ಶಿಖರ್ ಧವನ್ ಅರ್ಧಶತಕ ಹಾಗೂ ಮಧ್ಯಮ ವೇಗಿ ಕಾಗಿಸೊ ರಬಡಾ ಮಾರಕ ದಾಳಿ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಟಿ-20 ಟೂರ್ನಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ವಿರುದ್ಧ ಜಯಭೇರಿ ಬಾರಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 20 ಓವರ್ ಗಳಲ್ಲಿ 8 ವಿಕೆಟ್ ಗೆ 143 ರನ್ ಗಳಿಗೆ ನಿಯಂತ್ರಿಸಿದ ಪಂಜಾಬ್ಸ್ ಕಿಂಗ್ಸ್ 16 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯ ಗಳಿಸಿತು.
ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಂಜಾಬ್ ತಂಡದ ಪರ ಶಿಖರ್ ಧವನ್ 53 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 62 ರನ್ ಗಳಿಸಿ ಅಜೇಯರಾಗಿ ಉಳಿದರೆ, ಭಾನುಕಾ ರಾಜಪಕ್ಸ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿ ನಿರ್ಗಮಿಸಿದರು.
ಧವನ್ ಮತ್ತು ರಾಜಪಕ್ಸ 2ನೇ ವಿಕೆಟ್ ಗೆ 87 ರನ್ ಜೊತೆಯಾಟ ನಿಭಾಯಿಸಿದರು. ನಂತರ ಬಂದ ಲಿಯಾಮ್ ಲಿವಿಂಗ್ ಸ್ಟೋನ್ 10 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 30 ರನ್ ಸಿಡಿಸಿ ತಂಡಕ್ಕೆ ಬೇಗನೇ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಕಾಗಿಸೊ ರಬಡಾ ಮಾರಕ ದಾಳಿಗೆ ತತ್ತರಿಸಿ ಬೃಹತ್ ಮೊತ್ತ ದಾಖಲಿಸಲು ವಿಫಲರಾದರು. ಸಾಯಿ ಸುದರ್ಶನ್ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಅಜೇಯ 65 ರನ್ ಬಾರಿಸಿ ತಂಡವನ್ನು ಆಧರಿಸಿದರು.