ಮಡಿಕೇರಿ: ಕೊಡಗಿನ ವೀರ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ (KM Cariappa) ಹಾಗು ಜನರಲ್ ತಿಮ್ಮಯ್ಯನವರ ಬಗ್ಗೆ ಶ್ರೀವತ್ಸ ಭಟ್ ಎಂಬಾತ ವಾಟ್ಸಾಆಪ್ ಗ್ರೂಪ್ ಒಂದರಲ್ಲಿ ಹೀನಾಯ ಪದ ಬಳಕೆ ಮಾಡಿರುವ ವಿರುದ್ಧ ಜಿಲ್ಲಾದ್ಯಂತ ತೀವ್ರ ಆಕ್ರೋಶ ಭುಗಿಲೆದ್ದಿದೆ.
ಹತ್ತಾರು ಜನಪರ ಮತ್ತು ಕೊಡವ ಸಂಘಟನೆಗಳು ಅವಹೇಳನೆಯನ್ನು ತೀವ್ರವಾಗಿ ಖಂಡಿಸಿದ್ದು ಮಡಿಕೇರಿ ಕೊಡವ ಸಮಾಜ ತೀವ್ರ ರೀತಿಯಲ್ಲಿ ಖಂಡನೇ ವ್ಯಕ್ತ ಪಡಿಸಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇಡೀ ವಿಶ್ವವೇ ಹೆಮ್ಮೆ ಪಡುವ ವೀರಸೇನಾನಿಗೆ ಹಾಗು ಕೊಡವ ಜನಾಂಗಕ್ಕೆ ಅಪಮಾನ ಮಾಡಿರುವುದು ದೇಶಕ್ಕೆ ಅಪಮಾನ ಎಸಗಿದಂತೆ ಅಂತ ವ್ಯಕ್ತಿಯನ್ನು ಕೂಡಲೇ ಬಂಧಿಸುವ ಮೂಲಕ ಕಠಿಣಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.
ಭಾರತದ ಹೆಮ್ಮೆಯ ಸೇನಾನಿ ಪ್ರಥಮ ಮಹಾ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಮತ್ತು ಕೊಡವ ಜನಾಂಗದ ಬಗ್ಗೆ ವ್ಯಾಟ್ಸ್ಆ್ಯಪ್ ಮೂಲಕ ಅವಹೇಳನಕಾರಿ ಸಂದೇಶವನ್ನು ಹರಿಬಿಟ್ಟ ಕಿಡಿಗೇಡಿ ಕೃತ್ಯವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ರೀತ್ಯಾ ಶಿಕ್ಷೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕರು ಸೂಚಿಸಿದ್ದಾರೆ.ವೀರಾಜಪೇಟೆ ಶಾಸಕ ಏ ಎಸ್ ಪೊನ್ನಣ್ಣ ಅವರೂ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಯುವ ವಿಭಾಗದ ಅದ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಕೊಡಗಿನ ಪರಂಪರೆ , ಹಿನ್ನೆಲೆ , ಇತಿಹಾಸ ತಿಳಿಯದ ಮೂರ್ಖರು ಮಾತ್ರ ಈ ರೀತಿಯ ಅಸಭ್ಯ ಕಾಮೆಂಟ್ ಮಾಡಲು ಸಾದ್ಯ. ಇದು ಆತನ ಹೀನ ಮನಸ್ಥಿತಿಯನ್ನು ತೋರಿಸುತ್ತದೆಯಲ್ಲದೆ ವೀರ ಸೇನಾನಿಗಳ ಕುರಿತು ಜನತೆ ಹೊಂದಿರುವ ಉನ್ನತ ಭಾವನೆ ಕುಂದಾಗಿಲ್ಲ ಎಂದರಲ್ಲದೆ ಇಂತವರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈತನು ಮಂಗಳೂರು ಮೂಲದವನಾಗಿದ್ದು ಮಡಿಕೇರಿಯಲ್ಲಿ ವಕೀಲಿ ವೃತ್ತಿ ಮಾಡುತಿದ್ದಾನೆ ಎಂದು ಮೂಲಗಳು ತಿಳಿಸಿವೆ.