ಮೊಬೈಲ್ ನೆಟ್ ವರ್ಕ್, ವಿದ್ಯುತ್, ರಸ್ತೆ, ಶಾಲೆ ಮತ್ತು ಆಸ್ಪತ್ರೆಯಂತಹ ಮೂಲಸೌಕರ್ಯಗಳಿಗಾಗಿ ಆಗ್ರಹಿಸಿ ಮಲೆನಾಡಿನ ಸಾಗರ ತಾಲೂಕಿನ ಶರಾವತಿ ಹಿನ್ನೀರು ಭಾಗದಲ್ಲಿ ದಶಕಗಳಿಂದಲೂ ನಡೆಯುತ್ತಿರುವ ಜನಹೋರಾಟ ಮತ್ತು ಹಕ್ಕೊತ್ತಾಯ, ಇದೀಗ ಜನಾಂದೋಲನದ ಸ್ವರೂಪ ಪಡೆದಿದೆ. ಹಾಗೇ ಶರಾವತಿ ದ್ವೀಪ ತುಮರಿ ಭಾಗವನ್ನು ಮೀರಿ, ಮಲೆನಾಡಿನ ಸೌಲಭ್ಯವಂಚಿತ ವಿವಿಧ ತಾಲೂಕುಗಳಿಗೆ ವ್ಯಾಪಿಸತೊಡಗಿದೆ.
ಪ್ರತಿ ನಾಲ್ಕಾರು ವರ್ಷಗಳಿಗೊಮ್ಮೆ ಆಳುವ ಸರ್ಕಾರಗಳು, ದೇಶದ ಎಲ್ಲಾ ಹಳ್ಳಿಗಳಿಗೆ ಸಂಪೂರ್ಣ ವಿದ್ಯುತ್ ಸಂಪರ್ಕ, ಡಿಜಿಟಲ್ ಗ್ರಾಮ, ಪ್ರತಿ ಮಗುವಿಗೂ ಕಲಿಕೆಯ ಅವಕಾಶ, ಪ್ರತಿ ಪಂಚಾಯ್ತಿಯಲ್ಲೂ ಸುಸಜ್ಜಿತ ಆರೋಗ್ಯ ಸೇವೆ ಮುಂತಾದ ಆಕರ್ಷಕ ಘೋಷಣೆಗಳನ್ನು ಮಾಡುವುದನ್ನು ಕೇಳುತ್ತಲೇ ಇದ್ದೇವೆ. ಅದರಲ್ಲೂ ಕೇವಲ ಘೋಷಣೆ ಮತ್ತು ಭರವಸೆಗಳ ಮೂಲಕವೇ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರ ಆಡಳಿತದಲ್ಲಂತೂ ‘ಡಿಜಿಟಲ್ ಇಂಡಿಯಾ’, ‘ಸ್ವಸ್ಥ ಭಾರತ, ಸ್ವಚ್ಛ ಭಾರತ’, ‘ಪವರ್ ಫುಲ್ ಇಂಡಿಯಾ, ‘ಬೇಟಿ ಬಚಾವೋ, ಬೇಟಿ ಪಢಾವೋ’, ‘ಪಡೇ ಭಾರತ್, ಬಡೇ ಭಾರತ್’, ದಿಶಾ(ಡಿಜಿಟಲ್ ಸಾಕ್ಷರತೆ), .. ಸೇರಿದಂತೆ ಘೋಷಣೆಗಳ ಮಹಾಪೂರವೇ ಹರಿಯುತ್ತಿದೆ.
ಅಷ್ಟೇ ಅಲ್ಲ; 2018ರ ಏಪ್ರಿಲ್ 28ರಂದೇ ಪ್ರಧಾನಿ ಮೋದಿಯವರು, ಅಂದು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದ ಮಣಿಪುರದ ಲೈಸಂಗ್ ಹಳ್ಳಿಯೇ ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕಟ್ಟಕಡೆಯ ಹಳ್ಳಿ. ಇದೀಗ ಆ ಹಳ್ಳಿಯ ವಿದ್ಯುತ್ ಸಂಪರ್ಕದೊಂದಿಗೆ ದೇಶದ ಪ್ರತಿ ಹಳ್ಳಿ, ಕುಗ್ರಾಮವೂ ವಿದ್ಯುತ್ ಸಂಪರ್ಕ ಪಡೆದಂತಾಗಿದೆ. ಆ ಮೂಲಕ ಜಗತ್ತಿನ ಮುಂದೆ ಭಾರತ ನಿಜವಾಗಿಯೂ ‘ಪವರ್ ಫುಲ್ ಇಂಡಿಯಾ’ ಆಗಿ ಇಂದು ಹೊರಹೊಮ್ಮಿದೆ ಎಂದು ಹೇಳಿದ್ದರು.
