ದೇಶದಲ್ಲಿ ಕರೋನಾ ಎರಡನೇ ಅಲೆಯ ಮಾರಣಹೋಮದ ಲೆಕ್ಕಾಚಾರಗಳು ಇನ್ನೂ ಮುಗಿದಿಲ್ಲ. ಕೋವಿಡ್ ಸಾವುಗಳನ್ನು ಸರ್ಕಾರಗಳು ದುರುದ್ದೇಶದಿಂದ ಮುಚ್ಚಿಡುತ್ತಿವೆ. ಸರ್ಕಾರದ ಅಂಕಿಅಂಶಗಳಿಗೂ, ವಾಸ್ತವ ಸಾವುಗಳಿಗೂ ಹತ್ತಾರು ಪಟ್ಟು ವ್ಯತ್ಯಾಸವಿದೆ ಎಂಬ ವರದಿಗಳು ಇದೀಗ ಒಂದೊಂದಾಗಿ ಹೊರಬರತೊಡಗಿವೆ.

ಹೀಗೆ ಹೂತಿಟ್ಟ ಸಾವುಗಳು ಹೊರಬರುತ್ತಿರುವ ಹೊತ್ತಿಗೇ ಕರೋನಾ ಮೂರನೇ ಅಲೆಯ ಭಯ ಕೂಡ ಮುತ್ತತೊಡಗಿದೆ. ಅದರಲ್ಲೂ ಎರಡನೇ ಅಲೆಯ ಅಪಾರ ಸಾವುನೋವಿಗೆ ಕಾರಣವಾದ ಡೆಲ್ಟಾ ಕರೋನಾ ರೂಪಾಂತರಿ ವೈರಸ್ ಗಿಂತ ಹೆಚ್ಚು ಅಪಾಯಕಾರಿಯಾದ ಭಯಾನಕ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಮೂರನೇ ಅಲೆಗೆ ಕಾರಣವಾಗಲಿದೆ ಎಂಬ ಆತಂಕ ಎದುರಾಗಿದೆ. ಈಗಾಗಲೇ ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಅಪಾಯಕಾರಿ ಡೆಲ್ಟಾ ಪ್ಲಸ್ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸಂಗತಿ ದೊಡ್ಡ ಮಟ್ಟದ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.
ಡಬ್ಲ್ಯೂಎಚ್ ಒ ಮತ್ತು ಐಸಿಎಂಆರ್ ಕೂಡ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ವಿಷಯದಲ್ಲಿ ಆತಂಕ ಎದುರಾಗಿದೆ ಎಂದು ಹೇಳಿವೆ. ಆ ಎಚ್ಚರಿಕೆಯ ಬೆನ್ನಲ್ಲೇ ದೇಶವ್ಯಾಪಿ ಮೂರನೇ ಅಲೆ ನಿರ್ವಹಣೆ ಮತ್ತು ಮುಂಜಾಗ್ರತೆಯ ಕ್ರಮಗಳನ್ನು ಪ್ರಯತ್ನಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ಕೂಡ ಮೂರನೇ ಅಲೆ ಮತ್ತು ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ತಳಕು ಹಾಕಿ, ಸಾಕಷ್ಟು ಊಹಾಪೋಹಗಳನ್ನು ಹಬ್ಬಿಸಲಾಗುತ್ತಿದೆ.

ಆದರೆ, ದೇಶದ ಪ್ರತಿಷ್ಠಿತ ವೈದ್ಯರು ಮತ್ತು ಜಿನೋಮ್ ಸೀಕ್ವೆನ್ಸ್ ತಜ್ಞರಾದ ಡಾ ಅನುರಾಗ್ ಅಗರ್ ವಾಲ್ ಡೆಲ್ಟಾ ಪ್ಲಸ್ ಮತ್ತು ಮೂರನೇ ಅಲೆಯ ನಡುವೆ ಯಾವುದೇ ಸಂಬಂಧವಿಲ್ಲ. ದೇಶದಲ್ಲಿ ಮೂರನೇ ಅಲೆಗೆ ಡೆಲ್ಟಾ ಪ್ಲಸ್ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳುವ ಮೂಲಕ, ಮುಖ್ಯವಾಹಿನಿ ಮಾಧ್ಯಮಗಳ ವಾದ ಮತ್ತು ಕೆಲವು ಭಯಹುಟ್ಟಿಸುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಇನ್ ಸ್ಟಿಟ್ಯೂಟ್ ಆಫ್ ಜೆನೊಮಿಕ್ಸ್ ಅಂಡ್ ಇಂಟೆಗ್ರೇಟಿವ್ ಬಯೋಲಜಿ(ಐಜಿಐಬಿ) ನಿರ್ದೇಶಕರಾಗಿರುವ ಡಾ ಅಗರ್ ವಾಲ್, ಮೂರನೇ ಅಲೆ ಎರಡನೇ ಅಲೆಗಿಂತ ಭೀಕರವಾಗಿರಲಿದೆ ಮತ್ತು ಅದಕ್ಕೆ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾರಣವಾಗಲಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯಾವ ಅಧ್ಯಯನಗಳ ಆಧಾರವಿಲ್ಲ. ಹಾಗಾಗಿ ಅನಗತ್ಯವಾಗಿ ಆತಂಕಕ್ಕೊಳಗಾಗಬೇಕಿಲ್ಲ. ಹಾಗಂತ ಈಗಿರುವ ಕೋವಿಡ್ ಮಾರ್ಗಸೂಚಿಗಳ ಪಾಲನೆಯ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಮಾಸ್ಕ್ ಧರಿಸುವುದು, ದೈಹಿಕ ಅಂತರ ಮತ್ತು ಕೈತೊಳೆಯುವುದು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುವುದನ್ನು ಮರೆಯುವಂತಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ.

