ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅನ್ನೋ ಹಠಕ್ಕೆ ಬಿದ್ದಿರುವ ಭಾರತೀಯ ಜನತಾ ಪಾರ್ಟಿ, ಹಿಂದಿ ಭಾಷಿಕರನ್ನು ಕರ್ನಾಟಕಕ್ಕೆ ಕರೆದುಕೊಂಡು ಬರುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 30 ಜನರನ್ನು ವಿಸ್ತಾರಕರನ್ನಾಗಿ ಆಯ್ಕೆ ಮಾಡಿದ್ದು, ಅಭ್ಯರ್ಥಿಯ ಪ್ರಚಾರ ಪ್ರಕ್ರಿಯೆ ಮೇಲುಸ್ತುವಾರಿ ವಹಿಸಲಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬೇಕಿರುವ ತಂತ್ರಗಾರಿಕೆಯನ್ನು ಈ ತಂಡ ಮಾಡಲಿದೆ ಎನ್ನಲಾಗಿದೆ. ಸಂಪೂರ್ಣ ಜವಾಬ್ದಾರಿಯನ್ನು ಹಿಂದಿ ಭಾಷಿಕರಿಗೆ ನೀಡಿರುವ ಬಿಜೆಪಿ ಹೈಕಮಾಂಡ್, ಸ್ಥಳೀಯ ಕಾರ್ಯಕರ್ತರು ಏನನ್ನೇ ಮಾಡಬೇಕಿದ್ದರೂ ಹಿಂದಿ ಭಾಷಿಕರ ಟೀಂ ಹೇಳಿದಂತೆ ಕೇಳಬೇಕು ಅನ್ನೋದು ಬಿಜೆಪಿಯಲ್ಲಿ ನಡೆದಿರುವ ಸದ್ಯದ ಬೆಳವಣಿಗೆ..
ಹಿಂದಿ ಭಾಷಿಕರು ಕರುನಾಡಿನಲ್ಲಿ ಮಾಡೋದಾದ್ರು ಏನು..?
ಪ್ರತಿ ವಿಧಾನಸಭೆಗೆ ತಲಾ 30 ಜನರ ತಂಡ ಆಗಮಿಸಿದ್ದು, ಕರ್ನಾಟಕಕ್ಕೆ ಸಾವಿರ ಹಿಂದಿ ಭಾಷಿಕರು ಆಗಮಿಸಿದ್ದಾರೆ. ಈ ತಂಡ ಕ್ಷೇತ್ರದಲ್ಲಿ ಸಂಚಾರ ಮಾಡಿ, ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಅಭ್ಯರ್ಥಿ ಹಾಲಿ ಶಾಸಕನಾಗಿದ್ದರೆ ಕೇಂದ್ರ ಸರ್ಕಾರದ ಯೋಜನೆಗಳು ಹಾಗು ಈಗಾಗಲೇ ಫಲಾನುಭವಿಗಳು ಯಾರೆಂದು ಗುರ್ತಿಸಿ ಂೋದಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅಬ್ಬರದ ಪ್ರಚಾರ ಮಾಡುವ ತಂತ್ರಗಾರಿಕೆಯನ್ನು ಮಾಡಲಿದೆ. ಒಂದು ವೇಳೆ ಅಭ್ಯರ್ಥಿಯು ಹೊಸಬರಾಗಿದ್ದರೆ..! ಈ ಹಿಂದೆ ಇದ್ದ ಶಾಸಕರು ಏನೆಲ್ಲಾ ಕೆಲಸಗಳನ್ನು ಮಾಡಬೇಕಿತ್ತು. ಯಾಕೆ ಮಾಡಿಲ್ಲ..? ಸಮಸ್ಯೆ ಎಷ್ಟು ಪ್ರಮಾಣದಲ್ಲಿದೆ ಎನ್ನುವುದನ್ನು ಗ್ರಾಮಗಳಲ್ಲಿ ಸಂಗ್ರಹ ಮಾಡಿ ಪ್ರಚಾರಕ್ಕೆ ತಯಾರಿ ಮಾಡಲಿದ್ದಾರೆ. ಕನ್ನಡಿಗ ಕಾರ್ಯಕರ್ತರು ಹಾಗು ಅಭ್ಯರ್ಥಿ ಮಾತನಾಡುವುದು, ಸೇರಿದಂತೆ ಪ್ರತಿಯೊಂದು ನಡೆ ಮೇಲೂ ಹಿಂದಿ ಭಾಷಿಕರ ಪ್ರಭಾವ ಇರಲಿದೆ ಎನ್ನುವುದು ಸತ್ಯ.
ಹಿಂದಿ ಭಾಷಿಕರನ್ನು ಬಿಜೆಪಿ ಕರೆ ತಂದಿದ್ದು ಯಾಕೆ..?
