ಸದ್ದಡಗಿದ ‘ಮನ್ ಕೀ ಬಾತ್’; ಭುಗಿಲೆದ್ದ ಹೊಣೆಗಾರಿಕೆ ಹಸ್ತಾಂತರದ ಮಾತು!

ಕರೋನಾ ಎರಡನೇ ಅಲೆಯೇ ಇಡೀ ದೇಶವನ್ನು ಸಾವಿನ ಮನೆಯಾಗಿಸಿದೆ. ಈಗಾಗಲೇ, ಸರ್ಕಾರಿ ದಾಖಲೆಗಳ ಪ್ರಕಾರವೇ ಎರಡು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣ ಸಂಖ್ಯೆ ಎರಡು ಕೋಟಿ ದಾಟಿದೆ.

ಈ ನಡುವೆ, ಮುಂದಿನ ಒಂದು ವಾರದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟಾಗಲಿದೆ ಎಂದಿರುವ ತಜ್ಞರು, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಾಗುತ್ತಲೇ ನಗರದಿಂದ ಹಳ್ಳಿಗೆ ಮರುವಲಸೆ ಆರಂಭವಾಗಿದ್ದರಿಂದ ಕಳೆದ ಒಂದು ವಾರದಿಂದ ಗ್ರಾಮೀಣ ಭಾರತದ ಕೋವಿಡ್ ದಾಳಿಗೆ ಒಳಗಾಗಿದ್ದು, ಆರೋಗ್ಯ ಮತ್ತು ವೈದ್ಯಕೀಯ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲದೆ ಹಳ್ಳಿಗಳಲ್ಲಿ ಭಾರೀ ಸಾವು ನೋವಿಗೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೀಗೆ ಎರಡನೇ ಅಲೆಯ ಹೊಡೆತಕ್ಕೇ ದೇಶದ ಹೈರಾಣಾಗಿರುವಾಗ, ಬೀದಿ ಬೀದಿಗಳಲ್ಲಿ ಹೆಣಗಳು ಉರುಳುತ್ತಿರುವಾಗ, ವಿಜ್ಞಾನಿಗಳು ಮತ್ತೊಂದು ಆಘಾತಕಾರಿ ಸುದ್ದಿಯನ್ನೂ ಕೊಟ್ಟಿದ್ದಾರೆ. ಅದು; ಕರೋನಾ ಮೂರನೇ ಅಲೆಯ ಕುರಿತದ್ದು. ದೇಶದಲ್ಲಿ ರೂಪಾಂತರಿ ಕರೋನಾ ಎರಡನೇ ಅಲೆಯ ಇಷ್ಟು ವ್ಯಾಪಕವಾಗಿ ಹರಡಿರುವಾಗ ಇನ್ನಷ್ಟು ರೂಪಾಂತರ ಹೊಂದಿ, ಇನ್ನಷ್ಟು ಪ್ರಬಲ ದಾಳಿ ಮಾಡಬಹುದಾದ, ಮತ್ತಷ್ಟು ಮಾರಣಾಂತಿಕವಾಗಿರುವ ಮೂರನೇ ಅಲೆಯನ್ನು ತಡೆಯಲಾಗದು. ಮೊದಲ ಮತ್ತು ಎರಡನೇ ಅಲೆಗೆ ಕಾರಣವಾಗಿರುವ ವೈರಸ್ ಗಿಂತ ಹೆಚ್ಚು ಶಕ್ತಿಶಾಲಿಯಾದ ವೈರಸ್ ಈ ಮೂರನೇ ಅಲೆಗೆ ಕಾರಣವಾಗಲಿದೆ. ಮುಖ್ಯವಾಗಿ ಅದು ಮಕ್ಕಳ ಮೇಲೆ ಹೆಚ್ಚು ದಾಳಿ ಮಾಡಲಿದ್ದು, ದೇಶದ ಮಕ್ಕಳ ಜೀವ ರಕ್ಷಣೆ ದೊಡ್ಡ ಸವಾಲಾಗಲಿದೆ ಎಂದು ಎಚ್ಚರಿಸಿರುವ ವಿಜ್ಞಾನಿಗಳು, ಮೂರನೇ ಅಲೆಗೆ ಕಾರಣವಾಗಲಿರುವ ಶಕ್ತಿಶಾಲಿ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನಮ್ಮಲ್ಲಿ ಬಳಕೆಯಲ್ಲಿರುವ ಲಸಿಕೆಗಳನ್ನು ಕೂಡ ಅಭಿವೃದ್ಧಿಪಡಿಸಬೇಕಿದೆ. ಸದ್ಯ ಕರೋನಾ ಮಾರಣಹೋಮದಿಂದ ದೇಶವನ್ನು ಪಾರು ಮಾಡಲು ಇರುವುದು ಲಸಿಕೆಯೊಂದೇ ಪ್ರಬಲ ಅಸ್ತ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮಾತುಗಳನ್ನು ಹೇಳಿರುವುದು ಬೇರಾವುದೇ ವಿಜ್ಞಾನಿಗಳಲ್ಲ; ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿರುವ ಕೆ ವಿಜಯ್ ರಾಘವನ್ ಅವರೇ ಖುದ್ದು ಬುಧವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ ಮತ್ತು ಎರಡನೇ ಅಲೆಗಿಂತ ಹಲವು ಪಟ್ಟು ಮಾರಕವಾದ ಮೂರನೇ ಅಲೆ ಬರುವುದು ಶತಸಿದ್ಧ. ಆದರೆ, ಅದು ಯಾವಾಗ ಮತ್ತು ಎಲ್ಲಿಂದ ಆರಂಭವಾಗುತ್ತದೆ ಎಂಬುದನ್ನು ನಿಖರವಾಗಿ ಹೇಳಲಾಗದು ಎಂದಿದ್ದಾರೆ. ಆ ಮೂಲಕ ಈಗಾಗಲೇ ದೇಶದಲ್ಲಿ ಮೂರನೇ ಅಲೆ ಆರಂಭವಾಗಿದೆ ಎಂಬ ಕೆಲವರ ಮಾತುಗಳನ್ನೂ, ಅಕ್ಟೋಬರ್ ಹೊತ್ತಿಗೆ ಮೂರನೇ ಅಲೆ ಬರಲಿದೆ ಎಂಬ ಮತ್ತೆ ಕೆಲವರ ಮಾತುಗಳನ್ನೂ ಅವರು ತಳ್ಳಿಹಾಕಿದ್ದಾರೆ. ಅಲೆ ಬರುವುದು ನಿಜ. ಯಾವಾಗ ಎಂಬುದನ್ನು ಹೇಳಲಾಗದು ಎಂಬುದು ಅವರ ಒಟ್ಟಾರೆ ಅಭಿಪ್ರಾಯ.