ಎನ್ ಡಿಟಿವಿ ಯೊಂದಿಗೆ ಮಾತನಾಡಿರುವ ಅವರು, ಜೂನ್ ತಿಂಗಳಿನಲ್ಲಿ ತಮ್ಮ ಸಂಸ್ಥೆ ಐಜಿಐಬಿ ಮಹಾರಾಷ್ಟ್ರದಿಂದ ಸುಮಾರು 3500 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಈ ಮಾದರಿ ಸಂಗ್ರಹಿಸಲಾಗಿದ್ದು, ಬಹುತೇಕ ಆ ಎಲ್ಲಾ ಮಾದರಿಗಳಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ಪತ್ತೆಯಾಗಿದೆ. ಆದರೆ, ಆ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ. ಹಾಗಾಗಿ ಡೆಲ್ಟಾ ವೈರಸ್ ಪ್ರಾಣಾಂತಿಕವಾಗಲಿದೆ. ಈಗಾಗಲೇ ಇರುವ ರೂಪಾಂತರಿ ಕರೋನಾ ವೈರಸ್ ಗಿಂತ ಭಯಾನಕ ಎಂಬಂತಹ ಕಲ್ಪನೆಗಳಿಗೆ ಯಾವ ಪುರಾವೆಯೂ ಇಲ್ಲ ಎಂದಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಹೆಚ್ಚಿರುವ ಕಡೆಗಳಲ್ಲಿ ಕೂಡ, ಆ ಪ್ರಮಾಣ ಆತಂಕ ಪಡುವ ಮಟ್ಟಿಗೆ ಇಲ್ಲ. ಸದ್ಯಕ್ಕೆ ಎಲ್ಲವೂ ನಿಯಂತ್ರಣದಲ್ಲಿವೆ. ಡೆಲ್ಟಾ ಪಲ್ಸ್ ಕುರಿತು ತೀರಾ ಆತಂಕ ಪಡುವ ಅಗತ್ಯವಿಲ್ಲವಾದರೂ, ನಿರ್ಲಕ್ಷಿಸುವಂತಿಲ್ಲ ಎಂಬುದು ಕೂಡ ನಿಜ. ಹಾಗಾಗಿ, ಎರಡನೇ ಅಲೆ ಮುಗಿಯುವ ಬಗ್ಗೆ, ಅದನ್ನು ಅಂತ್ಯ ಕಾಣಿಸುವ ಬಗ್ಗೆ ಹೆಚ್ಚು ಗಮನಹರಿಸಬೇಕಿದೆಯೇ ವಿನಃ, ಮೂರನೇ ಅಲೆಯ ಕುರಿತ ವದಂತಿಗಳ ಬಗ್ಗೆ ಅಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ದೇಶದಲ್ಲಿ ಈಗಾಗಲೇ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಸೋಂಕು ಪತ್ತೆಯಾಗಿದ್ದು, ‘ಆತಂಕಕಾರಿ ರೂಪಾಂತರಿ ವೈರಸ್’ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಆ ಹಿನ್ನೆಲೆಯಲ್ಲಿ ಅತಿ ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ ರಾಜ್ಯಗಳಿಗೆ ‘ತತಕ್ಷಣಕ್ಕೆಈ ವೈರಸ್ ನಿರ್ಬಂಧಿಸುವ ಕ್ರಮಗಳನ್ನು ಕೈಗೊಳ್ಳಿ’ ಎಂದು ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ರವಾನಿಸಿದೆ.
