ್ಲೇ ನಡೆದಿದ್ದರೆ ಬಹುಶಃ ಈ ಮಾತುಗಳು ಈ ವೇಳೆಗೆ ಅಪ್ರಸ್ತುತವಾಗಿಬಿಡುತ್ತಿತ್ತು. ಆದರೆ ಭಾರತದ ಆಳುವ ವರ್ಗಗಳು ಮತ್ತು ಭಾರತೀಯ ಪ್ರಭುತ್ವ ಅಂಬೇಡ್ಕರ್ ಅವರ ಈ ಆತಂಕದ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿವೆ.
ಸಹನಶೀಲತೆ, ಸಂಯಮ ಮತ್ತು ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸಿ ಒಂದು ಸುಂದರ ಸಮ ಸಮಾಜವನ್ನು ಕಟ್ಟುವ ಸ್ವಾತಂತ್ರ್ಯ ಶಿಲ್ಪಿಗಳ ಕನಸು 75 ವರ್ಷಗಳಲ್ಲಿ ಸಾಕಾರಗೊಳ್ಳಬೇಕಿತ್ತು. ಆದರೆ ಇಂದಿನ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣವನ್ನು ಗಮನಿಸಿದರೆ ನಾವು ಒಂದು ಸಮಾಜವಾಗಿ ಈ ಮೂರೂ ಉದಾತ್ತ ಧ್ಯೇಯಗಳನ್ನು ಕಳೆದುಕೊಂಡಿದ್ದೇವೆ ಎನಿಸುತ್ತದೆ. ಸಹನೆ ಮತ್ತು ಸಂಯಮ ಇಲ್ಲದ ಯಾವುದೇ ಸಮಾಜ ತನ್ನ ಸೃಜನಶೀಲತೆಯನ್ನು ಕಳೆದುಕೊಂಡು ಜಡಗಟ್ಟಿಬಿಡುತ್ತದೆ. ಗತ ಇತಿಹಾಸದ ಕಲ್ಪಿತ ವೈಭವಗಳಲ್ಲಿ ಹುದುಗಿ ಹೋಗುವ ಸಾಂಪ್ರದಾಯಿಕ ಮನಸುಗಳು ಇಂತಹ ಸಮಾಜದ ಪ್ರಧಾನ ಮುಂಚಾಲಕ ಶಕ್ತಿಯಾದಾಗ, ಸಹಜವಾಗಿಯೇ ಇವೆಲ್ಲವೂ ಸಾಪೇಕ್ಷವಾಗಿಬಿಡುತ್ತವೆ. ಭವ್ಯ ಭಾರತೀಯ ಸಂಸ್ಕೃತಿಯಲ್ಲೇ ಸಹನಶೀಲತೆ ಅಡಗಿದೆ ಎಂದು ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುವ ಪ್ರತಿಯೊಂದು ಗಳಿಗೆಯಲ್ಲೂ ಈ ಸಾಪೇಕ್ಷತೆಯೇ ಚಾಲನಾಶಕ್ತಿ ನೀಡುತ್ತದೆ. ಸಹನಶೀಲತೆ ಚಾರಿತ್ರಿಕವಾಗಿ ಯಾರಲ್ಲಿ ಅಡಗಿದೆ ಎಂಬ ಪ್ರಶ್ನೆಗೆ ಮುಖಾಮುಖಿಯಾದಾಗ ನಾವು ಗಲಿಬಿಲಿಗೊಳ್ಳುತ್ತೇವೆ.