ಹೀಗೆ ಒಂದು ಕಡೆ ದೇಶದ ವಿಜ್ಞಾನ, ವೈದ್ಯಕೀಯ ವಲಯಗಳ ಪ್ರಾಜ್ಞರು ದೇಶಕ್ಕೆ ಎದುರಾಗಿರುವ ಗಂಡಾಂತರಕಾರಿ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ದೇಶದ ಜನರ ಜೀವ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರೆ, ಅಧಿಕಾರದ ಚುಕ್ಕಾಣಿ ಹಿಡಿದಿರುವ ಪಕ್ಷ ಮತ್ತು ಅದರ ಉನ್ನತ ನಾಯಕರು ಮಾತ್ರ, ಇದಾವುದೂ ತಮಗೆ ಸಂಬಂಧವೇ ಪಟ್ಟಿಲ್ಲ ಎಂಬಂತೆ ಇನ್ನೂ ಚುನಾವಣೆಗಳ ಗುಂಗಿನಲ್ಲೇ ಇದ್ದಾರೆ. ಭಾರತೀಯರ ಪಾಲಿಗೆ ಜೀವ ಕಂಟಕವಾಗಿರುವ ಕರೋನಾ ವೈರಾಣುವಿಗಿಂತ, ಹೀಗೆ ದೇಶದ ಜನರ ರಕ್ಷಣೆಯ ವಿಷಯದಲ್ಲಿ ಬಹುತೇಕ ನಿಷ್ಕ್ರಿಯವಾಗಿರುವ ನಾಯಕರು ಮತ್ತು ಸರ್ಕಾರಗಳೇ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿವೆ. ಅದಕ್ಕೆ ದೇಶದ ಉದ್ದಗಲಕ್ಕೆ ನಿತ್ಯ ವರದಿಯಾಗುತ್ತಿರುವ ಐದಾರು ಸಾವಿರ ಸಾವುಗಳ ಪೈಕಿ ಶೇ.90ರಷ್ಟು ನಿಜವಾಗಿಯೂ ಕರೋನಾ ವೈರಾಣು ದಾಳಿಗಿಂತ, ಸಕಾಲದಲ್ಲಿ ಆಮ್ಜಜನಕ, ಔಷಧಿ, ಚಿಕಿತ್ಸೆ ಸಿಗದೇ ಸಾವು ಕಾಣುತ್ತಿದ್ಧಾರೆ ಮತ್ತು ಆ ವ್ಯವಸ್ಥೆಗಳನ್ನು ಮಾಡುವಲ್ಲಿ ಎರಡನೇ ಅಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಈವರೆಗೆ ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸಂಪೂರ್ಣ ಕೈಚೆಲ್ಲಿವೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.

