ಒಂದೂವರೆ ವರ್ಷಗಳಿಂದ ಜಗತ್ತನ್ನು ತುದಿಗಾಲಲ್ಲಿ ನಿಲ್ಲಿಸಿದ ಕರೋನಾ ವೈರಸ್ಸಿನ ಉಗಮ ಮತ್ತು ಪ್ರಸರಣದ ಬಗ್ಗೆ ದಿನೇ ದಿನೇ ಹೊಸ ಥಿಯರಿಗಳು ಹುಟ್ಟಿಕೊಳ್ಳುತ್ತಿದ್ದು, ಹೊಸ ವಿಶ್ಲೇಷಣೆಯೊಂದು 2019ರ ಡಿಸೆಂಬರ್‌ನಲ್ಲೇ ಈ ವೈರಸ್ ಅಮೆರಿಕ ಪ್ರವೇಶಿಸಿರುವುದನ್ನು ಹೇಳುತ್ತದೆ. 2020ರ ಆರಂಭದಲ್ಲಿ ತೆಗೆದ 24,000 ಅಮೆರಿಕನ್ನರ ರಕ್ತದ ಮಾದರಿಗಳ ವಿಶ್ಲೇಷಣೆ ನಡೆಸಿದ ನಂತರ ಈ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

ಅಂದರೆ ಅಮೆರಿಕದ ಆರೋಗ್ಯ ಅಧಿಕಾರಿಗಳು ಕೋವಿಡ್ ಪ್ರಕರಣವನ್ನು ಗುರುತಿಸಿದ ಒಂದು ವಾರಕ್ಕಿಂತ ಮೊದಲೇ ವೈರಸ್ ದೇಶವನ್ನು ಪ್ರವೇಶಿಸಿತ್ತು. ಆದರೆ ಈ ವಿಶ್ಲೇಷಣೆ ಖಚಿತತೆಯ ಬಗ್ಗೆ ಕೆಲವು ತಜ್ಞರು ಸಂಶಯ ವ್ಯಕ್ತಪಡಿಸುತ್ತಾರೆ. ಆದರೆ ಫೆಡರಲ್ ಆರೋಗ್ಯ ಅಧಿಕಾರಿಗಳು ಚೀನಾದಲ್ಲಿ ಹುಟ್ಟಿದ ಅಪಾಯಕಾರಿ ಹೊಸ ವೈರಸ್ ಬಗ್ಗೆ ಜಗತ್ತಿಗೆ ಅರಿವು ಮೂಡುವ ಮೊದಲೇ ಯುಎಸ್‌ನಲ್ಲಿ ಸಣ್ಣ ಸಂಖ್ಯೆಯ ಕೋವಿಡ್-19 ಸೋಂಕುಗಳು ಸಂಭವಿಸಿರಬಹುದು ಎನ್ನುತ್ತಾರೆ ಎಂದು ‘Clinical Infectious Diseases’ ಜರ್ನಲ್‌ನ ಆನ್‌ಲೈನ್ ಎಡಿಷನ್‌ನಲ್ಲಿ ಈ ಅಧ್ಯಯನವನ್ನು ಮಂಗಳವಾರ ಪ್ರಕಟಿಸಿಲಾಗಿದೆ.
ಅಧ್ಯಯನಗಳು ಸಾಕಷ್ಟು ನಂಬಲರ್ಹವಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ನಟಾಲಿಯಾ ಥಾರ್ನ್ಬರ್ಗ್ ಹೇಳಿದ್ದಾರೆ. ನಮಗೆ ತಿಳಿದಿರುವುದಕ್ಕಿಂತ ಮುಂಚೆಯೇ ಇಲ್ಲಿ ಬಹಳ ಅಪರೂಪದ ಮತ್ತು ವಿರಳವಾದ ಪ್ರಕರಣಗಳು ಕಂಡುಬಂದವು. ಆದರೆ ಇದು ವ್ಯಾಪಕವಾಗಿರಲಿಲ್ಲ ಮತ್ತು ಫೆಬ್ರವರಿ ಅಂತ್ಯದವರೆಗೂ ವ್ಯಾಪಕವಾಗಿ ಹರಡಿರಲಿಲ್ಲ ಎನ್ನುತ್ತಾರೆ ಅವರು.

ಸಿಡಿಸಿ ನೇತೃತ್ವದ ಅಧ್ಯಯನವು 2020 ರ ಡಿಸೆಂಬರ್‌ನಲ್ಲಿ ಅಮೆರಿಕನ್ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಸಂಗ್ರಹವಾದ ರಕ್ತದಿಂದ 7,000 ಮಾದರಿಗಳನ್ನು ವಿಶ್ಲೇಷಿಸಿ ಡಿಸೆಂಬರ್ 2019 ರ ಮಧ್ಯಭಾಗದಲ್ಲಿ ಕೆಲವು ಅಮೆರಿಕನ್ನರಿಗೆ ವೈರಸ್ ಸೋಂಕು ತಗುಲಿದೆಯೆಂದು ದೃಢಪಡಿಸಿದೆ.
ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧಕರನ್ನು ಒಳಗೊಂಡ ತಂಡವು ಈ ಅಧ್ಯಯನದ ನೇತೃತ್ವವನ್ನು ವಹಿಸಿಕೊಂಡಿತ್ತು. ದೀರ್ಘಾವಧಿಯ ಅಧ್ಯಯನದ ಭಾಗವಾಗಿ 2020 ರ ಮೊದಲ ಮೂರು ತಿಂಗಳಲ್ಲಿ ಸಂಗ್ರಹಿಸಿದ್ದ 24,000 ಕ್ಕೂ ಹೆಚ್ಚು ಜನರ ರಕ್ತದ ಮಾದರಿಗಳನ್ನು ವಿಶ್ಲೇಷಿಸಲಾಗಿದೆ.

2019 ರ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ ಕರೋನವೈರಸ್ ಹೊರಹೊಮ್ಮಿತ್ತು. ಇದುವರೆಗೆ ಅಧಿಕೃತವಾಗಿ, ಯುಎಸ್‌ನ ಮೊದಲ ಸೋಂಕೆಂದು ಜನವರಿ 15 ರಂದು ವಾಷಿಂಗ್ಟನ್‌ಗೆ ವುಹಾನ್ ನಿಂದ ಮರಳಿದ ವ್ಯಕ್ತಿಯನ್ನು ಗುರುತಿಸಲಾಗುತ್ತಿತ್ತು. ಮತ್ತು ಅವರು ಜನವರಿ 19 ರಂದು ವೈದ್ಯಕೀಯ ಸಹಾಯವನ್ನು ಪಡೆದಿದ್ದರು. ಹೊಸ ಅಧ್ಯಯನವು ಅದಕ್ಕೂ ಮೊದಲೇ ಅಮೆರಿಕದಲ್ಲಿ ಸೋಂಕು ಪತ್ತೆಯಾಗಿತ್ತು ಎನ್ನುತ್ತಿದೆ. ಭಾರತದಲ್ಲಿ ಅಧಿಕೃತವಾಗಿ ಮೊದಲ ಕೇಸ್ ಪತ್ತೆಯಾದದ್ದು ಜನವರಿ 27ರಂದು. ಆದರೆ ಅಮೆರಿಕದ ಹೊಸ ಅಧ್ಯಯನದ ಫಲಿತಾಂಶವು ಭಾರತದಲ್ಲೂ ಮೊದಲ ಕೇಸಿನ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದೆ.







