ʼಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರಿಗೆ ಕರೋನಾ ವೈರಸ್ ಪಾಸಿಟಿವ್ ಧೃಡಪಟ್ಟಿದ್ದು, ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ಖಚಿತಪಡಿಸಿದ ಅವರು, ಅನೇಕರ ವಿರುದ್ಧ ಏಕವಚನದಲ್ಲೇ ಕಿಡಿಕಾರಿ ಧಿಕ್ಕಾರ ಹಾಕಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ಬಿ.ವೈ. ರಾಘವೇಂದ್ರ, ಆರೋಗ್ಯ ಸಚಿವ ಸುಧಾಕರ್, ಸೇರಿದಂತೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು ಒಂದು ವೇಳೆ ನಾನು ಸತ್ತರೆ ಅದಕ್ಕೆ ಯಡಿಯೂರಪ್ಪ, ವಿಜಯೇಂದ್ರ, ಸುಧಾಕರ್ ಮುಂತಾದ ರಾಜಕಾರಣಿಗಳೇ ಕಾರಣ ಎಂದು ಗುರು ಪ್ರಸಾದ್ ಹೇಳಿದ್ದಾರೆ.
ಒಂದು ವರ್ಷ ಟೈಮ್ ತೆಗೆದುಕೊಂಡರು ಕರೋನಾ ತಡೆಯಲು ಸಾದ್ಯವಾಗಿಲ್ಲ, ಈಗ ಮನೆ ಮನೆಗೆ ಕರೋನಾ ತಂದು ಇಟ್ಟಿದ್ದೀರಾ, ಪ್ರತಿ ಮನೆಯಲ್ಲೂ ಒಂದು ಎರಡು ಸಾವಾಗುತ್ತಿದೆ ತಡೆದುಕೊಳ್ಳಲು ಸಾದ್ಯವೇ? ಎಲ್ಲಾ ಸಾವಿಗೂ ಆರೋಗ್ಯ ಸಚಿವ ಡಾ. ಸುಧಾಕರ್ ಕಾರಣ, ಯಡಿಯೂರಪ್ಪ ವಿಜಯೇಂದ್ರ ಕಾರಣ ಎಂದು ಆರೋಪಿಸಿದ್ದಾರೆ.
ಮೋದಿ ಪ್ರಾಮಾಣಿಕ. ಆದರೆ ಬಿಜಿಪಿಯವರೆಲ್ಲ ಪ್ರಾಮಾಣಿಕರಲ್ಲ. ಜೆಡಿಎಸ್, ಕಾಂಗ್ರೆಸ್ನವರೆಲ್ಲ ಪ್ರಾಮಾಣಿಕರಲ್ಲ. ಒಂದು ವೈರಸ್ ನಿಮ್ಮನ್ನು ಆಡಿಸುತ್ತಿದೆ. ವಿಜ್ಞಾನದ ಹಿನ್ನಲೆ ಇದ್ದರೆ ಡಾ. ಸುಧಾಕರ್ ಬೆಂಗಳೂರಿನಲ್ಲಿ ಒಂದು ಲಕ್ಷ ವಾರ್ಫೇರ್ ಟೆಂಟ್ ಹಾಕಿಸಬೇಕು. ಅದರ ಬದಲು ಯಾವುದೇ ಬ್ಯುಸಿನೆಸ್ ನಿಲ್ಲಿಸಬೇಡಿ. ಒಂದೊಂದು ರೂಪಾಯಿ ದುಡಿಯಲು ಎಲ್ಲರೂ ಕಷ್ಟ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಬಹುಶಃ ಹಾರ್ಟ್ ಅಟ್ಯಾಕ್ ಆಗಿ ಈಗ್ಲೊ ಆಗ್ಲೊ ಸಾಯಬಹುದು. ನಾನು ಸಾಯೋಕು ಮುಂಚೆ ಹೇಳುತ್ತಿದ್ದೇನೆ. ನಿಯತ್ತಾಗಿ ಕೆಲಸ ಮಾಡಿ ಸ್ವಾಮಿ. ಕರೋನಾ ಬಂದರೂ ಪಾಠ ಕಲಿಯಲಿಲ್ಲ… ರಾಜಕೀಯ ಮಾಡಬೇಕು ಅಂತ ಮಾಡಬಾರದು ಸ್ವಾಮಿ. ಆಡಳಿತ ಮಾಡಬೇಕು. ರಾಜಕೀಯ ಬಿಸಿನೆಸ್ ಅಲ್ಲ. ಅಯ್ಯೋ ರಾಜಕಾರಣಿಗಳಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದುಡ್ಡು ಮುಖ್ಯವಲ್ಲ, ಮನುಷ್ಯ ಮುಖ್ಯ, ಮೆಡಿಕಲ್ ಮಾಫಿಯಾ ಮಾಡಬೇಡಿ. ಹಾನೆಸ್ಟ್ ಆಗಿ ದುಡಿಯುವವರ ಶಾಪಗಳು ನಿಮ್ಮನ್ನು ಸುಮ್ಮನೆ ಬಿಡಲಾರದು ಎಂದು ಅವರು ಎಚ್ಚರಿಸಿದ್ದಾರೆ.