ವಿಪರ್ಯಾಸವೆಂದರೆ; ದಿನದಿಂದ ದಿನಕ್ಕೆ ಆಮ್ಲಜನಕ ಸಿಗದೆ ದೇಶದ ಉದ್ದಗಲಕ್ಕೆ ಸಾವಿರಾರು ಮಂದಿ ಜೀವ ಬಿಡುತ್ತಿದ್ದರೆ, ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಐಷಾರಾಮಿ ಬಂಗಲೆ ಮತ್ತು ಐಷಾರಾಮಿ ನೂತನ ಸಂಸತ್ ಭವನದ ಕಾಮಗಾರಿ ಚುರುಕುಗೊಳಿಸುವಲ್ಲಿ ಮುಳುಗಿದ್ದಾರೆ. ಮೇ 2ರಂದು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಅಲ್ಲಿ ಭುಗಿಲೆದ್ದಿರುವ ರಾಜಕೀಯ ಪ್ರತೀಕಾರದ ಗಲಭೆಯ ವಿಷಯದಲ್ಲಿ ಅಲ್ಲಿನ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದನ್ನು ಹೊರತುಪಡಿಸಿದರೆ, ಈ ಐದು ದಿನಗಳಲ್ಲಿ ಪ್ರಧಾನಮಂತ್ರಿಗಳು ಹೆಚ್ಚು ಸುದ್ದಿಯಾಗಿರುವುದು ಈ ನೂತನ ಸಂಸತ್ ಭವನದ ಕಾಮಗಾರಿಯ ವಿಷಯದಲ್ಲಿ ಮಾತ್ರ! ಆಮ್ಲಜನಕ ಸಿಗದೆ ತಮ್ಮದೇ ಸರ್ಕಾರದ ಆಡಳಿತದ ಕರ್ನಾಟಕದ ಚಾಮರಾಜನಗರದಲ್ಲಿ 28 ಮಂದಿ ಸಾವು ಕಂಡ ಬಗ್ಗೆಯಾಗಲೀ, ಅದರ ಬೆನ್ನಲ್ಲೇ ಕರ್ನಾಟಕವೂ ಸೇರಿದಂತೆ ದೇಶದ ಉದ್ದಗಲಕ್ಕೆ ಪ್ರಾಣವಾಯು ಸಿಗದೇ ಸಾವಿರಾರು ಮಂದಿ ಜೀವ ಬಿಟ್ಟಿರುವುದಾಗಲೀ ತಲೆ ಕೆಡಿಸಿಕೊಳ್ಳಬೇಕಾದ ಸಂಗತಿಗಳಾಗಿ ಪ್ರಧಾನಮಂತ್ರಿಗಳಿಗೆ ಕಂಡಿಲ್ಲ ಎಂಬುದು ಅವರ ಅಧಿಕೃತ ಚಟುವಟಿಕೆಗಳನ್ನು ದಾಖಲಿಸುವ ಅವರ ವೆಬ್ ಸೈಟಿನ ವಿವರಗಳಲ್ಲೇ ಬಹಿರಂಗವಾಗಿದೆ(ಕರೋನಾಕ್ಕೆ ಬಲಿಯಾದ ಗಣ್ಯರಿಗೆ ಸಂತಾಪ ಹೊರತುಪಡಿಸಿ ಟ್ವಿಟರಿನಲ್ಲಿ ಕೂಡ ಹೆಚ್ಚಿನ ಕರೋನಾ ವಿವರಗಳಿಲ್ಲ!).