ಏಕೆಂದರೆ ಈ ದೇಶದ ಇತಿಹಾಸದುದ್ದಕ್ಕೂ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅನೈತಿಕತೆ, ಚಿತ್ರಹಿಂಸೆ, ಕಿರುಕುಳ ಮತ್ತು ಶ್ರೇಷ್ಠತೆಯ ಮೇಲರಿಮೆಯ ಅಟ್ಟಹಾಸವನ್ನು ಸಹಿಸಿಕೊಂಡು ಬಂದಿರುವ ಒಂದು ಬೃಹತ್ ಜನಸಮುದಾಯ ನಮ್ಮೆದುರು ಬಂದು ನಿಲ್ಲುತ್ತದೆ. ಆಂತರಿಕವಾಗಿ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಆವೃತವಾದ ಒಂದು ಸಮಾಜ ತನ್ನೊಳಗೇ ಅಡಗಿಸಿಕೊಂಡಿದ್ದ ಶೋಷಣೆಯ ಅಸ್ತ್ರಗಳನ್ನು ಬಹಳ ಜಾಣ್ಮೆಯಿಂದ ಬಳಸುತ್ತಾ ಬಂದಿರುವುದೇ ಅಲ್ಲದೆ, ಭೌಗೋಳಿಕ ಭಾರತದ ಸಮಸ್ತ ಜನತೆಯೂ ವಸಾಹತು ಆಕ್ರಮಣಕ್ಕೊಳಗಾದ ಸಂದರ್ಭದಲ್ಲೂ, ಬಾಹ್ಯ ಶಕ್ತಿಗಳೊಡನೆ ಸ್ನೇಹ ಬಾಂಧವ್ಯಗಳನ್ನು ಬೆಸೆದುಕೊಂಡು ತನ್ನ ಶೋಷಕ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದೆ. ಈ ಶ್ರೇಣೀಕೃತ ವ್ಯವಸ್ಥೆಯ ಮೂಲ ನೆಲೆಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ನವ ಉದಾರವಾದದ ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ಗೋಡೆಗಳನ್ನು ಮತ್ತು ಕಂದರಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಆಳುವ ವರ್ಗಗಳು ಸಜ್ಜಾಗಿವೆ.
ಈ ಸಂದರ್ಭದಲ್ಲೇ ಸಹಿಷ್ಣುತೆ ಮತ್ತು ಅಸಹಿಷ್ಣುತೆಯ ಪ್ರಶ್ನೆಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತವೆ. ದೇಶದೆಲ್ಲೆಡೆ ಜಾತಿ ದೌರ್ಜನ್ಯಗಳು, ಮತೀಯ ದಾಳಿಗಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿದ್ದ 2015ರ ಸಂದರ್ಭದಲ್ಲಿ ಅಸಹಿಷ್ಣುತೆಯ ವಿರುದ್ಧ ಪ್ರಬಲವಾದ ದನಿಗಳು ಕೇಳಿಬಂದಿದ್ದವು. ಧಬೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಅವರ ಹತ್ಯೆಯ ಹಿನ್ನೆಲೆಯಲ್ಲಿ, ದಾದ್ರಿಯಲ್ಲಿ ಅಕ್ಲಾಖ್ ಮೇಲೆ ನಡೆದ ಮಾರಣಾಂತಿಕ ದಾಳಿಯ ಹಿನ್ನೆಲೆಯಲ್ಲಿ ದೇಶದ ನೂರಾರು ಬುದ್ಧಿಜೀವಿಗಳು ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ತಮ್ಮ ದನಿ ಎತ್ತಿ ಪ್ರತಿರೋಧದ ಸಂಕೇತವಾಗಿ ಪ್ರಶಸ್ತಿಗಳನ್ನೂ ಹಿಂದಿರುಗಿಸಿದ್ದರು. ಸುತ್ತಲಿನ ವಾತಾವರಣದಲ್ಲಿ ಕಾಣುತ್ತಿದ್ದ ಅಸಹಿಷ್ಣುತೆಗೆ ಕೇವಲ ಧಾರ್ಮಿಕ ಸ್ವರೂಪ ಇರಲಿಲ್ಲ. ಜಾತಿಯ ಲೇಪನವೂ ಇತ್ತು. ವರ್ಗದ ಸ್ಪರ್ಶವೂ ಇತ್ತು. ಊನ, ದಾದ್ರಿ ಒಂದು ನಿದರ್ಶನವಷ್ಟೆ. ಆದರೂ ಸಾರ್ವಜನಿಕ ವಲಯದಲ್ಲಿ ಭಾರತ ಪೂರ್ವೇತಿಹಾಸ ಕಾಲದಿಂದಲೂ ಸಹಿಷ್ಣುತೆಯ ರಾಷ್ಟ್ರವಾಗಿದೆ ಎಂದು ನಿರೂಪಿಸುವ ಪ್ರಯತ್ನಗಳು ನಡೆದಿದ್ದವು. ಅಸಹಿಷ್ಣುತೆಯ ವಿರುದ್ಧ ದನಿ ಎತ್ತಿದವರು “ದೇಶದ್ರೋಹ”ದ ಆರೋಪವನ್ನೂ ಎದುರಿಸಬೇಕಾಯಿತು.
