
ಮಡಿಕೇರಿ: ಯೇಸುಕ್ರಿಸ್ತನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಂಸ್ಥೆ ಆಗ್ರಹಿಸಿದೆ. ಅಲ್ಲದೇ ಸಂಸ್ಥೆಯ ಐದು ತಾಲೂಕು ಘಟಕಗಳು ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿವೆ.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ ಮಡಿಕೇರಿ ನಗರ, ಕುಶಾಲನಗರ, ವಿರಾಜಪೇಟೆ ಮತ್ತು ಸೋಮವಾರಪೇಟೆ ಘಟಕಗಳು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಈ ಕುರಿತು ʻ ಮಾತನಾಡಿರುವ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ, ಕೆಲವು ಕಿಡಿಗೇಡಿಗಳು ಯೇಸುಕ್ರಿಸ್ತನಿಗೆ ಅವಹೇಳನ ಮಾಡಿ ಚಿತ್ರ ಹಾಕಿ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದು ಕ್ರೈಸ್ತ ಸಮುದಾಯದ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಾವಿರಾರು ವರ್ಷಗಳಿಂದ ಕ್ರಿಸ್‌ಮಸ್ ಹಬ್ಬವನ್ನ ಶಾಂತಿಯುತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದ್ರೆ ಕಿಡಿಗೇಡಿಗಳು ಜಾಲತಾಣದಲ್ಲಿ ಕ್ರಿಸ್ಮಸ್ ಹಬ್ಬ ಹಾಗೂ ಯೇಸುವಿನ ಕುರಿತು ಅಗೌರವಯುತವಾಗಿ ಪೋಸ್ಟ್ ಮಾಡಿರುವುದಲ್ಲದೇ, ಕೀಳು ಪದಗಳನ್ನ ಬಳಸಿ ನಿಂದಿಸಿದ್ದಾರೆ.ಇದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವಾಗಿದೆ. ಹಾಗಾಗಿ ಪೊಲೀಸರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ, ಕ್ರೈಸ್ತರು ಒಗ್ಗೂಡಿ ಜಿಲ್ಲಾದ್ಯಂತ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