ಒಬ್ಬ ಕ್ರಿಕೆಟ್ ಪಟುವಿನ ಕಿರುಬೆರಳಿಗೆ ಗಾಯವಾದರೂ, ಕ್ರಿಕೆಟಿಗನ ಹೆಂಡತಿ ಬಸುರಿಯಾದರೂ ಟ್ವೀಟ್ ಮಾಡಿ ಜಾಗತಿಕ ವಿದ್ಯಮಾನವೆಂಬಂತೆ ಪ್ರತಿಕ್ರಿಯಿಸುವ ಪ್ರಧಾನಿ ಮೋದಿಯವರು, ಚಾಮರಾಜನಗರವೂ ಸೇರಿದಂತೆ ಸಂಭವಿಸುತ್ತಿರುವ ಆಮ್ಲಜನಕ ಕೊರತೆ ಸಾವುಗಳ ಬಗ್ಗೆ ಆನ್ ಲೈನ್ ನಲ್ಲಾಗಲೀ, ಆಫ್ ಲೈನ್ ನಲ್ಲಾಗಲೀ ಈವರೆಗೆ ತುಟಿಬಿಚ್ಚಿಲ್ಲ. ಹಾಗೇ ಗೃಹ ಸಚಿವ ಅಮಿತ್ ಶಾ ಅವರಂತೂ ಬಂಗಾಳದ ಚುನಾವಣೆಯ ಫಲಿತಾಂಶದ ಬಳಿಕ ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿಲ್ಲ; ದೇಶದ ದಾರುಣ ಮಾರಣಹೋಮಗಳ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ!

ದೇಶದಲ್ಲಿ ಕಳೆದ ವರ್ಷ ಕರೋನಾ ಆರಂಭದ ಹೊತ್ತಲ್ಲಿ ವಾರಕ್ಕೊಮ್ಮೆ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿಯವರು ಈ ಎರಡನೇ ಅಲೆ ಆರಂಭವಾಗಿ ಮಾರಣಹೋಮವೆ ನಡೆಯುತ್ತಿದ್ದರೂ ಎರಡೂವರೆ ತಿಂಗಳಲ್ಲಿ ಕರೋನಾದ ಕುರಿತು ದೇಶದ ಜನರಿಗೆ ಅವರು ಸಂದೇಶ ನೀಡಿದ್ದು ಒಂದು ಬಾರಿ ಮಾತ್ರ! ಅದೂ “ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಆದರೆ ಅಂತಿಮವಾಗಿ ನಿಮ್ಮ ಜೀವ ನಿಮ್ಮ ಕೈಯಲ್ಲಿದೆ” ಎಂಬ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಮಾತುಗಳನ್ನಾಡಲು ಮಾತ್ರ! ಅದನ್ನು ಹೊರತುಪಡಿಸಿ, ಜನರಿಗೆ ನಿಜಕ್ಕೂ ಪರಿಸ್ಥಿತಿಯನ್ನು ವಿವರಿಸಬೇಕಾದ, ಕರೋನಾ ಸೋಂಕಿನ ಸ್ಥಿತಿಗತಿ, ಆಸ್ಪತ್ರೆ ಮತ್ತು ವೈದ್ಯಕೀಯ ವ್ಯವಸ್ಥೆ, ಆಮ್ಲಜನಕದ ಲಭ್ಯತೆಯ ಪರಿಸ್ಥಿತಿ ಮತ್ತು ಕೊರತೆ ನೀಗಲು ಸರ್ಕಾರದ ಕ್ರಮಗಳು, ಲಸಿಕೆ ಲಭ್ಯತೆ ಮತ್ತು ಭವಿಷ್ಯದ ಯೋಜನೆ ಮುಂತಾದ ಮಹತ್ವದ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಂಡು, ದೇಶದ ಆತಂಕಿತ 137 ಕೋಟಿ ಜನರಲ್ಲಿ(ಈಗಾಗಲೇ ಕರೋನಾಕ್ಕೆ ಬಲಿಯಾದವರು ಎಷ್ಟು ಕೋಟಿಯೋ!) ಧೈರ್ಯ ಮತ್ತು ಭರವಸೆ ಹುಟ್ಟಿಸಬೇಕಾದ ‘ಮನ್ ಕಿ ಬಾತ್’ ಆಡಬೇಕಾದ ಸಮಯದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರು ಮೌನಕ್ಕೆ ಶರಣಾಗಿದ್ಧಾರೆ.

