ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿಯ ಕುರಿತು ಸಿಎಜಿ (ಮಹಾಲೇಖಪಾಲ) ವರದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ವರದಿಯಲ್ಲಿನ ಅಂಶಗಳನ್ನು ಗಮನಿಸಿದಾಗ ತಾಂತ್ರಿಕತೆ, ವಿಶ್ವಾಸಾರ್ಹತೆ ಹಾಗೂ ಡಿಬಿಟಿ ವ್ಯವಸ್ಥೆಯ ಪಾರದರ್ಶಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ವಿಪಕ್ಷ ಬಿಜೆಪಿ ಗೃಹ ಲಕ್ಷ್ಮಿ ಯೋಜನೆಯಲ್ಲಿ 5 ಸಾವಿರ ಕೋಟಿಗಳಷ್ಟು ಲೋಪವಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿಲ್ಲ ಎಂದು ಆರೋಪಿಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸಿಎಜಿ ವರದಿಯಲ್ಲಿನ ಅಂಶಗಳು ಯೋಜನೆಯಲ್ಲಿ ಆಗಿರುವ ಕಳ್ಳಾಟಗಳನ್ನು ಬಟಾ ಬಯಲು ಮಾಡಿದೆ.
ವರದಿಯಲ್ಲಿನ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 1.30 ಕೋಟಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ. ಈವರೆಗೆ ಸರ್ಕಾರ ಯೋಜನೆಗೆ 75 ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಪಾವತಿಸಿದೆ. ಸಿಎಜಿ ವರದಿ ಹೇಳಿರುಔಂತೆ, 19,020 ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ, ಇದು ಡಿಬಿಟಿ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಆತಂಕಕಾರಿ ಸಂಗತಿ ಏನೆಂದರೆ 8,995 ಬ್ಯಾಂಕ್ ಖಾತೆಗಳಿಗೆ ಸುಮಾರು 1.80 ಕೋಟಿ ಹಣವನ್ನು ಪುನರಾವರ್ತಿತವಾಗಿ (Repeatedly) ಜಮೆ ಮಾಡಲಾಗಿದೆ. ಅಲ್ಲದೆ ಈ ಯೋಜನೆಯಡಿ 10,36,308 ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿರುವುದು ಸಿಎಜಿ ಪರಿಶೀಲನೆಯಲ್ಲಿ ಪತ್ತೆಯಾಗಿದ್ದು,ಸರ್ಕಾರದಲ್ಲಿ ಆಡಳಿತ ಯಂತ್ರ ಯಾವ ರೀತಿಯಾಗಿ ಕಾರ್ಯ ನಡೆಸುತ್ತಿದೆ ಎಂಬುವುದನ್ನು ಎತ್ತಿ ತೋರಿಸಿದೆ.
ಇದನ್ನೂ ಓದಿ : ದಳಪತಿ-ತ್ರಿಶಾ ನಡುವೆ ಬ್ರೇಕಪ್? ಸಿಎಂ ವಿಜಯ್‌ನ ಅನ್‌ಫಾಲೋ ಮಾಡಿದ ತ್ರಿಶಾ!
ಎಲೆಕ್ಟ್ರಾನಿಕ್ ಡೇಟಾ ಕಂಪ್ಯೂಟರ್ ಸಿಸ್ಟಮ್ಸ್ ನಿಂದ (EDCS) ಫಲಾನುಭವಿಗಳ ಪಟ್ಟಿ ಮತ್ತು ಇತರ ವಿವರಗಳನ್ನು ಒದಗಿಸದಿರುವುದು ಆಡಿಟ್ ಪ್ರಕ್ರಿಯೆಗೆ ಹಿನ್ನಡೆಯನ್ನುಂಟು ಮಾಡಿದೆ. ರದ್ದುಪಡಿಸಲಾದ ಫಲಾನುಭವಿಗಳ ವಿವರಗಳು, ಗುರುತಿನ ಚೀಟಿ, ರದ್ದುಪಡಿಸಿದ ದಿನಾಂಕ ಮತ್ತು ಕಾರಣಗಳನ್ನು ನೀಡಲು ಇಲಾಖೆಯು ವಿಫಲವಾಗಿದೆ ಎಂದು ಸಿಎಜಿ ಅಸಮಾಧಾನ ಹೊರಹಾಕಿದೆ.
ಮುಖ್ಯವಾಗಿ ಸಿಎಜಿ ವರದಿಯಲ್ಲಿನ ಇನ್ನೊಂದು ಆಘಾತಕಾರಿ ಸಂಗತೆಯೆನೆಂದರೆ 23,262 ಫಲಾನುಭವಿಗಳು ಬ್ಯಾಂಕ್ ಖಾತೆಗಳನ್ನೆ ಹೊಂದಿಲ್ಲ, ಆದರೂ ಈ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಒಟ್ಟು 46.52 ಕೋಟಿ ಹಣ ಖಾತೆಗಳೇ ಇಲ್ಲದ ಖಾತೆಗಳಿಗೆ ಜಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿಬಿಟಿ ನೇರ ನಗದು ವರ್ಗಾವಣೆಯ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆ ಕಡ್ಡಾಯವಾಗಿರುವಾಗ ಖಾತೆ ಇಲ್ಲದೆ ಫಲಾನುಭವಿಗಳಿಗೆ ಹಣ ಹೇಗೆ ತಲುಪಿತು ಎಂಬ ಪ್ರಶ್ನೆ ಎದುರಾಗಿದೆ.

ಈಗಾಗಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆಸಿದ್ದ ಸಭೆಯಲ್ಲಿ ಈ ಸಿಎಜಿ ವರದಿಯಲ್ಲಿನ ಅಂಶಗಳು ಸದ್ದು ಮಾಡಿದ್ದವು ಎನ್ನಲಾಗಿದೆ, ಇದರಲ್ಲಿನ ಅಂಶಗಳನ್ನು ಆಧರಿಸಿ ಸರ್ಕಾರ ಪರಿಷ್ಕರಣೆಗೆ ಹೆಜ್ಜೆ ಇಟ್ಟಿದೆ. ಅಲ್ಲದೆ ಯೋಜನೆಯ ಲೋಪಗಳನ್ನು ತಕ್ಷಣವೇ ಸರಿಪಡಿಸಿ ಎಂದು ತಾಕೀತು ಮಾಡಿದ್ದರು.
ಇನ್ನೂ ಈ ಯೋಜನೆಯಲ್ಲಿನ ಲೋಪಗಳ ಖುದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಮಹಾಲೇಖಪಾಲರಿಗೆ ಕೈಬಿಟ್ಟ ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಸರ್ಕಾರದ ಮುಖ್ಯಸ್ಥರೇ ಖುದ್ದಾಗಿ ಸೂಚನೆ ಕೊಟ್ಟಿದ್ದರೂ ಇಲಾಖೆಯ ಅಧಿಕಾರಿಗಳು ಮಾತ್ರ ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಕೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಹಗರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಮೇಲೆ ಇನ್ನಷ್ಟು ಅನುಮಾನದ ದೃಷ್ಟಿಯಿಂದ ನೋಡವಂತೆ ಮಾಡಿದೆ.






