ಮೈಸೂರು : ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. 11:30ಕ್ಕೆ ಸರಿಯಾಗಿ ಕೇಂದ್ರ ಚುನಾವಣಾ ಆಯೋಗ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು ಇಂದೇ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಿದೆ. ಇಂದು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದಲ್ಲಿ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಯಾಗಲಿದೆ.

ಇಂದು ಮಧ್ಯಾಹ್ನ 1 ಗಂಟೆಗೆ ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ವರುಣ ಕ್ಷೇತ್ರದ ಬಿಳಿಗುಲಿ ಗ್ರಾಮದಲ್ಲಿ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಇಂದು ಭಾಗಿಯಾಗುವವರಿದ್ದಾರೆ. ಎಐಸಿಸಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯರನ್ನು ವರುಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಹೀಗಾಗಿ ವರುಣದಲ್ಲಿ ಸಿದ್ದರಾಮಯ್ಯಮತ್ತೆ ಆ್ಯಕ್ಟಿವ್ ಆಗಿದ್ದಾರೆ.
ಇಂದೇ ಚುನಾವಣಾ ನೀತಿ ಸಂಹಿತೆ ಜಾರಿಯಾದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಬೇಕಾಗಿ ಬರಲಿದೆ. ಉದ್ಘಾಟನೆಯ ಬದಲು ಚುನಾವಣಾ ಪ್ರಚಾರ ಕಾರ್ಯಕ್ರಮದ ಅಖಾಡಕ್ಕೆ ಇಂದೇ ಸಿದ್ದರಾಮಯ್ಯ ಇಳಿಯುವ ಸಾಧ್ಯತೆಯಿದೆ ಎಂದು ಸಿದ್ದು ಆಪ್ತ ಮೂಲಗಳು ತಿಳಿಸಿವೆ.