ಕೃಷಿ ಸಚಿವ ಎನ್ ಚಲುವರಾಯಸ್ವಾಮಿ 6 ರಿಂದ 8 ಲಕ್ಷ ರೂಪಾಯಿ ಲಂಚದ ಹಣ ಕೇಳಿದ್ದಾರೆ ಅನ್ನೋ ಪತ್ರ ರಾಜಭವನಕ್ಕೆ ತಲುಪಿತ್ತು. ಅದೊಂದು ಸುಳ್ಳು ಪತ್ರ ಎಂದು ಸ್ವತಃ ಸಚಿವರು ಹೇಳಿಕೊಂಡು, ಆ ಬಳಿಕ ಸಿಐಡಿ ತನಿಖೆ ಮಾಡಿಸಲು ಸರ್ಕಾರ ಸಮ್ಮತಿಸಿದೆ. ಈ ನಡುವೆ ಬೆಂಗಳೂರು ಅಬಿವೃದ್ಧಿ ಸಚಿವ ಡಿಸಿಎಂ ಡಿ.ಕೆ ಶಿವಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಇದೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೆ ಕಾರಣಕರ್ತರಾದ ಗುತ್ತಿಗೆದಾರರು ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಕೇಳ್ತಿದ್ದಾರೆ ಎಂದು ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ್ದ ಗುತ್ತಿಗೆದಾರರು, ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಸ್ವತಃ ಡಿಸಿಎಂ ಸಿ.ಕೆ ಶಿವಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ನೇರವಾಗಿಯೇ ಹೇಳಿದ್ದಾರೆ.
ನೀವು ನಂಬಿರುವ ಅಜ್ಜಯ್ಯನ ಮೇಲೆ ಆಣೆ ಮಾಡೋಕೆ ಸಿದ್ಧನಾ..?
ಡಿಸಿಎಂ ಡಿ.ಕೆ ಶಿವಕುಮಾರ್ ಸದಾಕಾಲ ಪೂಜಿಸುವ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರ ಹೇಮಂತ್ ನೇರವಾಗಿ ಸವಾಲು ಹಾಕಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ಮಾಡಿ ಸರ್ಕಾರದಿಂದ ಹಣ ರಿಲೀಸ್ ಆಗಿದೆ ಆದರೆ BBMP ಬಿಲ್ ಕೊಡ್ತಿಲ್ಲ, ತನಿಖೆ ಮಾಡುವ ನೆಪದಲ್ಲಿ ಗುತ್ತಿಗೆದಾರರಿಗೆ ಸಂಕಷ್ಟ ಕೊಡಲಾಗ್ತಿದೆ. ನಾವೂ ಆತ್ಮಹತ್ಯೆ ಮಾಡಿಕೊಳ್ಳೋವರೆಗೂ ಕಾಯಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ. ಪಾಲಿಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಗುತ್ತಿಗೆದಾರರು ಸಾಯ್ತೇವೇ ಅಂದ್ರೆ ಸಾಯಿರಿ ಅಂತಾರೆ ಎಂದು ಬೆಂಗಳೂರು ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್ ನೇರವಾಗಿಯೇ ಆರೋಪ ಮಾಡಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಮಾತ್ರ ನಯವಾಗಿಯೇ ಅಲ್ಲಗಳೆದಿದ್ದಾರೆ. ನಾನು ಯಾವುದೇ ಪ್ರಮಾಣ ಮಾಡಲ್ಲ ಎಂದಿದ್ದಾರೆ.
ದೂರು ಕೊಡಲು ಸರ್ವ ಸ್ವತಂತ್ರರು.. ತನಿಖೆ ಮಾಡೋಣ..!
ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿ, ಪ್ರಮಾಣ ಮಾಡುವಂತಾ ಆಹ್ವಾನ ಕೊಟ್ಟಿರುವ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಪಾಪ ಅವರಿಗೆ ಸಿಎಂಗೆ, ಸಿಎಸ್ಗೆ ಕೋರ್ಟ್ಗೆ ದೂರು ಕೊಡಲು ಅವಕಾಶ ಇದೆ. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಆಗಬೇಕು. ಖಂಡಿತ ಯಾರ ಹೊಟ್ಟೆ ಮೇಲೂ ನಾವು ಹೊಡೆಯುವುದಿಲ್ಲ. ಒಂದು ಸಾವಿರ ಕೋಟಿ ರೂಪಾಯಿ ಕಳಪೆ ಕಾಮಗಾರಿ ಬಗ್ಗೆ ಶೀಘ್ರದಲ್ಲೇ ದಾಖಲೆಗಳ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ನಮಗೂ ಸಾಕಷ್ಟು ವರದಿ ಬಂದಿವೆ. ನೈಜತೆ ಪರಿಶೀಲಿಸಿ ಎಂದಿದ್ದಾರೆ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಬಿಲ್ ಬಿಡುಗಡೆ ಮಾಡ್ತೇವೆ. ನನ್ನ ಗಮನಕ್ಕೆ ಹಲವು ನಕಲಿ ಬಿಲ್ಗಳ ಬಗ್ಗೆ ಗಮನಕ್ಕೆ ಬಂದಿವೆ. ಈಗಾಗಿ ಅಧಿಕಾರಿಗಳಿಗೆ ತನಿಖೆ ಮಾಡುವಂತೆ ನಾನು ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿಗೂ ಗುತ್ತಿಗೆದಾರರಿಂದ ದೂರು..!
ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ವಿಳಂಬದ ಬಗ್ಗೆ ಕುಮಾರಸ್ವಾಮಿಗೂ ಗುತ್ತಿಗೆದಾರರು ದೂರು ಸಲ್ಲಿಸಿದ್ದಾರೆ. BBMP ಕಾರ್ಯನಿರತ ಗುತ್ತಿಗೆದಾರರ ಸಂಘದ ಸದಸ್ಯರು ಹೆಚ್.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ, ತನಿಖೆ ನೆಪ ಹೇಳ್ತಿದ್ದಾರೆ, ಮುಖ್ಯ ಆಯುಕ್ತರು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದು, ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಮಾಜಿ ಸಿಎಂ H.D ಕುಮಾರಸ್ವಾಮಿ ಅಭಯ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಗುತ್ತಿಗೆದಾರರ ಹಣ ಬಿಡುಗಡೆ ಮಾಡದಿದ್ದರೆ ನಿಮ್ಮ ಜೊತೆಗೆ ಧರಣಿ ಕೂರುತ್ತೇನೆ ಎಂದು ಅಭಯ ನೀಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಕೂಡ ತನಿಖೆ ಮಾಡ್ತಿದ್ದೇವೆ ಎಂದಿದ್ದಾರೆ. ಆದರೆ ಅಜ್ಜಯ್ಯನ ಮೇಲೆ ಪ್ರಮಾಣ ಮಾಡುವಂತೆ ಆಹ್ವಾನ ಕೊಟ್ಟಿರುವ ಮಾತಿಗೆ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾದ ಪರಿಸ್ಥಿತಿ ಡಿಕೆ ಶಿವಕುಮಾರ್ ತಂದು ನಿಲ್ಲಿಸಿದ್ದಾರೆ ಎನ್ನುವುದು ಮಾತ್ರ ಸತ್ಯ.
ಕೃಷ್ಣಮಣಿ