ದಿಲ್ಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾದಾಗಲೆಲ್ಲ ವೈದ್ಯ ಡಾ.ವಿವೇಕ್ ರಾಯ್, ಮನಸ್ಸು ವಿಚಲಿತವಾಗುತ್ತಿತ್ತು. ಆ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಕೋವಿಡ್ ರೋಗಿಗಳ ಪ್ರಾಣ ಉಳಿಸಲು ಹೋರಾಡುವುದು ಅವರ ಕರ್ತವ್ಯವಾಗಿತ್ತು.
ದಿನಕ್ಕೆ ಏಳರಿಂದ ಎಂಟು ರೋಗಿಗಳ ಪ್ರಾಣ ಉಳಿಸುವ ಈ ಹರಸಾಹಸದಲ್ಲಿ ಅವರು ಕೆಲವೊಮ್ಮೆ ಸೋಲಬೇಕಾಗುತ್ತಿತ್ತು. ಏಕೆಂದರೆ, ಕೋವಿಡ್ ರೋಗಿಗಳನ್ನು ಸಾವಿನಂಚಿನಿಂದ ಕರೆತರಲು ಬೇಕಾದ ಔಷಧ, ಉಪಕರಣ, ವೆಂಟಿಲೇಟರ್, ಆಕ್ಸಿಜನ್ ಕೊರತೆಯಿಂದ ಕಣ್ಣೆದುರೇ ರೋಗಿಗಳು ಸಾವನ್ನಪ್ಪಿದಾಗ ಅವರು ವಿಚಲಿತರಾಗುತ್ತಿದ್ದರು. ಅಲ್ಲದೆ ಬೆಡ್ ಗಳ ಕೊರತೆಯಿಂದ ರೋಗಿಗಳ ನಡುವೆ ಯಾರನ್ನು ಬದುಕಿಸಬೇಕು ಎಂಬ ಆಯ್ಕೆ ಮಾಡುವ ಸಂದರ್ಭಗಳು ಅವರನ್ನು ಹೈರಾಣಾಗಿಸುತ್ತಿದ್ದವು. ‘ಇಲ್ಲ’ಗಳ ನಡುವೆ ನೂರಾರು ರೋಗಿಗಳನ್ನು ಉಳಿಸುತ್ತಿದ್ದೇನೆ ಎಂಬ ಪಾಸಿಟಿವ್ ಚಿಂತನೆ ಬಿಟ್ಟು, ‘ಕೊರತೆಗಳ’ ಕಾರಣಕ್ಕೆ ಕೆಲವರನ್ನು ಬದುಕಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ತುಮುಲ ಅವರ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸಿತು. ಕೊನೆಗೆ ಈ ಅಸಹಾಯಕತೆ ಅವರನ್ನು ಖಿನ್ನತೆಗೆ ದೂಡಿ, ಆತ್ಮಹತ್ಯೆಗೆ ಪ್ರೇರೇಪಿಸಿತು. ಯಾರನ್ನೂ ದೂರದೆ ಸಾವಿನ ಚೀಟಿ ಬರೆದಿಟ್ಟು 35 ವರ್ಷದ ಡಾ.ವಿವೇಕ್ ರಾಯ್ ಆತ್ಮಹತ್ಯೆಗೆ ಶರಣಾದರು.
ಕೇವಲ ಒಂದು ತಿಂಗಳ ಕಾಲ ಅವರು ಆಸ್ಪತ್ರೆಯ ಕೋವಿಡ್ ರೋಗಿಗಳಿದ್ದ ಐಸಿಯುನಲ್ಲಿ ಕೆಲಸ ಮಾಡಿದ ಅವರು ಅದ್ಯಾವ ಪರಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆಂದರೆ, ಅವರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಪತ್ನಿ ಎರಡು ತಿಂಗಳ ಗರ್ಭಿಣಿಯಾಗಿದ್ದರು. ತಮ್ಮ ವೈಯಕ್ತಿಕ ಬದುಕನ್ನೇ ಮರೆತು ರೋಗಿಗಳ ಬಗ್ಗೆ ಆಳವಾಗಿ ಚಿಂತಿಸುತ್ತಿದ್ದ ನಗುಮೊಗದ ಯುವ ವೈದ್ಯ ಇನ್ನಿಲ್ಲ! ಅದಷ್ಟೇ ಸತ್ಯ.