ಈಗ ಭಾರತ ಅಸಹಿಷ್ಣುತೆಯ ಮತ್ತೊಂದು ಆಯಾಮವನ್ನು ಎದುರಿಸುತ್ತಿದೆ. ಅಸ್ಪೃಶ್ಯರ ದೇವಾಲಯ ಪ್ರವೇಶದಿಂದ ಹಿಡಿದು ದಲಿತ ಸಾಮಾಜಿಕ ಮುಂಚಲನೆಯನ್ನೂ ಸಹಿಸಿಕೊಳ್ಳದ ಆಧುನಿಕ ಸಮಾಜ ಜಾತಿ ದೌರ್ಜನ್ಯಗಳನ್ನು ಮತ್ತದೇ ಪರಂಪರೆ ಮತ್ತು ಇತಿಹಾಸದ ವಿಸ್ಮೃತಿಗಳ ನೆಲೆಯಲ್ಲಿ ಸಮರ್ಥಿಸಿಕೊಳ್ಳಲು ಮುಂದಾಗುತ್ತಿದೆ. ಬಡತನ, ದಾರಿದ್ರ್ಯ ಮತ್ತು ಹಸಿವು ಸಹ ಇದೇ ಶ್ರೇಣೀಕೃತ ಜಾತಿ ವ್ಯವಸ್ಥೆಯೊಳಗಿನ ಶೋಷಣಾ ಕ್ರಮದ ವಿಭಿನ್ನ ಸ್ವರೂಪಗಳು ಎಂಬ ವಾಸ್ತವವನ್ನು ಇಂದಿಗೂ ಒಪ್ಪಿಕೊಳ್ಳದ ಪ್ರಬಲ ವರ್ಗಗಳು, ಬಹುಸಂಖ್ಯಾತ ಜನಸಮುದಾಯಗಳು ಎದುರಿಸುತ್ತಿರುವ ನಿತ್ಯ ಬದುಕಿನ ಜ್ವಲಂತ ಸಮಸ್ಯೆಗಳ ಕಾರಣಗಳನ್ನು ಇತಿಹಾಸಗಳಲ್ಲಿ ಹೆಕ್ಕಿ ತೆಗೆಯಲು ಯತ್ನಿಸುತ್ತಿವೆ. ಮೇಲ್ಜಾತಿಯ ಶ್ರೇಷ್ಠತೆಯ ಮೇಲರಿಮೆ ಮತ್ತು ಬಂಡವಾಳಶಾಹಿಯ ನವಿರಾದ ಉರುಳು ಬೃಹತ್ ಜನಸಮೂಹಗಳ ಉಸಿರುಗಟ್ಟಿಸಿ, ಭವಿಷ್ಯದ ಹಾದಿಯನ್ನು ದುರ್ಗಮಗೊಳಿಸುತ್ತಿರುವುದನ್ನು ಮರೆಮಾಚಿ, ಶೋಷಣೆಯ ಮೂಲಗಳನ್ನು ಮೊಘಲರ ಆಳ್ವಿಕೆಯಲ್ಲಿ, ಚಾರಿತ್ರಿಕ ಆಕ್ರಮಣಕಾರರಲ್ಲಿ ಗುರುತಿಸಲು ಪ್ರಯತ್ನಿಸುತ್ತಿವೆ. ಮಾರುಕಟ್ಟೆ ವ್ಯವಸ್ಥೆ ಪ್ರಚೋದಿಸುವ ಆರ್ಥಿಕ ತಾರತಮ್ಯಗಳು ಮತ್ತು ಅಸಮಾನತೆಗಳ ಹಾದಿಗಳೂ ಸಾಮಾನ್ಯ ಜನರಿಗೆ ಕಾಣದಂತೆ ಜಾತಿ, ಧರ್ಮ ಮತ್ತು ಮತಾಂಧತೆಯ ಅಡ್ಡಗೋಡೆಗಳನ್ನು ನಿರ್ಮಿಸಲಾಗುತ್ತಿದೆ.