ಬಿಜೆಪಿಯ ಪ್ರತಿಯೊಂದು ನಿರ್ಧಾರವೂ ದೆಹಲಿಯ ಹೈಕಮಾಂಡ್ ಹೇಳಿದಂತೆಯೇ ನಡೆಯಬೇಕು ಎನ್ನುವುದು ವಿಧಿಲಿಖಿತ. ದೆಹಲಿ ಹೈಕಮಾಂಡ್ ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿ ಜೊತೆಗೂ ಸಂವಹನ ( Communication ) ಮಾಡಲು ಸಾಧ್ಯವಿಲ್ಲ. ಬಿಜೆಪಿ ಅಭ್ಯರ್ಥಿ ಜೊತೆಗೆ ಏನನ್ನೂ ನೇರವಾಗಿ ಹೇಳಿ, ಪ್ರಚಾರದ ತಂತ್ರಗಾರಿಕೆ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹಿಂದಿ ಭಾಷಿಕರನ್ನು ನಿಯೋಜನೆ ಮಾಡಿಕೊಂಡಿದೆ. ದೆಹಲಿ ಮಟ್ಟದಿಂದ ಏನೇ ನಿರ್ದೇಶನವಿದ್ದರೂ ಹಿಂದಿ ಭಾಷಿಕರ ಟೀಂ ತಲುಪುತ್ತದೆ. ಆ ಟೀಂ ಸ್ಥಳೀಯ ಕಾರ್ಯಕರ್ತರು ಹಾಗು ಅಭ್ಯರ್ಥಿಗೆ ಅರ್ಥ ಮಾಡಿಸಿ, ಪ್ರಚಾರವನ್ನು ಜನರಿಗೆ ತಲುಪುವಂತೆ ಮಾಡುತ್ತಾರೆ. ಇದೇ ಕಾರಣಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಎಲ್ ಸಂತೋಷ್ ಬಹಿರಂಗವಾಗಿ ಪ್ರಚಾರ ಮಾಡದೆ, ಕೇವಲ ಪ್ರಚಾರಕರ ಜೊತೆಗೆ ಸಭೆಗಳನ್ನು ಮಾಡುತ್ತಾ, ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಸಂತೋಷ್ ಹೇಳಿರುವ ಮಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಕನ್ನಡೇತರ ಮತದಾರರನ್ನು ಗುರ್ತಿಸಿ, ಮತ ಹಾಕಿಸಿ..!
ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲ್ಲಬೇಕು ಎಂದರೆ ಕನ್ನಡೇತರರನ್ನು ಗುರ್ತಿಸಿ ಮತ ಹಾಕಿಸಬೇಕು ಎಂದು ವಿಸ್ತಾರಕರ ಸಭೆಯಲ್ಲಿ ಬಿಎಲ್ ಸಂತೋಷ್ ಹೇಳಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಕನ್ನಡೇತರರನ್ನು ಗುರ್ತಿಸಿ ಶೇಕಡ 10 ರಷ್ಟು ಮತದಾನವನ್ನು ಹೆಚ್ಚಿಸಬೇಕು. ಒಂದು ವೇಳೆ ಕನ್ನಡೇತರರನ್ನು ಮತಗಟ್ಟೆಗೆ ಕರೆತಂದು ಬಿಜೆಪಿಗೆ ಮತ ಹಾಕಿಸುವಲ್ಲಿ ಯಶಸ್ವಿಯಾದರೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದಿದ್ದಾರೆ. ಅಂದರೆ ಕರ್ನಾಟಕದಲ್ಲಿ ಕನ್ನಡಿಗರು ಹಿಂದಿ ಭಾಷಿಕರ ಅಡಿಯಾಳಾಗಿ ಕೆಲಸ ಮಾಡಬೇಕು. ವಿಸ್ತಾರಕರ ಪಡೆ ಹೇಳಿದನ್ನು ಕೇಳುವುದು ಅಷ್ಟೆ ಕನ್ನಡಿಗ ಬಿಜೆಪಿ ಕಾರ್ಯಕರ್ತರ ಕೆಲಸ..? ಇನ್ನು ಕನ್ನಡಿಗರನ್ನು ಮನವೊಲಿಸಿ ಗೆಲ್ಲುವ ಬದಲು ಕನ್ನಡಿಗರಲ್ಲದವರನ್ನು ಮನವೊಲಿಸಿದರೆ ಗೆಲುವು ಸಾಧ್ಯ ಎಂದು ಬಿ.ಎಲ್ ಸಂತೋಷ್ ಹೇಳಿರುವುದು ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಈಗಾಗಲೇ ನಂದಿನ ವರ್ಸಸ್ ಅಮುಲ್ ವಿಚಾರದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದೆ ಎಂದರೆ ಸುಳ್ಳಲ್ಲ.
ಕೃಷ್ಣಮಣಿ