ಕೊನೆಗೂ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಕ್ಕಿತು:
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಆನಂದ್ ಅವರು ಮೇ 2 ರಂದು ದಿನ ತಮ್ಮ ಪಾಳಿಯಲ್ಲಿ ಸೇವೆ ನೀಡಲು ಐಸಿಯುಗೆ ಬಂದಾಗ, ತಾವು ತಮ್ಮ 25 ವರ್ಷದ ವೈದ್ಯಕೀಯ ಸೇವೆಯಲ್ಲಿ ಎಂದೂ ಎದುರಿಸದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗುತ್ತೇನೆ ಎಂದು ಊಹಿಸಿರಲೂ ಇಲ್ಲ.
ಆಸ್ಪತ್ರೆಯಲ್ಲಿದ್ದ ಆರು ಮಂದಿ ಕೋವಿಡ್ 19 ರೋಗಿಗಳ ಆಮ್ಲಜನಕ ಪೂರೈಕೆ ಪರಿಸ್ಥಿತಿ ಶೇ.80ಕ್ಕಿಂತ ಕೆಳಗೆ ಇಳಿದಿತ್ತು. ಅವರನ್ನು ವೆಂಟಿಲೇಶನ್ ನಲ್ಲಿ ಇಡದಿದ್ದರೆ ಅಥವಾ ಆಮ್ಲಜನಕ ಸಿಗದಿದ್ದರೆ ಅದು ಅವರ ಕೊನೆಯ ದಿನವಾಗುತ್ತಿತ್ತು. ಹೀಗಾಗಿ ಅವರನ್ನೆಲ್ಲ ತುರ್ತಾಗಿ ಐಸಿಯುಗೆ ಸೇರ್ಪಡೆ ಮಾಡಿಕೊಂಡರು 54 ವರ್ಷದ ಡಾ.ಆನಂದ್. ಆ ರೋಗಿಗಳಿಗೆ ಚಿಕಿತ್ಸೆ ನಡೆಯುತ್ತಿತ್ತು.. ಇನ್ನು ಐಸಿಯುವಿನಲ್ಲಿ ಉಳಿದಿದ್ದು ಒಂದು ಬೆಡ್ ಮಾತ್ರ.
ಡಯಾಬಿಟಿಸ್ ಇದ್ದು, ಡಯಾಲಿಸಿಸ್ಮಾಡಿಸಿಕೊಳ್ಳಬೇಕಿದ್ದ ಇಬ್ಬರು ರೋಗಿಗಳಿಗೆ ತುರ್ತು ಚಿಕಿತ್ಸೆ ಬೇಕಿತ್ತು. ಆದರೆ ಅವರಿಬ್ಬರಲ್ಲಿ ಒಬ್ಬರಿಗೆ ಮಾತ್ರ ಐಸಿಯು ಬೆಡ್ ನೀಡಬಹುದಿತ್ತು. ಆಗ ಅವರೆದುರು ಎರಡು ಆಯ್ಕೆಗಳು ಎದುರಾದವು. ಒಬ್ಬ 72 ವರ್ಷದ ವೃದ್ಧ ಮತ್ತೊಬ್ಬ 42 ವರ್ಷದ ಯುವಕ. ಅವರು ಅಳೆದೂ ತೂಗಿ ಎರಡನೇ ವ್ಯಕ್ತಿಗೆ ಅವಕಾಶ ನೀಡುವುದನ್ನು ಆಯ್ಕೆ ಮಾಡಿದರು. ಕಾರಣ, ಅವರು ತಮ್ಮ ಕುಟುಂಬದ ಏಕೈಕ ದುಡಿಯುವ ವ್ಯಕ್ತಿ ಮತ್ತು ಅವರ ಮಗುವಿಗೆ 5 ವರ್ಷಗಳು ಮಾತ್ರ. ಅವರು ಬದುಕಿರಬೇಕಾದ ಅವಶ್ಯಕತೆ ಹೆಚ್ಚೆಂದು ವೈದ್ಯರ ಮನಸ್ಸಿಗೆ ಅನ್ನಿಸಿತ್ತು!
