ಮಾಂಟ್ರಿಯಲ್: ಖಲಿಸ್ತಾನೀ ಪ್ರತ್ಯೇಕತಾವಾದಿ ಮುಖಂಡ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತ ಸರ್ಕಾರದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆ ಈಗ ಖಲಿಸ್ತಾನೀ ಸಂಘಟನೆಗಳ ಮನೋಸ್ಥೈರ್ಯ ಹೆಚ್ಚಿಸಿದಂತಿದೆ. ಸಿಖ್ಸ್ ಫಾರ್ ಜಸ್ಟಿಸ್ ಎಂಬ ಖಲಿಸ್ತಾನೀ ಸಂಘಟನೆ ಇದೀಗ ಬಹಿರಂಗವಾಗಿಯೇ ಕೆನಡಿಯನ್ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದೆ. ಖಲಿಸ್ತಾನೀ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಸಂಭ್ರಮಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಹಾಗೂ ಭಾರತಕ್ಕೆ ಬೆಂಬಲ ನೀಡುತ್ತಿರುವ ಹಿಂದೂಗಳೇ ನಿಮ್ಮ ದೇಶಕ್ಕೆ ವಾಪಸ್ ಹೋಗಿ ಎಂದು ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಕಾನೂನು ಸಲಹೆಗಾರ ಗುರಪಟ್ವಂತ್ ಪನ್ನುನ್ ವಿಡಿಯೋ ಸಂದೇಶವೊಂದರಲ್ಲಿ ಕರೆ ನೀಡಿದ್ದಾರೆ.
ಪ್ರತ್ಯೇಕ ಖಲಿಸ್ತಾನೀ ದೇಶಕ್ಕಾಗಿ ಹೋರಾಡುತ್ತಿರುವ ಸಿಖ್ಸ್ ಫಾರ್ ಜಸ್ಟೀಸ್ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಆರೋಪ ಇದೆ. ಭಾರತದಲ್ಲಿ ಇದನ್ನು 2019ರಲ್ಲಿ ನಿಷೇಧಿಸಲಾಗಿದೆ. ಈ ಉಗ್ರ ಸಂಘಟನೆಯ ಲೀಗಲ್ ಕೌನ್ಸಲ್ ಆಗಿರುವ ಗುರಪಟ್ವಂತ್ ಪನ್ನುನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.