ರಾಜ್ಯದಲ್ಲಿ 2023ರ ವಿಧಾನಸಭೆಯ ಕಾವು ಜೋರಾಗಿದೆ. ಪಕ್ಷದ ನಾಯಕರು, ಮುಖಂಡರು, ಈಗಾಗಲೇ ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಕೀಯ ನಾಯಕರು ಜಟಾಪಟಿ ಶುರುಮಾಡಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರೋದ್ರಿಂದ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ʻನಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಮುಂಬೈ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಜಾಸ್ತಿಯಿದೆ. ಅದು ಮತ್ತೆ ಮುಂದುವರೆಯಲಿದೆ.

ತಂಡದ ಹಳೇ ಕ್ರೀಡಾಪಟುಗಳು ನಿವೃತ್ತಿ ಹೊಂದುತ್ತಾರೆ. ಹೊಸ ಕ್ರೀಡಾಪಟುಗಳು ಉತ್ಸಾಹದಿಂದ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ. ಶೆಟ್ಟರ್ ಕಾಂಗ್ರೆಸ್ಗೆ ಹೋಗಿರುವುದರಿಂದ ನಮಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಲ್ಪನೆ ಮತ್ತು ಸ್ವಪ್ನ ಕಾಣಲು ಎಲ್ಲರಿಗೂ ಹಕ್ಕಿದೆ. ಅವರೂ ಕಾಣಲಿ ಬಿಡಿ. ಆದರೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ನಿಂದ ನಾವು ಗೆಲ್ಲುತ್ತೇವೆ ಎಂದು ಸ್ಪಷ್ಟನೆ ನೀಡಿದರು. ʻಶೆಟ್ಟರ್ ನಮ್ಮ ತಂಡದಿಂದ ಹೊರಗೆ ಹೋಗಿದ್ದರಿಂದ ನಮಗೆ ಯಾವುದೇ ನಷ್ಟವಿಲ್ಲ. ನಾವು ಅವರಿಗೆ ನಿವೃತ್ತಿ ಹೊಂದಲು ಹೇಳಿದ್ದೆವು. ಆದರೆ ಅವರು ಬೇರೆ ತಂಡದಲ್ಲಿ ಆಡುತ್ತೇನೆ ಎಂದು ಹೋಗಿದ್ದಾರೆ. ಆದರೆ ಈ ಸಲ ಕಪ್ ನಮ್ದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜಗದೀಶ್ ಶೆಟ್ಟರ್ಗೆ ಟಕ್ಕರ್ ಕೊಟ್ಟರು.