ಆದರೆ ತಮ್ಮ ನಿರ್ಧಾರ ಸರಿಯೋ ತಪ್ಪೋ ಎಂಬ ತೊಳಲಾಟ ಡಾ.ಆನಂದ್ ಅವರನ್ನು ಸದಾ ಕಾಡುತ್ತಿದೆ. ಭಾವನಾತ್ಮಕವಾಗಿ ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳುವುದು ಒಬ್ಬ ವೈದ್ಯನಾದವನಿಗೆ ಬಹಳ ಕಷ್ಟದ ಕೆಲಸ. ವೈದ್ಯರಿಗೆ ಮಾನಸಿಕ ಒತ್ತಡ ಆರಂಭವಾಗುವುದೇ ಇಂಥ ಸಂಕೀರ್ಣ ಸನ್ನಿವೇಶಗಳಲ್ಲಿ.
ರಿಸ್ಕೀ ಕೆಲಸದಲ್ಲಿ ಮಾನಸಿಕ ಒತ್ತಡವೂ ಹೆಚ್ಚು:
ಕೊರೋನಾ ಸೋಂಕು ತಗಲಿದ ಕುಟುಂಬವೊಂದು ಗುಣಮುಖವಾದರೆ ಮನೆಯ ಎಲ್ಲರಿಗೂ ದೊಡ್ಡ ಆರಾಮ ಸಿಗುತ್ತದೆ. ಆದರೆ ವೈದ್ಯರಿಗೆಲ್ಲಿಯ ಆರಾಮ? ಕಳೆದ ವರ್ಷದ ಜನವರಿಯಿಂದ ಆರಂಭವಾದ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್ ಗಳು, ವೈದ್ಯ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ತ್ಯಾಗ, ಸೇವಾ ಮನೋಭಾವದಿಂದ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ದೇಶದ ಗಡಿ ಕಾಯುವ ಯೋಧರ ಹಾಗೆ ದೇಶದ ವೈದ್ಯರೂ ಕೂಡ ತಮ್ಮ ಕುಟುಂಬಗಳಿಂದ ದೂರವಿದ್ದು ರಾಷ್ಟ್ರ ಸೇವೆ ಮಾಡುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ಹಾಯಾಗಿ ಒಂದು ದಿನ ಕಳೆದು ಎಷ್ಟು ಸಮಯವಾಯಿತು ಎಂದು ಕೋವಿಡ್ ಸೇವೆಯಲ್ಲಿರುವ ವೈದ್ಯರು, ವೈದ್ಯ ಸಿಬ್ಬಂದಿಯನ್ನು ಕೇಳಿ ನೋಡಿ.
ಆಸ್ಪತ್ರೆಯಲ್ಲಿ ತಮ್ಮ ಪಾಳಿಯುದ್ದಕ್ಕೂ ಪಿಪಿಇ ಕಿಟ್ ಧರಿಸುವುದು ಸಣ್ಣ ಸವಾಲಲ್ಲ. ತಮ್ಮ ವೈದ್ಯ ಸೇವೆಯ ನಡುವೆ ರಿಲ್ಯಾಕ್ಸ್ ಆಗಲೆಂದು ಆನಂದವಾಗಿ ಚಹಾ ಕುಡಿಯುವುದು ಇರಲಿ, ಒಂದು ಕಪ್ ನೀರು ಕುಡಿಯಲೂ ಸಾಧ್ಯವಿಲ್ಲ. ಒಂದು ಸಲ ಪಿಪಿಇ ಕಿಟ್ ಧರಿಸಿದ ಬಳಿಕ ಮೂತ್ರ ವಿಸರ್ಜನೆಗೆ ಹೋಗುವುದು ಕೂಡ ಕಷ್ಟವಾಗುತ್ತದೆ. ದೇಶದ ವೈದ್ಯರು, ವೈದ್ಯ ಸಿಬ್ಬಂದಿ ಕಳೆದ ಜನವರಿಯಿಂದ ಇಂಥ ಸ್ಥಿತಿಯಲ್ಲಿ ದಿನಕ್ಕೆ 12-15 ಗಂಟೆ ನಿತ್ಯವೂ ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ!
ಕೋವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯಂತೂ ಡಾ.ವಿವೇಕ್, ಡಾ.ಆನಂದ್ ಅವರಂಥ ಅಸಂಖ್ಯ ವೈದ್ಯರಿಗೆ ಇಂಥ ಆಯ್ಕೆಯ ಸನ್ನಿವೇಶಗಳನ್ನು ಸೃಷ್ಟಿಸಿದೆ. ಆಕ್ಸಿಜನ್, ವೆಂಟಿಲೇಟರ್, ಮೂಗಿನ ಉಸಿರಾಟಕ್ಕೆ ಸಹಕರಿಸುವ ಉಪಕರಣಗಳು, ಐಸಿಯು ಬೆಡ್ ಕೊರತೆಯಿಂದಾಗಿ ಯಾರನ್ನು ಬದುಕಿಸುವುದು ಹಾಗೂ ಯಾರನ್ನು ಸಾಯಲು ಬಿಡುವುದು ಎಂಬ ಆಯ್ಕೆ ಯಾವುದಾದರೂ ವೈದ್ಯನಿಗೆ ಎದುರಾದರೆ ಅದಕ್ಕಿಂತ ಕಠಿಣ ಸನ್ನಿವೇಶ ಅವರ ಬದುಕಿನಲ್ಲಿ ಬರಲಾರದು. ಆದರೆ ಪ್ರತಿದಿನ ಇಂಥ ಆಯ್ಕೆಗಳು ಎದುರಾದಾಗ ಮಾನಸಿಕ ಸಮಸ್ಯೆ ಕಾಡುವುದು ಖಚಿತ. ಅದೃಷ್ಟವಶಾತ್ ನಮ್ಮ ವೈದ್ಯರ, ದಾದಿಯರ ಮನೋಬಲ ದೊಡ್ಡದಿದೆ. ಪುಣ್ಯಕ್ಕೆ ನೈತಿಕತೆ ಹಾಗೂ ಅನೈತಿಕತೆಗಳ ನಡುವೆ ಆಯ್ಕೆಯ ಅನಿವಾರ್ಯತೆಯಲ್ಲಿ ಒತ್ತಡಕ್ಕೆ ಸಿಲುಕಿ ಡಾ.ವಿವೇಕ್ಅವರಂತೆ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವ ದಾರಿಯ ಬಗ್ಗೆ ಅವರೆಂದೂ ಯೋಚಿಸಲಾರರು.
ಯಾವ ವೈದ್ಯನೂ ರೋಗಿ ಸಾಯುವುದನ್ನು ಬಯಸಲಾರ:
ಪ್ರತಿ ವೈದ್ಯನೂ ತನ್ನ ರೋಗಿಯನ್ನು ಬದುಕಿಸಲು ಬಯಸುತ್ತಾನೆ. ಆತ ಸಾಯುವುದನ್ನು ಆತ ಬಯಸಲಾರ. ತಾನು ಚಿಕಿತ್ಸೆ ನೀಡುತ್ತಿರುವ ಎರಡು ರೋಗಿಗಳ ನಡುವೆ ಇರುವ ಒಂದು ಐಸಿಯು ಇಲ್ಲವೇ ವೆಂಟಿಲೇಟರ್ ಅನ್ನು ಯಾರಿಗೆ ನೀಡಿ ಬದುಕಿಸಬೇಕೆಂಬ ಆಯ್ಕೆ ಮಾಡುವ ಸನ್ನಿವೇಶವು ವೈದ್ಯನ ಮನಸ್ಸಿನ ಮೇಲೆ ಅಗಾಧ ನೈತಿಕ ಒತ್ತಡದ ನೋವನ್ನು ಹೇರುತ್ತದೆ.
