ಬೆಂಗಳೂರು: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಹಾಗೂ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಗೆ ನಿಷೇಧ ಹೇರಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇದೀಗ ಶವರ್ಮಾ ಪ್ರಿಯರಿಗೆ ಆತಂಕಕಾರಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ವಿವಿಧೆಡೆ ಸಂಗ್ರಹಿಸಲಾದ ಶವರ್ಮಾ ಮಾದರಿಗಳ ಪರೀಕ್ಷೆಯಲ್ಲಿ ಕೃತಕ ಬಣ್ಣಗಳ ಬಳಕೆ ಪತ್ತೆಯಾಗಿದ್ದು, ಹಲವು ಮಾದರಿಗಳು ಸೇವನೆಗೆ ಅಯೋಗ್ಯವಾಗಿವೆ ಎಂಬುದು ಬೆಳಕಿಗೆ ಬಂದಿದೆ.

ಆಹಾರ ತಯಾರಿಕೆಯಲ್ಲಿ ಅಶುಚಿತ್ವ ಮತ್ತು ಹಳೆಯ ಮಾಂಸ ಬಳಕೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ 39 ಶವರ್ಮಾ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 32 ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಯಿತು.ಪರೀಕ್ಷೆಯ ವರದಿಯಲ್ಲಿ 8 ಶವರ್ಮಾ ಮಾದರಿಗಳು ಮಾನವ ಸೇವನೆಗೆ ಯೋಗ್ಯವಲ್ಲ ಎಂಬುದು ಬಹಿರಂಗವಾಗಿದೆ. ಅಲ್ಲದೆ, ಶವರ್ಮಾ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಿರುವುದು ಕೂಡ ಪತ್ತೆಯಾಗಿದೆ. ಇದೇ ವೇಳೆ ಸಂಗ್ರಹಿಸಲಾದ 19 ಕಬಾಬ್ ಮಾದರಿಗಳ ಪೈಕಿ 16ರ ವರದಿ ಲಭ್ಯವಾಗಿದ್ದು, ಅವುಗಳಲ್ಲಿ 2 ಮಾದರಿಗಳು ಅಸುರಕ್ಷಿತ ಎಂದು ಗುರುತಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.ಆಹಾರ ತಜ್ಞರ ಪ್ರಕಾರ, ಶವರ್ಮಾಗಳಲ್ಲಿ ಬಳಸಲಾಗುತ್ತಿರುವ ಕೆಲವು ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್ ಅಂಶಗಳು ಇರಬಹುದು. ಇವುಗಳ ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಅತಿಯಾದ ಬೊಜ್ಜು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.