ಮೂರನೇ ಅಲೆಯಲ್ಲಿ ವೈರಾಣು ಮುಖ್ಯವಾಗಿ ಮಕ್ಕಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಿದೆ. ಹದಿವಯಸ್ಸಿನವರು ಮತ್ತು ಮಕ್ಕಳ ಮೇಲೆ ಈ ವೈರಾಣು ಪ್ರಾಣಾಂತಿಕ ಪರಿಣಾಮಗಳನ್ನು ಬೀರಲಿದೆ. ಹಾಗಾಗಿ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಅವರನ್ನು ಮೂರನೇ ಅಲೆಯ ಅಪಾಯದಿಂದ ಸುರಕ್ಷಿತಗೊಳಿಸಬೇಕಿದೆ ಎಂಬ ಆತಂಕದ ಮಾತುಗಳೂ ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಲಸಿಕೆ ತಯಾರಕರು ಮಕ್ಕಳ ಮೇಲೆ ಲಸಿಕೆಯ ಪ್ರಯೋಗಗಳನ್ನು ಆರಂಭಿಸಿದ್ದಾರೆ. ಆದರೆ, ದೇಶದಲ್ಲಿ ಕರೋನಾ ಸೋಂಕಿನ ಅಪಾಯಕಾರಿ ವಲಯದಲ್ಲಿರುವ 50 ವರ್ಷ ಮೇಲ್ಪಟ್ಟ ಮತ್ತು ವಿವಿಧ ಅಪಾಯಕಾರಿ ರೋಗಪೀಡಿತರಾಗಿರುವವ ಜನಸಂಖ್ಯೆಯ ಪೈಕಿ ಶೇ.2.5ರಷ್ಟು ಮಂದಿಗೆ ಮಾತ್ರ ಕಳೆದ ಆರು ತಿಂಗಳಲ್ಲಿ ಲಸಿಕೆ ನೀಡಲು ಸಾಧ್ಯವಾಗಿರುವ ಪರಿಸ್ಥಿತಿ ದೇಶದ್ದು. ಹಾಗಿರುವಾಗ ಇನ್ನು ಮಕ್ಕಳಿಗೆ ಲಸಿಕೆ ನೀಡುವ ವೇಗ ಯಾವ ಪ್ರಮಾಣದಲ್ಲಿರಬಹುದು ಮತ್ತು ಸದ್ಯದ ಅಂದಾಜಿನಂತೆ ಇನ್ನೇನು ಅಕ್ಟೋಬರ್ ಹೊತ್ತಿಗೆ ಮೂರನೇ ಅಲೆ ಆರಂಭವಾಗುವ ವೇಳೆಗೆ ಮಕ್ಕಳಿಗೆ ನಿಜವಾಗಿಯೂ ನೀಡಲು ಲಸಿಕೆ ಲಭ್ಯವಾಗಲಿದೆಯೇ ಎಂಬುದು ಕಾಡುವ ಪ್ರಶ್ನೆ.

ಇಂತಹ ಆತಂಕಗಳ ನಡುವೆ, ಇದೀಗ ಡಾ ಅಗರ್ ವಾಲ್ ಅವರ ಮಾತುಗಳು ಒಂದಿಷ್ಟು ಸಮಾಧಾನಕರವೆನಿಸಿದರೂ, ದೇಶದ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಮೂರನೇ ಅಲೆ ಮತ್ತು ಡೆಲ್ಟಾ ಪ್ಲಸ್ ವಿಷಯದಲ್ಲಿ ಜನಸಾಮಾನ್ಯರ ಆತಂಕಗಳನ್ನು ದೂರ ಮಾಡುವ ಮತ್ತು ಅದೇ ಹೊತ್ತಿಗೆ ಸಂಭಾವ್ಯ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪಾರದರ್ಶಕ ಮಾಹಿತಿ ಹಂಚಿಕೊಳ್ಳುವ ಪ್ರಮಾಣಿಕತೆ ತೋರಬೇಕಿದೆ. ಅಂತಹ ಪಾರದರ್ಶಕ ಮತ್ತು ಪ್ರಾಮಾಣಿಕ ಕ್ರಮಗಳು ಮಾತ್ರ ಅನಗತ್ಯ ಗೊಂದಲ, ಆತಂಕಗಳನ್ನು ದೂರಮಾಡಿ, ಜನರನ್ನು ವಾಸ್ತವ ಪರಿಸ್ಥಿತಿ ಎದುರಿಸಲು ಸಜ್ಜುಮಾಡಲಿವೆ. ಆದರೆ, ಸದಾ ಭ್ರಮೆ ಮತ್ತು ಗೊಂದಲಗಳ ಮೂಲಕವೇ ಆಡಳಿತ ಚಲಾಯಿಸುವುದರಲ್ಲಿ ನಂಬಿಕೆ ಇಟ್ಟಿರುವ ವ್ಯವಸ್ಥೆಯಿಂದ ಅಂತಹ ನಡೆಯನ್ನು ನಿರೀಕ್ಷಿಸಲಾದೀತೆ ಎಂಬುದು ಪ್ರಶ್ನೆ!