ಈ ನಡುವೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನೇ ಅನುಸರಿಸುತ್ತಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಕೂಡ ಪರಿಸ್ಥಿತಿಯ ಕುರಿತು ದೇಶದ ಜನರಿಗೆ ಮಾಹಿತಿ ಕೊಡುವ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದಾರೆ. ಕಳೆದ ವರ್ಷ ಮೊದಲ ಅಲೆಯ ವೇಳೆ ಕೆಲವು ದಿನಗಳ ಕಾಲ ನಿತ್ಯ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಕೊಡುತ್ತಿದ್ದ ಸಚಿವರು, ಈ ಬಾರಿ ಲಕ್ಷಾಂತರ ಮಂದಿ ಸಾವಿನ ಬಳಿಕವೂ ಹಾಗೆ ನಿತ್ಯ ಜನರಿಗೆ ಮಾಹಿತಿ ನೀಡಿ ಜನರ ಜೊತೆ ನಾವಿದ್ದೇವೆ ಎಂಬ ಭರವಸೆ ಮೂಡಿಸಬೇಕು ಎಂಬ ಕನಿಷ್ಟ ಹೊಣೆಗಾರಿಕೆಯನ್ನೂ ಮರೆತು ಬಹುಶಃ ಬೆಂಡೆಕಾಯಿ ಗೊಜ್ಜು ಮಾಡುವುದರಲ್ಲಿ ತಮ್ಮ ಅಡುಗೆ ಮನೆಯಲ್ಲಿ ಪೂರ್ಣ ಬ್ಯುಸಿಯಾಗಿರುವಂತಿದೆ. ಹಾಗೇ ಸ್ಮೃತಿ ಇರಾನಿ, ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಇತರೆ ಸಚಿವರು ಕೂಡ ಕರೋನಾದ ಸಂಕಷ್ಟದ ಹೊತ್ತಲ್ಲಿ ಜನರಲ್ಲಿ ಭರವಸೆ ಹುಟ್ಟಿಸುವ ಮಾತುಗಳನ್ನು ಆಡಿದ್ದು ವಿರಳವೇ.

ಪ್ರಧಾನಮಂತ್ರಿ, ಗೃಹ ಸಚಿವರು ಮತ್ತು ಆರೋಗ್ಯ ಸಚಿವರು ಸೇರಿದಂತೆ ಇಡೀ ಸಚಿವ ಸಂಪುಟವೇ ಮ್ಯೂಟ್ ಮೋಡ್ ಗೆ ಹೋಗಿರುವ ಪರಿಸ್ಥಿತಿಯಲ್ಲಿ ಕರೋನಾ ಮೂರನೇ ಅಲೆಯ ಕುರಿತು ವಿಜ್ಞಾನಿಗಳು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಏಕೈಕ ನಾಯಕ ಎಂದರೆ ಅದು ಸುಬ್ರಮಣಿಯನ್ ಸ್ವಾಮಿ ಎಂಬ ಬಿಜೆಪಿಯ ಕ್ರಿಟಿಕಲ್ ಇನ್ ಸೈಡರ್ ಮಾತ್ರ!

“ಮಾರಕ ಮೂರನೇ ಅಲೆ ಮಕ್ಕಳ ಪಾಲಿಗೆ ಮಾರಣಾಂತಿಕವಾಗಿದೆ. ಇಂತಹ ಹೊತ್ತಲ್ಲಿ ನಾವು ಪ್ರಧಾನಮಂತ್ರಿಗಳ ಕಚೇರಿ ತಲೆಕೆಟ್ಟ(ಸೈಕೋ) ವ್ಯವಸ್ಥೆಯನ್ನು ನಂಬಿಕೊಳ್ಳದೇ, ಒಂದು ಗಂಭೀರ ಬಿಕ್ಕಟ್ಟು ಪರಿಸ್ಥಿತಿ ನಿರ್ವಹಣಾ ತಂಡವನ್ನು ಕಟ್ಟಬೇಕಿದೆ. ಅದಕ್ಕೆ ಸಚಿವ ನಿತಿನ್ ಗಡ್ಕರಿ ಸೂಕ್ತ ವ್ಯಕ್ತಿ. ಅವರ ನೇತೃತ್ವದಲ್ಲಿ ಒಂದು ಪ್ರಬಲ ತಂಡ ರಚಿಸಿ, ಕೋವಿಡ್ ಪರಿಸ್ಥಿತಿ ನಿಭಾಯಿಸಲು ಅವರಿಗೆ ಮುಕ್ತ ಅವಕಾಶ ನೀಡಬೇಕು” ಎಂದು ಬಿಜೆಪಿ ರಾಜ್ಯಸಭಾ ಸದಸ್ಯರೂ ಆಗಿರುವ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್ ಈಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸ್ವಾಮಿ ಅವರ ಈ ಅಭಿಪ್ರಾಯದ ಅರ್ಥವೇನು? ಪ್ರಧಾನಿ ಮೋದಿ ಸಂಕಷ್ಟದ ಹೊತ್ತಲ್ಲಿ ದೇಶವನ್ನು ನಿಭಾಯಿಸಲು ಶಕ್ತರಲ್ಲ, ಅವರಿಗೆ ಈ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವ ಸಾಮರ್ಥ್ಯವಿಲ್ಲ ಎಂಬುದು ಬಿಜೆಪಿಯ ಈ ಹಿರಿಯ ನಾಯಕನ ಅಭಿಪ್ರಾಯವೇ ಎಂಬ ಪ್ರಶ್ನೆಗಳು ಎದ್ದಿವೆ.