ಡಾ.ಆನಂದ್ ಅವರು ಇಂಥದ್ದೇ ಇನ್ನೊಂದು ಸನ್ನಿವೇಶದಲ್ಲಿ, ಇಬ್ಬರು ರೋಗಿಗಳು ಒಂದೇ ಸಮಯದಲ್ಲಿ ತೀರಾ ಅಸ್ವಸ್ಥರಾದಾಗ ಇದ್ದ ಒಂದೇ ಐಸಿಯು ಬೆಡ್ ನಲ್ಲಿ ಅವರಿಬ್ಬರನ್ನೂ ಇರಿಸಿ ಚಿಕಿತ್ಸೆ ಏರ್ಪಾಡು ಮಾಡಿದ್ದರು. ಮೂರು ನಾಲ್ಕು ಗಂಟೆಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಇನ್ನೊಂದು ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ಅವರಿಬ್ಬರ ಜೀವಕ್ಕೂ ಅಪಾಯವಾಗುವ ಪರಿಸ್ಥಿತಿ ಇತ್ತು.!ಬೆಡ್ ಗ
ಳ ಕೊರತೆಯಂಥ ಅಸಾಮಾನ್ಯ ಸಮಯದಲ್ಲಿ ಅಸಾಮಾನ್ಯ ನಿರ್ಧಾರಗಳನ್ನು ಅಲ್ಲಿರುವ ವೈದ್ಯನೇ ಮಾಡ ಬೇಕಾಗುತ್ತದೆ. ಕೆಲವೊಮ್ಮೆ ಆ ಕ್ಷಣಕ್ಕೆ ತೆಗೆದುಕೊಂಡ ನಿರ್ಧಾರ ಸರಿ ಆಗಿರಬಹುದು, ಕೆಲವೊಮ್ಮೆ ಆ ನಿರ್ಧಾರ ತಪ್ಪೂ ಆಗಬಹುದು. ಎರಡರ ನೈತಿಕ ಹೊಣೆಯನ್ನೂ ವೈದ್ಯನೇ ಹೊರಬೇಕಾಗುತ್ತದೆ. ಅದರ ಮಾನಸಿಕ ತುಮುಲವನ್ನು ಆತನೇ ಅನುಭವಿಸಬೇಕಾಗುತ್ತದೆ.
ಇಟಲಿಯಲ್ಲಿ ಬದುಕುಳಿಯುವ ಸಾಧ್ಯತೆ ಇರುವವರಿಗೆ ಅವಕಾಶ:
ಕಳೆದ ವರ್ಷ ಇಟಲಿಯಲ್ಲಿ ಕೋವಿಡ್ ಮೊದಲ ಅಲೆ ಜೋರಾಗಿದ್ದಾಗ, ಈ ಮಹಾಮಾರಿ ಯುವ, ಮಧ್ಯ ವಯಸ್ಕ, ವೃದ್ಧರ ಆಪೋಷನ ತೆಗೆದುಕೊಳ್ಳಲಾರಂಭಿಸಿತ್ತು. ಅಲ್ಲಿನ ವೈದ್ಯರೂ ಈಗ ಭಾರತದ ವೈದ್ಯರು ಎದುರಿಸುತ್ತಿರುವಂಥ ಸನ್ನಿವೇಶದಲ್ಲಿದ್ದರು. ಬೆಡ್, ವೆಂಟಿಲೇಟರ್, ಔಷಧ, ಉಪಕರಣಗಳ ಕೊರತೆಯಿಂದ ತಮ್ಮದೇ ರೋಗಿಗಳ ನಡುವೆ ಯಾರನ್ನು ಬದುಕಿಸಬೇಕು ಎಂಬ ಆಯ್ಕೆಯು ಅವರ ಮುಂದೂ ಬಂದಿತ್ತು. ಸೂಕ್ತ ಸೌಲಭ್ಯವಿದ್ದರೆ ರೋಗಿಗಳ ಪ್ರಾಣವನ್ನು ಉಳಿಸಿ ಬದುಕಿಸಬಹುದಿತ್ತೇನೋ ಎಂಬ ನೋವು ಅವರನ್ನು ಹೈರಾಣಾಗಿಸುತ್ತಿತ್ತು.
ರೋಗಿಗಳ ನಡುವೆ ದುರಂತಮಯ ಆಯ್ಕೆ ಸಂದರ್ಭ ಬಂದಾಗ ಅವರು ವಯಸ್ಸು ಮತ್ತಿತರ ವಿಷಯಗಳನ್ನು ಗಮನಿಸುತ್ತಿರಲಿಲ್ಲ. ಬದಲಿಗೆ, ತಮ್ಮ ಮುಂದಿರುವ ರೋಗಿಗಳ ಪೈಕಿ ಬದುಕುಳಿಯುವ ಅವಕಾಶ ಯಾರಿಗೆ ಹೆಚ್ಚಿದೆ ಎಂಬುದನ್ನು ಪರಿಗಣಿಸಿ, ಅಂಥ ರೋಗಿಗೆ ಅವಕಾಶ ನೀಡುತ್ತಿದ್ದರು. ಭಾರತದಲ್ಲಿ ಪರಿಸ್ಥಿತಿ ಬೇರೆ ಥರವಿದೆ.