ಆದರೆ, ಇಂತಹ ಘೋಷಣೆಗಳ ಅಸಲೀತನ ಅರಿವಾಗಬೇಕಾದರೆ ನೀವು ಮಲೆನಾಡಿನ ಹಳ್ಳಿಗಳಿಗೆ ಬರಬೇಕು. ಅದರಲ್ಲೂ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಗಡಿ ಭಾಗದ ಶರಾವತಿ ಕಣಿವೆಯ ಹಳ್ಳಿಗಳು ವಿದ್ಯುತ್, ಮೊಬೈಲ್, ಶಾಲೆ, ಆಸ್ಪತ್ರೆಯಂತಹ ಕನಿಷ್ಟ ಮೂಲಸೌಕರ್ಯಗಳ ವಿಷಯದಲ್ಲಿ ಹೊರ ಜಗತ್ತಿಗೆ ಹೋಲಿಸಿದರೆ ಶತಮಾನದಷ್ಟು ಹಿಂದಿವೆ. ನಾಗರಿಕ ಮನುಷ್ಯ ಜೀವಿಸಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ಸಕಲ ಸೌಲಭ್ಯವಂಚಿತವಾಗಿರುವ ಈ ಹಳ್ಳಿಗಳ ಅವಸ್ಥೆಗೆ ಕಳೆದ ವಾರ ಅದೇ ಶರಾವತಿ ಕಣಿವೆಯ ಬಾರಂಗಿ ಹೋಬಳಿ ವ್ಯಾಪ್ತಿಯ ಭಾನುಕುಳಿ ಪಂಚಾಯ್ತಿ ವ್ಯಾಪ್ತಿಯ ತಗ್ತಿ ಎಂಬ ಕುಗ್ರಾಮದಲ್ಲಿ ನಡೆದ ನಾಗರಿಕ ವ್ಯವಸ್ಥೆ ತಲೆತಗ್ಗಿಸುವಂತಹ ಘಟನೆಯೇ ನಿದರ್ಶನ.
ಆ ಕುಗ್ರಾಮದ ರೈತ ಮಹಿಳೆ ರತ್ನಮ್ಮ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ, ಅವರನ್ನು ಸುಮಾರು 70 ಕಿ.ಮೀ ದೂರದ ತಾಲೂಕು ಕೇಂದ್ರ ಸಾಗರದ ಸರ್ಕಾರಿ ಆಸ್ಪತ್ರೆಗೆ(ಇದು ಬಿಟ್ಟರೆ ಸಮೀಪದಲ್ಲಿ ಯಾವ ಆಸ್ಪತ್ರೆಯ ವ್ಯವಸ್ಥೆ ಇಲ್ಲ!) ಕರೆತರಲು, ಆಕೆಯ ಮನೆಮಂದಿ ಸುರಿಯುವ ಮಳೆಯ ನಡುವೆ ಎರಡು ಮರದ ತುಂಡಿಗೆ(ದಡಿಗೆ) ಕಂಬಳಿ ಕಟ್ಟಿ ಜೋಲಿ ಮಾಡಿಕೊಂಡು ವಾಹನ ತಲುಪುವ ಮೂರು ಕಿ.ಮೀ ದೂರದ ಕಾನೂರು ಗ್ರಾಮದವರೆಗೆ ಹೊತ್ತು ತಂದಿದ್ದಾರೆ. ಹಾಗೆ ನಾಲ್ವರು ಆ ಮಹಿಳೆಯನ್ನು ಕಂಬಳ್ಳಿ ಜೋಲಿಯಲ್ಲಿ ಹೊತ್ತುತರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಖ್ಯವಾಗಿ ಶರಾವತಿ ಕಣಿವೆ ಭಾಗದ ವಿದ್ಯುತ್, ಮೊಬೈಲ್, ರಸ್ತೆ, ಆಸ್ಪತ್ರೆಯಂತಹ ಕನಿಷ್ಟ ಸೌಲಭ್ಯವಂಚಿತ ಜನರ ಸಮಸ್ಯೆಗಳ ಚರ್ಚೆಗೆ ಗ್ರಾಸವಾಗಿದೆ.
ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಶತಮಾನಗಳಿಂದ ವಾಸವಾಗಿರುವ ಈ ತಗ್ತಿ, ಕಲಗಲಿ, ಚೀಕನಹಳ್ಳಿ, ಸಾಲ್ಕೋಡು, ಉರುಳುಗಲ್ಲು ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ, ಕೇವಲ 80-90ರ ದಶಕದ ಹೊತ್ತಿಗೆ ಜಾರಿಗೆ ಬಂದ ಅಭಯಾರಣ್ಯದ ನೆಪವೊಡ್ಡಿ ನಾಗರಿಕ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ಹಾಗಾಗಿ ಅಲ್ಲಿನ ಜನ ಖಾಯಿಲೆ ಬಂದರೆ ದೂರದ ತಾಲೂಕು ಆಸ್ಪತ್ರೆಗೆ ಹೋಗಲು ಕನಿಷ್ಟ ನಾಲ್ಕು ಚಕ್ರದ ವಾಹನ ಸಂಚಾರದ ರಸ್ತೆ ಇಲ್ಲ, ಮಳೆಗಾಲದಲ್ಲಂತೂ ಬೈಕ್ ಕೂಡ ಸಂಚರಿಸಲು ಸಾಧ್ಯವಿಲ್ಲ. ಇನ್ನು ವಿದ್ಯುತ್ ಎಂಬುದು ಬಹುತೇಕ ಜನರಿಗೆ ಇಂದಿಗೂ ಕನಸಿನ ಮಾತು. ವಿದ್ಯುತ್ ಸಂಪರ್ಕಕ್ಕೆ ಕಾಡಿನ ನಡುವೆ ವಿದ್ಯುತ್ ಮಾರ್ಗ ನಿರ್ಮಿಸಬೇಕೆಂಬ ಕಾರಣಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ತಗಾದೆ ತೆಗೆಯುತ್ತಲೇ ಇದೆ. ಶಾಲೆಗೆ ಹೋಗಲು ಕೂಡ ಮಕ್ಕಳು ಕನಿಷ್ಟ ಅಂಗನವಾಡಿ ಕಾಣಲು ಕನಿಷ್ಟ ಮೂರರಿಂದ ಹತ್ತು ಕಿ.ಮೀ ಸಾಗಬೇಕಾದ ದುರವಸ್ಥೆ ಇದೆ. ಇನ್ನು ಮೊಬೈಲ್ ನೆಟ್ವರ್ಕ್ ಪಡೆಯುವುದಂತೂ ಅಲ್ಲಿನ ಜನರಿಗೆ ನಿತ್ಯದ ಟ್ರೆಕ್ಕಿಂಗ್ ಸಾಹಸ. ಕನಿಷ್ಟ ನಾಲ್ಕಾರು ಕಿ.ಮೀ ನಡೆದು ಯಾವುದಾದರೂ ಬೋಳು ಗುಡ್ಡ ಏರಿದರೆ ಮಾತ್ರ ಚೂರುಪಾರು ನೆಟ್ವರ್ಕ್! ಇಲ್ಲವಾದರೆ ಹೊರಜಗತ್ತಿನ ಸಂಪರ್ಕವೇ ಇಲ್ಲ!
ಇಂತಹ ಹೀನಾಯ ಸ್ಥಿತಿಯ ನಡುವೆಯೇ ಇದೀಗ ಶರಾವತಿ ಕಣಿವೆಯಲ್ಲಿ, ಮುಖ್ಯವಾಗಿ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣ ಮತ್ತು ವರ್ಕ್ ಫ್ರಮ್ ಹೋಂ ಉದ್ಯೋಗಿಗಳ ನೆಟ್ವರ್ಕ್ ಸಮಸ್ಯೆಯ ಹಿನ್ನೆಲೆಯಲ್ಲಿ ‘ನೋ ನೆಟ್ವರ್ಕ್, ನೋ ವೋಟಿಂಗ್’ ಹೋರಾಟ ಭುಗಿಲೆದ್ದಿದೆ. ಕರೂರು ಮತ್ತು ಭಾರಂಗಿ ಹೋಬಳಿಯ ಕಟ್ಟಿನಕಾರು ಪಂಚಾಯ್ತಿ ವ್ಯಾಪ್ತಿಯಲ್ಲಿ ಆರಂಭವಾದ ಹೋರಾಟ ಇದೀಗ ಇಡೀ ಎರಡು ಹೋಬಳಿಯಲ್ಲಿ ಮಾರ್ದನಿಸುತ್ತಿದ್ದು, ಪಕ್ಷಾತೀತವಾಗಿ ಹಲವು ಸಂಘಟನೆಗಳ ಬೆಂಬಲದೊಂದಿಗೆ ಜನಾಂದೋಲನವಾಗಿ ಹೊರಹೊಮ್ಮಿದೆ.
