ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದನಾ ಅಡಗು ತಾಣಗಳ ಮೇಲೆ ಭಾರತ ನಡೆಸಿದ 2016 ರ ಸರ್ಜಿಕಲ್ ಸ್ಟ್ರೈಕ್ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮೇಲೆ ಕೆಸಿಆರ್ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಸಿಆರ್, “ಕೇಂದ್ರ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ಗಳ ಪುರಾವೆಗಳನ್ನು ಒದಗಿಸಬೇಕೆಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬೇಡಿಕೆಯನ್ನು ಬೆಂಬಲಿಸಿ ಮಾತನಾಡಿದ್ದಾರೆ.
“ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಈಗಲೂ ನಾನು ಕೇಳುತ್ತಿದ್ದೇನೆ. ಭಾರತ ಸರ್ಕಾರ ಸಾಕ್ಷಿಗಳನ್ನು ತೋರಿಸಲಿ. ಅದು ಅವರ ಜವಾಬ್ದಾರಿ ಕೂಡ ಹೌದು. ಜನರಲ್ಲಿ ಈ ಬಗ್ಗೆ ಅನುಮಾನಗಳಿವೆ ಎಂದು ಕೆಸಿಆರ್ ಹೇಳಿದ್ದಾರೆ.
ಮುಂದುವರೆದು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಪಪ್ರಚಾರ ಮಾಡುತ್ತಿದೆ. ಜನರು ಪುರಾವೆ ಕೇಳಲು ಅವರ ಅಪಪ್ರಚಾರವೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ರಾವ್, ಪ್ರಜಾಪ್ರಭುತ್ವದಲ್ಲಿ ನೀವು ರಾಜನಲ್ಲ, ರಾಜನಲ್ಲ ಎಂದು ಕಿಡಿಕಾರಿದ್ದಾರೆ.
ಸೋಮವಾರ ಈ ವಿಚಾರವಾಗಿ ಸುದ್ದಿ ಸಂಸ್ಥೆ ANI ಪ್ರತಿಕ್ರಿಯಿಸಿರುವ ಶರ್ಮಾ, “ಪುಲ್ವಾಮಾ ದಾಳಿಯ (ಫೆಬ್ರವರಿ 14, 2019) ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕ ಯೋಧರು ಸಾವನ್ನಪ್ಪಿದ ವಾರ್ಷಿಕೋತ್ಸವದಂದು ಪ್ರತಿಪಕ್ಷಗಳು ಇಂಥ ಪ್ರಶ್ನೆಗಳನ್ನು ಎತ್ತುವ ಮೂಲಕ ಹುತಾತ್ಮರನ್ನು ಅವಮಾನಿಸುತ್ತಿವೆ,” ಎಂದು ಟೀಕಿಸಿದ್ದಾರೆ.
“ಗಾಂಧಿ ಕುಟುಂಬಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿ, ಅವರು (ವಿರೋಧ) ಸೇನೆಗೆ ದ್ರೋಹ ಮಾಡಿದ್ದಾರೆ. ನನ್ನ ನಿಷ್ಠೆ ಸೇನೆಯ ಮೇಲಿದೆ. ನಿಮ್ಮ ಜೀವನದುದ್ದಕ್ಕೂ ನನ್ನನ್ನು ನಿಂದಿಸಿ. ನಾನು ಹೆದರುವುದಿಲ್ಲ. ಸೇನೆಯನ್ನು ಪ್ರಶ್ನಿಸುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಅಸ್ಸಾಂ ಸಿಎಂ ಶರ್ಮಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಉತ್ತರಾಖಂಡದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮತ್ತು ಅವರ ತಂದೆ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ನಡುವಿನ ಸಂಬಂಧದ ಬಗ್ಗೆ ಶರ್ಮಾ ಮಾತನಾಡಿದ ನಂತರ ಈ ಮಾತಿನ ಚಕಮಕಿ ಪ್ರಾರಂಭವಾಯಿತು.
“ಅವರು (ರಾಹುಲ್ ಗಾಂಧಿ) ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಮ್ಮ ಸೇನೆಯಿಂದ ಪುರಾವೆ ಕೇಳುತ್ತಾರೆ. ನೀವು ರಾಜೀವ್ ಗಾಂಧಿಯವರ ಮಗನೋ ಅಲ್ಲವೋ ಎಂಬುದಕ್ಕೆ ನಾವು ಎಂದಾದರೂ ನಿಮ್ಮ ಬಳಿ ಪುರಾವೆ ಕೇಳಿದ್ದೇವೆಯೇ? ನನ್ನ ಸೇನೆಯಿಂದ ಪುರಾವೆ ಕೇಳಲು ನಿಮಗೆ ಯಾವ ಹಕ್ಕಿದೆ?” ಎಂದು ಶರ್ಮಾ ಫೆಬ್ರವರಿ 11 ರಂದು ಪ್ರಶ್ನಿಸಿದ್ದರು.
“ನನಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಯಾವುದೇ ಸಂಬಂಧವಿಲ್ಲ, ಅವರ ಪಕ್ಷವೂ ಅಲ್ಲ. ಅವರು ಸಂಸದರು, ಕುಟುಂಬದ ಇತಿಹಾಸವನ್ನು ಹೊಂದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕು” ಎಂದು ರಾವ್ ಭಾನುವಾರ ಹೇಳಿದ್ದರು.
ಶನಿವಾರ ಕೂಡ ಕೆಸಿಆರ್ ಅವರು ಶರ್ಮಾ ವಿರುದ್ಧ ಹರಿಹಾಯ್ದು, ಕೂಡಲೇ ಅಸ್ಸಾಂ ಮುಖ್ಯಮಂತ್ರಿ ಸ್ಥಾನದಿಂದ ಶರ್ಮಾ ಅವರನ್ನು ವಜಾಗೊಳಿಸುವಂತೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಒತ್ತಾಯಿಸಿದ್ದರು.
“ಅಸ್ಸಾಂ ಮುಖ್ಯಮಂತ್ರಿ ಈ ರೀತಿ ಮಾತನಾಡುವುದು ಹೇಗೆ? ತಾಳ್ಮೆಗೆ ಮಿತಿ ಇದೆ,” ಎಂದು ಕೆಸಿಆರ್ ತಿಳಿಸಿದ್ದಾರೆ. ಇವರ ಹೊರತಾಗಿ ಇತರ ವಿರೋಧ ಪಕ್ಷದ ನಾಯಕರು ಕೂಡ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶರ್ಮಾ ಅವರು ಉನ್ನತ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕೂಡ ಒತ್ತಾಯಿಸಿದೆ.