ಜೊತೆಗೆ ಕಳೆದ ಲೋಕಸಭಾ ಚುನಾವಣೆಗೂ ಹಿಂದಿನಿಂದಲೇ ಆರ್ ಎಸ್ ಎಸ್ ನ ಪ್ರಧಾನಿ ಅಭ್ಯರ್ಥಿ ಆಯ್ಕೆ ಎಂದೇ ಬಿಂಬಿತವಾಗಿದ್ದ ಸಚಿವ ನಿತಿನ್ ಗಡ್ಕರಿ ಹೆಸರನ್ನು ಉಲ್ಲೇಖಿಸಿ ಅವರಿಗೆ ಜವಾಬ್ದಾರಿ ಕೊಡುವಂತೆ ಸ್ವಾಮಿ ಹೇಳಿರುವುದು ಮತ್ತು ಅವರನ್ನು ಬಿಟ್ಟರೆ ಸಚಿವ ರಾಜ್ ನಾಥ್ ಸಿಂಗ್ ಶಕ್ತರಿದ್ದರೂ, ಅವರಿಗೆ ಈಗಾಗಲೇ ರಕ್ಷಣಾ ಖಾತೆಯಂತಹ ದೊಡ್ಡ ಜವಾಬ್ದಾರಿ ಇರುವುದರಿಂದ ಕರೋನಾ ನಿಭಾಯಿಸುವುದು ಅವರಿಗೆ ಕಷ್ಟವಾಗಬಹುದು ಎಂದಿರುವುದು ಕೂಡ ಬಿಜೆಪಿಯ ಆರ್ ಎಸ್ ಎಸ್ ಮೂಲದ ಬಣ ದೇಶದ ಸಂಕಷ್ಟ ನಿಭಾಯಿಸುವಲ್ಲಿ ಮೋದಿ ಅಸಾಮರ್ಥ್ಯವನ್ನು ಗ್ರಹಿಸಿ ಈ ದಾಳ ಉರುಳಿಸಿದೆಯೇ ಎಂಬ ವಿಶ್ಲೇಷಣೆಗಳಿಗೆ ಚಾಲನೆ ನೀಡಿದೆ.

ಒಂದು ಕಡೆ, ಎರಡನೇ ಅಲೆಯ ಅಪಾಯದ ಕುರಿತ ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿ ಚುನಾವಣಾ ರ್ಯಾಲಿ, ಕುಂಭಮೇಳ, ಕ್ರಿಕೆಟ್ ಪಂದ್ಯ ನಡೆಸಿ ದೇಶವನ್ನು ಅಪಾಯಕ್ಕೆ ತಳ್ಳಿದ ಪ್ರಧಾನಿ ಮೋದಿ, ಲಕ್ಷಾಂತರ ಜನರ ಸಾವಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ #ResignModi ಅಭಿಯಾನ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿರುವ ಹೊತ್ತಿನಲ್ಲೇ, ಮತ್ತೊಂದು ಕಡೆ ಬಿಜೆಪಿಯ ಒಂದು ಬಣದಿಂದ ಗಡ್ಕರಿ ಅವರಿಗೆ ಜವಾಬ್ದಾರಿ ವಹಿಸಿ ಎಂಬ ಅಭಿಪ್ರಾಯಗಳು ಬರುತ್ತಿರುವುದು ಸಹಜವಾಗೇ ಸಾಕಷ್ಟು ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...