ಈ ನಡುವೆಯೇ ಆಧುನಿಕ, ಸುಶಿಕ್ಷಿತ, ಮೇಲ್ವರ್ಗದ ಯುವ ಪೀಳಿಗೆಯಲ್ಲಿ ಅಸಹನೆ ತಾಂಡವಾಡುತ್ತಿದೆ. ಕಾರಣಗಳು ನೂರಾರು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ದಲಿತ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಪ್ರೇಮಿಸಿ ಮದುವೆಯಾದ ಕಾರಣಕ್ಕೆ ಮುಸ್ಲಿಂ ಮತಾಂಧರು ಆ ಯುವಕನ ಹತ್ಯೆ ಮಾಡಿದ್ದಾರೆ. ಹುಡುಗಿ ಮುಸ್ಲಿಂ ಮೇಲ್ಜಾತಿಗೆ ಸೇರಿದ್ದವಳೆಂಬ ಅಂಶವೇ ಈ ದೇಶದ ಜಾತಿ ವ್ಯವಸ್ಥೆಯ ಒಳಸೂಕ್ಷ್ಮಗಳನ್ನು ತೋರಿಸುತ್ತದೆ. ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಅಪಹರಿಸಿ ಮದುವೆಯಾಗುವ ಮೂಲಕ ಲವ್ ಜಿಹಾದ್ ನಡೆಸುತ್ತಿದ್ದಾರೆ ಎಂದು ಹುಯಿಲೆಬ್ಬಿಸಿ ಇದೇ ರೀತಿ ಮುಸ್ಲಿಂ ಯುವಕರನ್ನೂ ಹತ್ಯೆ ಮಾಡಿರುವ ಪ್ರಕರಣಗಳು ದಾಖಲಾಗುತ್ತಿವೆ. ಈ ಪ್ರಕರಣದಿಂದ ಮತಾಂಧತೆಗೆ ಜಾತಿ ಧರ್ಮಗಳ ಗೋಡೆಗಳಿಲ್ಲ ಎನ್ನುವುದೂ, ಹಾಗೆಯೇ ಮತಧರ್ಮಗಳು ಜಾತಿ ಶ್ರೇಷ್ಠತೆಯಿಂದ ಮುಕ್ತವಾಗಿಲ್ಲ ಎನ್ನುವುದೂ ಸಾಬೀತಾಗಿದೆ. ಈ ಅಸಹಿಷ್ಣುತೆಯ ಕಾರಣಗಳನ್ನು ಶೋಧಿಸಿದಾಗ ಮತಧರ್ಮಗಳ ಸಾಂಸ್ಥಿಕ ನೆಲೆಗಳೂ ಮತ್ತು ಈ ಸಾಂಸ್ಥಿಕ ಚೌಕಟ್ಟಿನೊಳಗಿಂದಲೇ ಸೃಷ್ಟಿಯಾಗುತ್ತಿರುವ ಕಂದರಗಳೂ ಸ್ಪಷ್ಟವಾಗಿ ಗೋಚರಿಸುತ್ತವೆ. ಶಾಲೆಗೆ ಹೋಗುವ ಹುಡುಗಿ ಧರಿಸುವ ಒಂದು ಹಿಜಾಬ್ ಈ ಕಂದರಗಳೊಳಗಿಂತಲೇ ಅಸಹಿಷ್ಣುತೆಯ ಕಿಡಿಗಳನ್ನು ಸ್ಪೋಟಿಸುವಂತೆ ಮಾಡುತ್ತವೆ. ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗಿರುವ ಕೋಟ್ಯಂತರ ಜೀವಗಳ ನೋವಿನ ದನಿಗಳಿಗೆ ಕಿವುಡಾಗಿರುವ ಒಂದು ಸಮಾಜಕ್ಕೆ, ಒಂದು ತುಂಡು ವಸ್ತ್ರ ಅಪಾಯಕಾರಿಯಾಗಿಯೋ ವಿನಾಶಕಾರಿಯಾಗಿಯೋ ಕಾಣುವುದು ಬೌದ್ಧಿಕ ದಾರಿದ್ರ್ಯದ ಸಂಕೇತ ಅಲ್ಲವೇ ?