ರೋಗಿಗಳ ಸಂಬಂಧಿಕರ ಆಕ್ರೋಶಕ್ಕೆ ತುತ್ತು:
ಇಷ್ಟೆಲ್ಲ ಮಾನಸಿಕ ಒತ್ತಡದ ನಡುವೆ ಕೆಲಸ ಮಾಡುವ ವೈದ್ಯರ ಮೇಲೆ ಕೆಲವೊಮ್ಮೆ ತಾವು ಕರ್ತವ್ಯ ನಿಭಾಯಿಸುವ ವೇಳೆ ರೋಗಿಗಳ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಕಳೆದ ಜುಲೈನಲ್ಲಿ ಕರ್ನಾಟಕದ ವೈದ್ಯರು ತಮ್ಮ ಮೇಲಾಗುತ್ತಿರುವ ಹಲ್ಲೆಗಳ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು. ಆಗ ಬೆಳಗಾವಿಯಲ್ಲಿ ಕೊರೋನಾದಿಂದ ಮೃತಪಟ್ಟ ರೋಗಿಯ ಸಂಬಂಧಿಕರು ಆಂಬ್ಯುಲೆನ್ಸ್ ಪುಡಿ ಮಾಡಿ, ಆಸ್ಪತ್ರೆ ಮೇಲೆ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ದಾದಿಯರು ಮತ್ತು ವೈದ್ಯರ ಮೇಲೆ ಕೋವಿಡ್ ರೋಗಿಯ ಸಂಬಂಧಿಕರು ಹಲ್ಲೆ ಮಾಡಿದ್ದರು.
ಇಂಥ ಸನ್ನಿವೇಶಗಳು ವೈದ್ಯರು, ದಾದಿಯರಲ್ಲಿ ಭಯ ಹಾಗೂ ಅಭದ್ರತೆಗೆ ಕಾರಣವಾಗುತ್ತದೆ. ತಮ್ಮ ಪ್ರೀತಿಪಾತ್ರರ ಅಗಲಿಕೆಯಿಂದ ಕಂಗಾಲಾಗುವ ಅವರ ಹೆತ್ತವರ, ಬಂಧುಬಾಂಧವರು, ಆಪ್ತರ ನೋವುಗಳು ವೈದ್ಯರ ಮನದಲ್ಲೂ ತಲ್ಲಣ ಉಂಟುಮಾಡುತ್ತದೆ. ಆದರೆ ತಾವು ಪ್ರಾಣದ ಹಂಗು ತೊರೆದು ರೋಗಿಗಳನ್ನು ಕಾಪಾಡಲು ಯತ್ನಿಸುವಾಗ, ಇಂಥ ದಾಳಿಗಳು ನಡೆದು ತಮ್ಮ ಪ್ರಾಣಕ್ಕೇ ತೊಂದರೆಯಾದರೆ ಯಾರು ತಾನೇ ಸೇವೆ ಮಾಡಲು ಬರುತ್ತಾರೆ? ಇಂಥ ಹಲ್ಲೆಕೋರರು ಉಳಿದ ರೋಗಿಗಳ ಪ್ರಾಣಕ್ಕೂ ಆಪತ್ತು ತರುವುದು ಖಚಿತ. ಸರಕಾರಗಳು ಇಂಥ ಸಂದರ್ಭಗಳಲ್ಲಿ ವೈದ್ಯರ, ವೈದ್ಯ ಸಿಬ್ಬಂದಿಯ ಪರ ನಿಂತರೆ ಅವರ ನೈತಿಕ ಸ್ಥೈರ್ಯ ಹೆಚ್ಚಾಗುತ್ತದೆ.
ಅದೃಷ್ಟವಶಾತ್, ಈ ವರ್ಷ ವೈದ್ಯರ ಮೇಲಿನ ಹಲ್ಲೆಗಳ ಪ್ರಕರಣಗಳು ಕಡಿಮೆಯಾಗಿವೆ. ಇದು ವೈದ್ಯರು, ವೈದ್ಯ ಸಿಬ್ಬಂದಿಗೂ ಒಂದಿಷ್ಟು ನೆಮ್ಮದಿ ತಂದಿದೆ. ಇಂಥ ಸಾಂಕ್ರಾಂಮಿಕ ರೋಗ ತಾರಕಕ್ಕೆ ಏರಿರುವ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಉಳಿದವರ ಪ್ರಾಣ ಕಾಪಾಡಲು ಹೆಣಗುವ ವೈದ್ಯರ ಮಾನಸಿಕ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.