ಸ್ವತಃ ಆಡಳಿತ ಪಕ್ಷದ ಶಾಸಕರಾಗಿರುವ ಸಾಗರದ ಹರತಾಳು ಹಾಲಪ್ಪ ಕೂಡ ಈ ಜನಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, “ಜನರ ನ್ಯಾಯಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಹಲವು ಬಾರಿ ಈ ಭಾಗದ ನೆಟ್ವರ್ಕ ಮತ್ತಿತರ ಸಮಸ್ಯೆಗಳ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸವಾಗಿಲ್ಲ. ಹಾಗಾಗಿ ಜನ ರೋಸಿ ಈ ಹೋರಾಟ ಕೈಗೆತ್ತಿಕೊಂಡಿದ್ದಾರೆ. ಅದು ಅನಿವಾರ್ಯ” ಎನ್ನುವ ಮೂಲಕ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲೆನಾಡು ಭಾಗದ ಜನರ ಸಮಸ್ಯೆಗಳ ವಿಷಯದಲ್ಲಿ ಕಣ್ಣುಮುಚ್ಚಿ ಕೂತಿವೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಹಾಗೇ ಸಾಗರ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮತ್ತು ಮಾಜಿ ಸಚಿವ ಕಾಗೋಡು ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಕೂಡ ಮಲೆನಾಡಿಗರ ‘ನೋ ನೆಟ್ವರ್ಕ್ ನೋ ವೋಟಿಂಗ್’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ಧಾರೆ.
ಈ ನಡುವೆ ಹೋರಾಟದ ಮುಂಚೂಣಿಯಲ್ಲಿರುವ ನಾಯಕರಲ್ಲಿ ಒಬ್ಬರಾದ ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಜನಪರ ಹೋರಾಟಗಾರ ಜಿ ಟಿ ಸತ್ಯನಾರಾಯಣ ಅವರು, “ಶರಾವತಿ ಹಿನ್ನೀರು ದ್ವೀಪ ಪ್ರದೇಶದ ಮಕ್ಕಳು ಮತ್ತು ದುಡಿಯುವ ಜನರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿರುವ ಸಂಗತಿಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ದೊಡ್ಡದು. ದಶಕಗಳಿಂದ ಹತ್ತಾರು ಹೋರಾಟ, ಮನವಿಗಳ ಮೂಲಕ ಈ ಬಗ್ಗೆ ಸಂಸದರು, ಶಾಸಕರು, ಆಡಳಿತ ವ್ಯವಸ್ಥೆಯ ಗಮನ ಸೆಳೆದರೂ, ಸ್ವತಃ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ‘ಡಿಜಿಟಲ್ ಗ್ರಾಮ’ ಎಂದು ತುಮರಿಯನ್ನು ಘೋಷಿಸಿದರೂ, ಈವರೆಗೆ ಇಲ್ಲಿ ಮೊಬೈಲ್ ನೆಟ್ವರ್ಕ್ ಎಂಬುದು ದಿನನಿತ್ಯದ ಗೋಳಾಗಿದೆ. ಆ ಹಿನ್ನೆಲೆಯಲ್ಲಿ ಕರೋರು ಮತ್ತು ಬಾರಂಗಿ ಹೋಬಳಿಯಲ್ಲಿ ಆನ್ ಲೈನ್ ಅಭಿಯಾನವಾಗಿ ಆರಂಭವಾದ ನೋ ನೆಟ್ವರ್ಕ್ ನೋ ವೋಟಿಂಗ್, ಇದೀಗ ಜನಹೋರಾಟವಾಗಿ, ಜನಾಂದೋಲನವಾಗಿ ಬದಲಾಗಿದೆ. ಅಷ್ಟೇ ಅಲ್ಲ, ದ್ವೀಪವನ್ನೂ ದಾಟಿ ಮಲೆನಾಡಿನ ಹೊಸನಗರ, ತೀರ್ಥಹಳ್ಳಿ, ಕುಂದಾಪುರ, ಉಡುಪಿ ಭಾಗಕ್ಕೂ ವ್ಯಾಪಿಸುತ್ತಿದೆ. ಕೊನೆಗೂ ಜನರ ದನಿ ಆಳುವ ಮಂದಿಗೆ ಬಿಸಿಮುಟ್ಟಿಸಲಿದೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ಮುಖ್ಯವಾಗಿ ಆರಂಭವಾಗಿರುವ ಈ ಅಭಿಯಾನ, ಏಕಕಾಲಕ್ಕೆ ಸ್ಥಳೀಯ ಶಾಸಕರು, ಸಂಸದರು, ಆಡಳಿತ ವ್ಯವಸ್ಥೆ ಕನಿಷ್ಟ ಮೂಲಸೌಕರ್ಯ ವಿಷಯದಲ್ಲಿ ಎಷ್ಟು ಹೀನಾಯವಾಗಿ ಸೋತಿದೆ ಎಂಬುದನ್ನೂ, ಅದೇ ಹೊತ್ತಿಗೆ ಡಿಜಿಟಲ್ ಇಂಡಿಯಾ, ಫವರ್ ಫುಲ್ ಇಂಡಿಯಾ ಮುಂತಾದ ಘೋಷಣೆಗಳ ಪೊಳ್ಳುತನವನ್ನೂ ಬಯಲುಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಈ ಹೋರಾಟ ಪಡೆಯಲಿರುವ ಸ್ವರೂಪ ಕುತೂಹಲಕರ!