ಹೈದರಾಬಾದ್‌ನಲ್ಲಿ ನಡೆದಿರುವ ದಲಿತ ಯುವಕನ ಹತ್ಯೆಯ ಹಿಂದಿರುವ ಅಮಾನುಷ ಮನಸ್ಥಿತಿಯೇ ಕರಾವಳಿಯಲ್ಲಿ , ಉತ್ತರ ಭಾರತದಲ್ಲಿ ನಡೆಯುವ ಲವ್ ಜಿಹಾದ್ ಸಂಬಂಧಿತ ಹತ್ಯೆಗಳಲ್ಲೂ ಕಾಣಬೇಕಲ್ಲವೇ ? ಈ ಮನಸ್ಥಿತಿಗೆ ಕಾರಣವೇನು ? ಈ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ದೇಶದ ಯುವ ಪೀಳಿಗೆಯನ್ನು ಸಾರ್ವತ್ರಿಕ ಮಾನವೀಯ ನೆಲೆಯಲ್ಲಿ ಸಂಘಟಿಸುವ ಜವಾಬ್ದಾರಿ ಇರುವ ಒಂದು ಸಮಾಜ, ಆರ್ಥಿಕ ಅನಿಶ್ಚಿತತೆ ಮತ್ತು ಬಡತನದ ಬೇಗೆಯಿಂದ ದಿಕ್ಕುಗಾಣದಂತಾಗಿರುವ ಈ ಪೀಳಿಗೆಯನ್ನು ಅಮೂರ್ತ ಧಾರ್ಮಿಕ ನೆಲೆಯಲ್ಲಿ ಸಂಘಟಿಸಲು ಮುಂದಾದಾಗ, ಇಂತಹ ಅವಘಡಗಳು ಸಂಭವಿಸುತ್ತವೆ. ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ತಮ್ಮ ಮತೀಯವಾದವನ್ನು ಮತ್ತು ಧಾರ್ಮಿಕ ನಂಬಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಶಕ್ತಿಗಳು ಇಂದು ಅಧಿಕಾರ ರಾಜಕಾರಣದ ಹೊಸ್ತಿಲಲ್ಲಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ. ಹಾಗಾಗಿಯೇ ಒಬ್ಬ ವ್ಯಕ್ತಿಯ ಅಥವಾ ಒಂದು ಸಂಘಟನೆಯ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟಾಗುವುದನ್ನು ಇಡೀ ಸಮುದಾಯಕ್ಕೆ ಸಮೀಕರಿಸಲಾಗುತ್ತದೆ. ಅಬಾಧಿತವಾಗಿಯೇ ಇರುವ ಮತಧರ್ಮದ ಹೆಸರಿನಲ್ಲೇ ಧಕ್ಕೆ ಉಂಟುಮಾಡಿದವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ ಹಲ್ಲೆ, ದಾಳಿ, ಆಕ್ರಮಣ ಮತ್ತು ಹತ್ಯೆಗಳನ್ನು ಸಾಂಸ್ಥಿಕ ನೆಲೆಯಲ್ಲಿ ವ್ಯಾಖ್ಯಾನಿಸುವ ಮೂಲಕ, ಇಸ್ಲಾಂ, ಹಿಂದೂ ಅಥವಾ ಕ್ರೈಸ್ತ ಮತಧರ್ಮಗಳಲ್ಲಿ ಸಹಿಷ್ಣುತೆ ಮತ್ತು ಅಸಹಿಷ್ಣುತೆಯ ಮಾನದಂಡಗಳನ್ನು ಅಳತೆ ಮಾಡಲಾಗುತ್ತದೆ.
