ರಾಮನಗರ: ಕಾವೇರಿ ನದಿ ನೀರು ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆ, ಇಂದು ಬೆಳಗ್ಗೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೇಂದ್ರ ಸಚಿವರು, ಸಂಸದರು ಕೂಡಾ ಭಾಗಿಯಾಗಿದ್ದಾರೆ. ಆದ್ರೆ ರಾತ್ರೋರಾತ್ರಿ ದೆಹಲಿಗೆ ಹೋಗಿ ಕಾಟಾಚಾರದ ಸಭೆ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳ ಜೊತೆ ದೆಹಲಿಯಲ್ಲಿ ಸಂಸದರ ಜೊತೆ ಸಿಎಂ ಸಭೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇವತ್ತು ದೆಹಲಿಯಲ್ಲಿ ಸಿಎಂ, ಡಿಸಿಎಂ ಸಭೆ ಮಾಡಿದ್ದಾರೆ. ಇನ್ನೂ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕ್ತೀವಿ ಅಂತ ಕಾಲಹರಣ ಮಾಡ್ತಿದ್ದಾರೆ. ರೈತರ ಉಳಿವಿಗೆ ಇಷ್ಟೊತ್ತಿಗಾಗಲೇ ಚಿಂತನೆ ನಡೆಸಬೇಕಾಗಿತ್ತು. ಆದರೆ ಸರ್ಕಾರ ಇನ್ನೂ ಆ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಇನ್ನೂ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಲು ಮೀನಾಮೇಷ ಎಣಿಸುತ್ತಿದ್ದಾರೆ. ತಮಿಳುನಾಡಿನವರು ಒಂದು ತಿಂಗಳ ಹಿಂದೆಯೇ ಅರ್ಜಿ ಹಾಕಿದ್ದಾರೆ. ಆದರೆ ನೀವು ಅರ್ಜಿ ಹಾಕಿದ ತಕ್ಷಣ ನೀರು ಬಿಟ್ರಿ. ಅದರ ಬದಲು ನೀವೂ ಅರ್ಜಿ ಹಾಕಬಹುದಿತ್ತು. ನಾನು ಈ ಬಗ್ಗೆ ಒಂದು ತಿಂಗಳ ಮುಂಚೆಯೇ ಹೇಳಿದ್ದೆ ಎಂದರು.