ಕರೋನಾ ಮೂರನೇ ಅಲೆ ಕುರಿತು ಬಿಬಿಎಂಪಿ ಪೂರ್ವ ತಯಾರಿ ನಡೆಸಿಕೊಳ್ಳುತ್ತಿದೆ. ಈ ಕುರಿತು ಸಭೆ ನಡೆಸಿರುವ ಬಿಬಿಎಂಪಿ ಮೂರನೇ ಅಲೆಯನ್ನು ಹೇಗೆ ತಡೆಯಬಹುದು ಹಾಗೂ, ಮೂರನೇ ಅಲೆಯನ್ನು ಎದುರಿಸಲು ಹೇಗೆ ಸಜ್ಜುಗೊಳ್ಳಬೇಕು ಎಂದು ಚಿಂತಿಸುತ್ತಿದೆ.
ಮೂರನೆಯ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುವ ಸಾಧ್ಯತೆ ಇದೆ ಎಂಬ ತಜ್ಞರ ಹೇಳಿಕೆಯನ್ನು ಗಂಭೀರವಾಗಿಯೇ ಪರಿಗಣಿಸಿರುವ ಬಿಬಿಎಂಪಿ, ಪೀಡಿಯಾಟ್ರಿಕ್ ಸಲಹಾ ಸಮಿತಿ (ಮಕ್ಕಳ ತಜ್ಞರ ಸಲಹಾ ಸಮಿತಿ) ರಚನೆ ಮಾಡಿದೆ.

ಒಟ್ಟು ಹನ್ನೆರಡು ಮಕ್ಕಳ ರೋಗ ತಜ್ಞರನ್ನು ಒಳಗೊಂಡಿರುವ ವಿಶೇಷ ಸಮಿತಿ ಇದಾಗಿದ್ದು, ಮೂರನೆಯ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗದಂತೆ ಮುನ್ನೆಚ್ಚರಿಕಾ ಸಲಹೆಗಳನ್ನು ಈ ಸಮಿತಿಯಿಂದ ಬಿಬಿಎಂಪಿ ಪಡೆಯಲಿದೆ.
ಈ ಸಮಿತಿಯ ನೇತೃತ್ವವನ್ನು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ ರಂದೀಪ್ ನಿರ್ವಹಿಸಲಿದ್ದು, ನಗರದ ಪ್ರಮುಖ ಹನ್ನೆರಡು ಮಕ್ಕಳ ತಜ್ಞರು ಸಮಿತಿಯಲ್ಲಿರಲಿದ್ದಾರೆ.
ಬಿಬಿಎಂಪಿ ಪೀಡಿಯಾಟ್ರಿಕ್ ಸಲಹಾ ಸಮಿತಿಯಲ್ಲಿರುವ ತಜ್ಞರು
1. ಡಾ. ಸಂಜಯ್, ನಿರ್ದೆಶಕರು, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
2. ಡಾ. ಮಲ್ಲಿಕಾರ್ಜುನ್, ಅಧ್ಯಕ್ಷರು, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್
3. ಡಾ. ರಕ್ಷಯ್ ಶೆಟ್ಟಿ, ಲೀಡ್ ಪೀಡಿಯಾಟ್ರಿಕ್ಸ್ ಇಂಟೆನ್ಸಿವಿಸ್ಟ್, ರೈನ್ಬೊ ಮಕ್ಕಳ ಆಸ್ಪತ್ರೆ
4. ಡಾ. ನರೇಶ್.ಪಿ, ಮಕ್ಕಳ ತಜ್ಞರ ಸಲಹೆಗಾರರು, ಮಣಿಪಾಲ್ ಆಸ್ಪತ್ರೆ
5. ಡಾ. ವಿಶ್ವನಾಥ್ ಕಾಮೋಜಿ, ಶಿಶು ತಜ್ಞರು, ಕೊಲಂಬಿಯಾ ಆಸ್ಪತ್ರೆ
6. ಡಾ. ಬಿ.ಕೆ. ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ
7. ಡಾ. ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ ( ಕ್ಲಿನಿಕಲ್) ಬಿಬಿಎಂಪಿ
8. ಡಾ. ಆನಂದ್, ಮಕ್ಕಳ ತಜ್ಙರು, ನೋಡಲ್ ಅಧಿಕಾರಿಗಳು, ಮಕ್ಕಳ ಆರೋಗ್ಯ, ಬಿಬಿಎಂಪಿ
9. ಡಾ. ಸರಸ್ವತಿ, ಮಕ್ಕಳ ತಜ್ಞರು ಹಾಗೂ ಆರೋಗ್ಯಾಧಿಕಾರಿ, ಬಿಬಿಎಂಪಿ
10. ಡಾ. ಲಲಿತಾ, ಮಕ್ಕಳ ತಜ್ಞರು ಹಾಗೂ ವಲಯ ಆರೋಗ್ಯಾಧಿಕಾರಿ
11. ಡಾ. ಭಾರತಿ, ಮಕ್ಕಳ ತಜ್ಞರು, ಶ್ರೀರಾಂಪುರ ರೆಫರಲ್ ಆಸ್ಪತ್ರೆ
12. ಡಾ. ರಮೇಶ್, ಮಕ್ಕಳ ತಜ್ಞರು, ಹಲಸೂರು ರೆಫರಲ್ ಆಸ್ಪತ್ರೆ
ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪೀಡಿಯಾಟ್ರಿಕ್ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಿದ್ದಾರೆ. ಮಲ್ಲೇಶ್ವರಂ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಪ್ರಮುಖವಾಗಿ ಪೀಡಿಯಾಟ್ರಿಕ್ ಐಸಿಯುಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು.
ಎರಡನೇ ಅಲೆಯಲ್ಲಿ ವಯಸ್ಕ ಕೋವಿಡ್ ರೋಗಿಗಳಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಆಮ್ಲಜನಕದ ಹೆಚ್ಚಿನ ಪೂರೈಕೆಗೆ ಸರ್ಕಾರವನ್ನು ಮನವಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ.