ಈ ಆಕ್ರಮಣಕಾರಿ ಅಸಹಿಷ್ಣುತೆಯನ್ನು ಯುವ ಪೀಳಿಗೆಯಲ್ಲಿ ಪೋಷಿಸುತ್ತಿರುವುದರಿಂದಲೇ ಇಂದು ಅಪಾರ ಸಂಖ್ಯೆಯ ಯುವಕರು ಜಾತಿ, ಮತ, ಧರ್ಮದ ಹೆಸರಿನಲ್ಲಿ ಬೀದಿ-ಜೈಲುಪಾಲಾಗುತ್ತಿದ್ದಾರೆ. ಲುಂಪನೀಕರಣಕ್ಕೊಳಗಾಗುತ್ತಿದ್ದಾರೆ. ನವ ಉದಾರವಾದದ ಅರ್ಥವ್ಯವಸ್ಥೆ ಸೃಷ್ಟಿಸುವ ಆರ್ಥಿಕ ಆಭದ್ರತೆ ಮತ್ತು ಮತಾಂಧ ಸಂಘಟನೆಗಳು ಸೃಷ್ಟಿಸುವ ಬೌದ್ಧಿಕ ದಾರಿದ್ರ್ಯಕ್ಕೆ ಬಲಿಯಾಗುತ್ತಿರುವ ಯುವ ಪೀಳಿಗೆ ಶತಮಾನದಷ್ಟು ಹಿಂದಕ್ಕೆ ಚಲಿಸುತ್ತಿರುವ ಭಾರತೀಯ ಸಮಾಜದ ಹಿಂಚಲನೆಯ ಚಾಲಕ ಶಕ್ತಿಯಾಗುತ್ತಿದೆ. ಹೈದರಾಬಾದ್ ಘಟನೆಯಲ್ಲಿ ಭಾಗಿಯಾಗಿರುವ ಒಂದು ಗುಂಪನ್ನು, ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಹಿಂದೂ ಮತಾಂಧ ಸಂಘಟನೆಗಳನ್ನು, ಮಂಗಳೂರಿನಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ವರ್ತಿಸುವ ಮುಸ್ಲಿಂ ಯುವತಿಯರಿಗೆ ಬೆದರಿಕೆ ಹಾಕಿರುವ ಮತಾಂಧ ಸಂಘಟನೆಯನ್ನು ಸಾಂಘಿಕವಾಗಿ ಪ್ರತ್ಯೇಕಿಸಿ ನೋಡಬಹುದಾದರೂ, ಸಾಂಸ್ಥಿಕವಾಗಿ ಹಾಗೆ ನೋಡಲಾಗುವುದಿಲ್ಲ. ಈ ವಿಚ್ಚಿದ್ರಕಾರಕ ಮನಸುಗಳನ್ನು ಉತ್ಪಾದಿಸುವ ಬೌದ್ಧಿಕ ಕಾರ್ಖಾನೆಗಳೇ ನಮ್ಮ ನಡುವೆ ಸೃಷ್ಟಿಯಾಗಿದೆ. ಈ ಕಾರ್ಖಾನೆಗಳಿಂದ ಹೊರಸೂಸುವ ವಿಷಾನಿಲ, ವಿಷಪೂರಿತ ಧೂಳು ಮತ್ತು ಅಮಾನುಷ ಹವೆ ಸುಶಿಕ್ಷಿತ ಹಿತವಲಯದ ಮಧ್ಯಮವರ್ಗಗಳನ್ನೂ ಆವರಿಸಿರುವುದನ್ನು ಈ ವರ್ಗದ ದಿವ್ಯ ಮೌನದಲ್ಲಿ ಗುರುತಿಸಬಹುದು.
