ಬೆಂಗಳೂರು: ನೀಟ್ ಮರುಪರೀಕ್ಷೆಗೆ ತಡವಾಗಿ ಬಂದು ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳ ಪ್ರಕರಣ ರಾಜಕೀಯ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಬೆಂಗಳೂರು ಪೊಲೀಸರು ಈ ಸಂಬಂಧ ಫ್ಯಾಕ್ಟ್ ಚೆಕ್ ನಡೆಸಿ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಸಮಾವೇಶದಿಂದ ಟ್ರಾಫಿಕ್ ಜಾಮ್ ಉಂಟಾಗಿ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರ ತಲುಪಲು ತಡವಾಯಿತು ಎಂಬ ಆರೋಪಗಳ ಬೆನ್ನಲ್ಲೇ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ಕುಟುಂಬದವರ ಮಾಹಿತಿಯನ್ನು ಆಧರಿಸಿ ಪರಿಶೀಲನೆ ನಡೆಸಿದ್ದಾರೆ.
ಜೂನ್ 21ರಂದು ನಡೆದ ನೀಟ್ ಮರುಪರೀಕ್ಷೆಯಲ್ಲಿ ಮೂವರು ಅಭ್ಯರ್ಥಿಗಳು ತಡವಾಗಿ ಆಗಮಿಸಿದ್ದರಿಂದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಪರೀಕ್ಷೆ ಬರೆಯಲು ಸಾಧ್ಯವಾಗದೆ ಕಣ್ಣೀರಿಟ್ಟ ವಿದ್ಯಾರ್ಥಿನಿಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.ಈ ಪೈಕಿ ಟ್ರಾಫಿಕ್ ಸಮಸ್ಯೆಯಿಂದ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯ ಪ್ರಕರಣವನ್ನು ಪೊಲೀಸರು ವಿಶೇಷವಾಗಿ ಪರಿಶೀಲಿಸಿದ್ದಾರೆ. ತನಿಖೆಯಲ್ಲಿ ವಿದ್ಯಾರ್ಥಿನಿ ಮಧ್ಯಾಹ್ನ 12.57ಕ್ಕೆ ಆರ್.ಟಿ.ನಗರದ ನಿವಾಸದಿಂದ ಹೊರಟಿದ್ದು, ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ನಿಗದಿಯಾಗಿದ್ದ ಗಡುವು ಮಧ್ಯಾಹ್ನ 1.30 ಆಗಿತ್ತು ಎಂದು ತಿಳಿದುಬಂದಿದೆ. ಆದರೆ ವಿದ್ಯಾರ್ಥಿನಿ 1.33ಕ್ಕೆ ಪರೀಕ್ಷಾ ಕೇಂದ್ರ ತಲುಪಿರುವುದು ದಾಖಲಾಗಿದೆ.

ಪೊಲೀಸರ ಪ್ರಕಾರ, ವಿದ್ಯಾರ್ಥಿನಿ ಮನೆಯಿಂದ 33 ನಿಮಿಷಗಳ ಮುಂಚಿತವಾಗಿಯೇ ಹೊರಟಿದ್ದರೂ, ಪರೀಕ್ಷಾ ಕೇಂದ್ರ ತಲುಪಲು ಲಭ್ಯವಿದ್ದ ಕಿರುಮಾರ್ಗವನ್ನು ಬಿಟ್ಟು ದೂರದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ, ಆ ದಿನ ಸಂಚಾರ ದಟ್ಟಣೆ ಸಹ ಸಾಮಾನ್ಯ ಮಟ್ಟದಲ್ಲೇ ಇತ್ತು. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಟ್ರಾಫಿಕ್ ಪೊಲೀಸರನ್ನೂ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳು, ಕುಟುಂಬ ಸದಸ್ಯರ ಮಾಹಿತಿ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಸಾರ್ವಜನಿಕ ಸಮಾವೇಶ ಅಥವಾ ಟ್ರಾಫಿಕ್ ಜಾಮ್‌ನಿಂದ ವಿದ್ಯಾರ್ಥಿನಿಗೆ ತೊಂದರೆಯಾಗಿಲ್ಲ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ. ವಿದ್ಯಾರ್ಥಿನಿ ತಡವಾಗಿ ತಲುಪಲು ದೂರದ ಮಾರ್ಗದಲ್ಲಿ ಪ್ರಯಾಣ ಮಾಡಿರುವುದೇ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಾರವಾಗಿ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ವರದಿ ಪರಿಶೀಲಿಸಿದ ಬಳಿಕವೇ ನಾನು ಮಾತನಾಡುತ್ತಿದ್ದೇನೆ. ಅಭ್ಯರ್ಥಿಗಳು ಯಾವಾಗ ಮನೆಯಿಂದ ಹೊರಟರು, ಯಾವ ಮಾರ್ಗದಲ್ಲಿ ಬಂದರು ಎಂಬುದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಲಭ್ಯವಿವೆ. ಕುಟುಂಬದವರೊಂದಿಗೂ ಮಾತುಕತೆ ನಡೆಸಲಾಗಿದೆ. ಪರೀಕ್ಷೆ ಮಿಸ್ ಆಗಿರುವುದಕ್ಕೆ ಸರ್ಕಾರ ಅಥವಾ ಸಾರ್ವಜನಿಕ ಕಾರ್ಯಕ್ರಮ ಕಾರಣ ಎಂಬ ಆರೋಪಗಳಿಗೆ ಯಾವುದೇ ಆಧಾರ ಇಲ್ಲ” ಎಂದು ಹೇಳಿದರು.
ಅಲ್ಲದೆ, “ನಿಗದಿತ ಸಮಯದೊಳಗೆ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿ ಪರೀಕ್ಷೆ ಬರೆದಿದ್ದಾರೆ. ಕೇವಲ ಮೂರು ಮಂದಿ ಮಾತ್ರ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದನ್ನು ರಾಜಕೀಯ ವಿಷಯವನ್ನಾಗಿ ಮಾಡುವುದು ಸರಿಯಲ್ಲ” ಎಂದು ಖರ್ಗೆ ಟೀಕಿಸಿದರು.