ನಿಜ, ಭಾರತದ ಇಂದಿನ ಪರಿಸ್ಥಿತಿಯಲ್ಲಿ ಅಸಹನೆಗೆ ಕಾರಣಗಳು ಹೇರಳವಾಗಿವೆ. ಅಸಹಿಷ್ಣುತೆಯನ್ನು ಪ್ರದರ್ಶಿಸಲು ವಿಪುಲ ಕಾರಣಗಳೂ, ಮಾರ್ಗಗಳೂ ಇವೆ. ಶಿಕ್ಷಣದ ಹಕ್ಕು ಕಸಿದುಕೊಳ್ಳುತ್ತಿರುವ ಹೊಸ ಶಿಕ್ಷಣ ನೀತಿ 2020, ಪೌರತ್ವವನ್ನೇ ಪ್ರಶ್ನಿಸುತ್ತಿರುವ ಹೊಸ ಕಾಯ್ದೆಗಳು, ಶ್ರಮಜೀವಿಗಳ ದುಡಿಮೆಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಕಾರ್ಮಿಕ ಸಂಹಿತೆಗಳು, ನಿರುದ್ಯೋಗವನ್ನು ಹೆಚ್ಚಿಸುವ ಮೂಲಕ ಹೆಚ್ಚು ಹೆಚ್ಚು ಯುವಪೀಳಿಗೆಯನ್ನು ದಾರಿದ್ರ್ಯದ ಕೂಪಕ್ಕೆ ತಳ್ಳುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು, ತಮ್ಮ ಅಧಿಕಾರಲಾಲಸೆಗಾಗಿ ಜನಸಾಮಾನ್ಯರ ನಡುವೆ ಜಾತಿ ಮತಗಳ ಶಾಶ್ವತ ಗೋಡೆಗಳನ್ನು ಕಟ್ಟುತ್ತಿರುವ ಕ್ಷುದ್ರ ರಾಜಕಾರಣ, ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯಗಳನ್ನು ಕಂಡೂ ಕಾಣದಂತಿರುವ ಒಂದು ನಾಗರಿಕ ಸಮಾಜ, ವೈಚಾರಿಕತೆಯನ್ನು ದಾಟಿ ಧಾರ್ಮಿಕತೆಯ ಬೀಜಗಳನ್ನು ಬಿತ್ತುತ್ತಿರುವ ಮತಾಂಧತೆ, ಇಂದಿಗೂ ಅಸ್ಪೃಶ್ಯತೆ ಮತ್ತು ದೌರ್ಜನ್ಯ ಎದುರಿಸುತ್ತಿರುವ ದಲಿತ ಸಮುದಾಯದ ಬವಣೆ, ನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಮಹಿಳಾ ಸಮೂಹ, ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಹರಣವಾಗುತ್ತಿರುವ ವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು, ಈ ಕಾರಣಗಳಿಗಾಗಿ ಸಮಾಜದಲ್ಲಿ ಅಸಹನೆ ಸ್ಫೋಟಿಸಬೇಕಿತ್ತು. ಪ್ರಜಾತಂತ್ರ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳು ಶಿಥಿಲವಾಗುತ್ತಿರುವ ಕಾರಣಕ್ಕೆ ಅಸಹಿಷ್ಣುತೆ ವ್ಯಕ್ತವಾಗಬೇಕಿತ್ತು. ಶಾಂತಿಯುತವಾದ, ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಈ ಅಸಹನೆಯ ಧ್ವನಿ ಸಮಾಜದಲ್ಲಿ ಮೊಳಗಬೇಕಿತ್ತು.
ಆದರೆ ಈ ಎಲ್ಲ ಅನೀತಿಯುತ ಬೆಳವಣಿಗೆಗಳಿಗೂ ನಮ್ಮ ಸಮಾಜ ಮೌನ ವಹಿಸಿ, ಬೌದ್ಧಿಕ ನಿಷ್ಕ್ರಿಯತೆಗೊಳಗಾಗಿದೆ. ಅವಕಾಶವಂಚಿತ ಜನಸಮುದಾಯಗಳು ಬುಲ್ಡೋಜರುಗಳನ್ನೂ ಸಹಿಸಿಕೊಳ್ಳುತ್ತಿವೆ. ಬಂಢವಾಳಶಾಹಿಯ ಆಕ್ರಮಣಕ್ಕೆ ತುತ್ತಾಗಿ ನೆಲೆ ಕಳೆದುಕೊಳ್ಳುತ್ತಿರುವ ಲಕ್ಷಾಂತರ ಆದಿವಾಸಿಗಳು ತಮ್ಮ ಅತಂತ್ರ ಸ್ಥಿತಿಯನ್ನೇ ಸಹಿಸಿಕೊಳ್ಳುತ್ತಿದ್ದಾರೆ. ತಮ್ಮ ಕಣ್ಣೆದುರಿನಲ್ಲೇ ನಡೆಯುತ್ತಿರುವ ರಾಜಕೀಯ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪವನ್ನೂ ಜನರು ಸಹಿಸಿಕೊಳ್ಳುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳ ಅಪರಾಧೀಕರಣ ಮತ್ತು ಭ್ರಷ್ಟತೆ ಪರಾಕಾಷ್ಠೆ ತಲುಪಿರುವುದನ್ನೂ ಮತದಾರರು ಸಹಿಸಿಕೊಳ್ಳುತ್ತಿದ್ದಾರೆ. ಸರ್ಕಾರಗಳ ವಸಾಹತು ಕಾಲದ ದಮನಕಾರಿ ಕಾನೂನುಗಳನ್ನೂ ಸಹಿಸಿಕೊಳ್ಳಲಾಗುತ್ತಿದೆ. ಈ ಸಹಿಷ್ಣುತೆಗೆ ಪಾವಿತ್ರ್ಯತೆಯ ಲೇಪನ ನೀಡಿ, ಉಳ್ಳವರಿಗೆ, ಸ್ಥಾಪಿತ ಹಿತಾಸಕ್ತಿಗಳಿಗೆ ಮತ್ತು ಕಾರ್ಪೋರೇಟ್ ಮಾರುಕಟ್ಟೆಗೆ ನೆರವಾಗುವ ಧಾರ್ಮಿಕ ಅಸಹಿಷ್ಣುತೆಯನ್ನು ಮುನ್ನೆಲೆಗೆ ತರಲಾಗುತ್ತಿದೆ. ವ್ಯಕ್ತಿಗತ ಅಸ್ಮಿತೆಗಳನ್ನು ಜಾತಿ, ಮತ, ಧರ್ಮಗಳ ಸಾಂಸ್ಥಿಕ ಅಸ್ಮಿತೆಗಳಲ್ಲಿ ವಿಲೀನಗೊಳಿಸಿ ಸ್ವಂತಿಕೆಯನ್ನೇ ಕಳೆದುಕೊಳ್ಳುವ ಒಂದು ಬೃಹತ್ ಪಡೆಯನ್ನು ಯುವ ಪೀಳಿಗೆಯ ನಡುವೆ ಸೃಷ್ಟಿಸಲಾಗುತ್ತಿದೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಈ ಪಡೆಗಳೇ ಇಂದು ವ್ಯಕ್ತಿ ಮತ್ತು ಅಭಿವ್ಯಕ್ತಿ ತಂತ್ರ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಇಲ್ಲಿ ಉತ್ಪಾದಿಸಲಾಗುವ ಅಸಹಿಷ್ಣುತೆಯೇ ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಶೋಷಣೆಯ ಅಸ್ತ್ರಗಳನ್ನು ಮರೆಮಾಚುವ ಮಂಜಿನ ಪರದೆಗಳಾಗುತ್ತಿವೆ. ಹಾಗಾಗಿಯೇ ನಿರ್ಗತಿಕತೆಯತ್ತ ಸಾಗುತ್ತಿರುವ ಯುವ ಪೀಳಿಗೆಯೂ ತನ್ನ ಸ್ವಂತಿಕೆಯನ್ನು ಕಳೆದುಕೊಂಡು, ಮತೀಯ ಮೂಲಭೂತವಾದದ ಕಾಲಾಳುಪಡೆಗಳಾಗುತ್ತಿದೆ. ಇಲ್ಲಿ ಮಡುಗಟ್ಟುತ್ತಿರುವ ಸಹನೆ ಮತ್ತು ಜಡಗಟ್ಟಿರುವ ಕ್ರಿಯಾಶೀಲತೆಗೆ ಹೊರದಾರಿಗಳನ್ನು ತೋರುವಂತಾದರೆ, ಸಮಾಜವನ್ನು ಸರಿದಾರಿಗೆ ತರುವುದು ಸುಲಭವಾಗುತ್ತದೆ. ಈ ಜವಾಬ್ದಾರಿಯನ್ನು ಪ್ರಗತಿಪರ ಎನ್ನಲಾಗುವ ಸಾಂಘಿಕ ಶಕ್ತಿಗಳು ಮತ್ತು ದೇಶಕ್ಕಾಗಿ ಮರುಗುವ ಮನಸುಗಳು ಹೊರಬೇಕಾಗಿದೆ.